ಭಜ್ಜಿ ತಿನ್ನಲು 4 ಲಕ್ಷ ರೂ. ತೆತ್ತ ಉದ್ಯೋಗಿ!

Update: 2016-06-22 11:33 GMT

ಅಹ್ಮದಾಬಾದ್, ಜೂ.22: ಖಾಸಗಿ ಕಂಪೆನಿಯ ಉದ್ಯೋಗಿಯೋರ್ವ ಭಜ್ಜಿ ತಿನ್ನಲು ಹೋಗಿ 4 ಲಕ್ಷ ರೂ. ಕಳೆದುಕೊಂಡಿದ್ದಾರೆ. ದರಿಯಾಪುರದ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿದೆ.

ತಾನು ಭಜ್ಜಿ ತಿನ್ನಲು ಹೊಟೇಲ್‌ಗೆ ತೆರಳಿದ್ದಾಗ ತನ್ನ ದ್ವಿಚಕ್ರ ವಾಹನದಲ್ಲಿ ಇಟ್ಟಿದ್ದ 4 ಲಕ್ಷ ರೂ. ಕಳವು ಆಗಿದೆ ಎಂದು 67ರ ವರ್ಷದ ಪ್ರಹ್ಹಾದ್ ಪಟೇಲ್ ದೂರಿನಲ್ಲಿ ತಿಳಿಸಿದ್ದಾರೆ.

ಮಾಧವಪುರದಲ್ಲಿ ಅಲ್ಯೂಮಿನಿಯಂ ಸೆಕ್ಷನ್‌ನಲ್ಲಿ ಕೆಲಸ ಮಾಡುತ್ತಿರುವ ಪಟೇಲ್ ಜೂ.3 ರಂದು ದರಿಯಾಪುರದ ಕೊರಿಯರ್ ಕಂಪೆನಿಯಿಂದ 4 ಲಕ್ಷ ರೂ. ಸಂಗ್ರಹಿಸಿದ್ದಾರೆ. ಕಚೇರಿಗೆ ಬರುವ ಮಾರ್ಗ ಮಧ್ಯದಲ್ಲಿ ಭಜ್ಜಿ ತಿನ್ನಲು ಹೊಟೇಲ್‌ಗೆ ತೆರಳಿದ್ದಾರೆ. ಈ ವೇಳೆ ಅವರು ನಿಲ್ಲಿಸಿದ್ದ ದ್ವಿಚಕ್ರ ವಾಹನದಿಂದ ಹಣವನ್ನು ಲೂಟಿ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಪಟೇಲ್ ಕಚೇರಿಗೆ ತೆರಳಿದ ಬಳಿಕವೇ ಹಣ ಕಳವು ಆಗಿರುವುದು ಗಮನಕ್ಕೆ ಬಂದಿದೆ. ತಕ್ಷಣವೇ ಮಾಲಕರಲ್ಲಿ ವಿಷಯ ತಿಳಿಸುತ್ತಾರೆ. ಆರಂಭದಲ್ಲಿ ಪಟೇಲ್ ಹೇಳಿದ ಕತೆಯನ್ನು ಬಾಸ್ ನಂಬಲಿಲ್ಲ. ಪಟೇಲ್ ವಿವರವಾಗಿ ತಿಳಿಸಿದ ಬಳಿಕ ಮಾಲಕರಿಗೆ ನಂಬಿಕೆ ಬಂತು. ದುಬೈಗೆ ಹೋಗುವ ಗಡಿಬಿಡಿಯಲ್ಲಿದ್ದ ಕಂಪೆನಿಯ ಮಾಲಿಕ ತಕ್ಷಣವೇ ದೂರನ್ನು ದಾಖಲಿಸಿರಲಿಲ್ಲ. ಕಂಪೆನಿಯು ಸೋಮವಾರ ದೂರು ದಾಖಲಿಸಿದೆ ಎಂದು ಪೊಲೀಸರು ತಿಳಿಸಿದರು.

ನಾವು ಪ್ರಕರಣದ ತನಿಖೆ ನಡೆಸಲಿದ್ದೇವೆ. ಘಟನೆ ಜೂ.3ರಂದು ನಡೆದಿದೆ. ಮಾಲಕರು ದುಬೈಗೆ ಹೋದ ಕಾರಣ ದೂರು ದಾಖಲಿಸಲು ವಿಳಂಬವಾಗಿದೆ. ಕ್ರೈಮ್ ಬ್ರಾಂಚ್ ಇಂತಹ ಪ್ರಕರಣಕ್ಕೆ ಸಂಬಂಧಿಸಿ ಕೆಲವರನ್ನು ಬಂಧಿಸಿದ್ದು, ಅವರನ್ನು ತನಿಖೆ ನಡೆಸಲಾಗುತ್ತದೆ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಬಿಆರ್ ಜಡೇಜ ಹೇಳಿದ್ದಾರೆ.

....

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News