ಒಲಿಂಪಿಕ್ ದೀಪ ಬೆಳಗುವ ಕಾರ್ಯಕ್ರಮಕ್ಕೆ ಕರೆ ತಂದ ಚಿರತೆಯನ್ನು ಗುಂಡಿಟ್ಟು ಕೊಂದರು !
ಸಾವೋ ಪೌಲೋ, ಜೂ.22: ಒಲಿಂಪಿಕ್ ದೀಪ ಬೆಳಗುವ ಸಮಾರಂಭಕ್ಕೆಂದು ಕರೆತರಲಾಗಿದ್ದ ಚಿರತೆಯೊಂದು ಕಾರ್ಯಕ್ರಮ ಮುಗಿದ ಕೆಲವೇ ಹೊತ್ತಿನಲ್ಲಿ ತನ್ನ ನಿಯಂತ್ರಕನ ಕೈಯ್ಯಿಂದ ತಪ್ಪಿಸಿಕೊಂಡಿದ್ದನ್ನು ಕಂಡ ಸೈನಿಕನೊಬ್ಬ ಅದಕ್ಕೆ ಗುಂಡಿಟ್ಟು ಸಾಯಿಸಿದ್ದಾನೆ.
ಘಟನೆಯು ಮನೌಸ್ ನಗರದಿಂದ ಸೋಮವಾರ ವರದಿಯಾಗಿದೆ. ಮಿಲಿಟರಿ ತರಬೇತಿ ಕೇಂದ್ರ ಹತ್ತಿರವಿರುವ ಪ್ರಾಣಿಸಂಗ್ರಹಾಲಯದಲ್ಲಿ ಈ ಚಿರತೆಯನ್ನು ಕೊಲ್ಲಲಾಯಿತು.
ಚಿರತೆ ತಪ್ಪಿಸಿಕೊಂಡ ಕೂಡಲೇ ಅದಕ್ಕೆ ಮತ್ತು ಬರಿಸುವ ಚುಚ್ಚುಮದ್ದನ್ನು ನೀಡಲಾಗಿತ್ತಾದರೂ ಅದು ಸೈನಿಕನ ಬಳಿ ಧಾವಿಸಿ ಬಂದಾಗ ಆತ ತನ್ನ ಕೈಯ್ಯಲ್ಲಿದ್ದ ಪಿಸ್ತೂಲಿನಿಂದ ಅದರತ್ತ ಗುಂಡು ಹಾರಿಸಿದನೆಂದು ಸೇನೆ ಹೇಳಿಕೆ ನೀಡಿದೆ.
‘‘ಸರಪಳಿ ಬಿಗಿದಿದ್ದ ಪ್ರಾಣಿಯೊಂದನ್ನು ಶಾಂತಿ ಹಾಗೂ ಏಕತೆಯ ದ್ಯೋತಕವಾಗಿರುವ ಒಲಿಂಪಿಕ್ ದೀಪ ಬೆಳಗಿಸುವ ಸಮಾರಂಭದಲ್ಲಿ ಅನುಮತಿಸಿದ್ದು ತಪ್ಪು. ಇದು ನಮ್ಮ ನಂಬಿಕೆ ಹಾಗೂ ಮೌಲ್ಯಗಳಿಗೆ ವಿರುದ್ಧವಾಗಿದೆ,’’ಎಂದು ರಿಯೋ ಒಲಿಂಪಿಕ್ಸ್ 2016 ಆಯೋಜನಾ ಸಮಿತಿ ಹೇಳಿಕೆ ನೀಡಿದೆ. ಇಂತಹ ಘಟನೆಗಳು ಮತ್ತೆ ಮರುಕಳಿಸುವುದಿಲ್ಲವೆಂಬ ಭರವಸೆ ನೀಡುತ್ತೇವೆ, ಎಂದೂ ಅದು ಹೇಳಿದೆ.
ಹಳದಿ ಬಣ್ಣದ ಕಾರ್ಟೂನ್ ಚಿರತೆ ಗಿಂಗಾ, ಬ್ರೆಜಿಲ್ ಒಲಿಂಪಿಕ್ ತಂಡದ ಲಾಂಛನವಾಗಿದೆ.