×
Ad

ಯೋಗ ದಿನಾಚರಣೆಯಲ್ಲಿ ಸಂಸ್ಕೃತದಲ್ಲಿ 'ಈಶ್ವರ ಪ್ರಾರ್ಥನೆ'

Update: 2016-06-22 17:40 IST

ತಿರುವನಂತಪುರ,ಜೂ.22: ಕೇರಳ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಅವರು ಮಂಗಳವಾರ ಇಲ್ಲಿಯ ಸೆಂಟ್ರಲ್ ಸ್ಟೇಡಿಯಮ್‌ನಲ್ಲಿ ನಡೆದ ವಿಶ್ವ ಯೋಗ ದಿನಾಚರಣೆಯ ಕಾರ್ಯಕ್ರಮ ಪಟ್ಟಿಯಲ್ಲಿ ಸಂಸ್ಕೃತ ಶ್ಲೋಕ ಪಠಣವನ್ನು ಸೇರಿಸಿದ್ದಕ್ಕಾಗಿ ಸಂಬಂಧಿತ ಅಧಿಕಾರಿಗಳಿಂದ ವಿವರಣೆಯನ್ನು ಕೋರಿದ್ದರೆನ್ನಲಾಗಿದೆ.

ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದ ಸಚಿವೆ ಕಾರ್ಯಕ್ರಮದ ಆರಂಭದಲ್ಲಿ ಮಾಡಲಾದ ‘ಈಶ್ವರ ಪ್ರಾರ್ಥನೆ’ಯ ಕುರಿತಂತೆ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು.

ಯೋಗ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದ 750ಕ್ಕೂ ಅಧಿಕ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು,ಯೋಗ ಯಾವುದೇ ಧರ್ಮದ ಭಾಗವಲ್ಲ ಮತ್ತು ಪ್ರತಿಯೊಬ್ಬರೂ ಅದನ್ನು ಅಭ್ಯಾಸ ಮಾಡಬಹುದಾಗಿದೆ. ನಮ್ಮದು ಜಾತ್ಯತೀತ ದೇಶವಾಗಿರುವುದರಿಂದ ಯೋಗವೂ ಜಾತ್ಯತೀತವಾಗಿರಬೇಕು. ಯೋಗವನ್ನು ಆರಂಭಿಸುವ ಮುನ್ನ ಆಸ್ತಿಕರು ತಮ್ಮ ಇಷ್ಟದೈವವನ್ನು ಪ್ರಾರ್ಥಿಸಬಹುದು ಮತ್ತು ನಾಸ್ತಿಕರು ಯೋಗದ ಮೇಲೆ ಗಮನವನ್ನು ಕೇಂದ್ರೀಕರಿಸಲು ತಮ್ಮದೇ ವಿಧಾನಗಳನ್ನು ಹೊಂದಿದ್ದಾರೆ ಎಂದು ಹೇಳಿದ್ದರು.

ಉದ್ಘಾಟನಾ ಸಮಾರಂಭದ ಬಳಿಕ ಶೈಲಜಾ ಅಧಿಕಾರಿಗಳಿಂದ ವಿವರಣೆಯನ್ನು ಕೋರಿದ್ದರೆನ್ನಲಾಗಿದ್ದು, ವಿಶ್ವ ಯೋಗ ದಿನಾಚರಣೆಯ ಸಂಬಂಧ ಕೇಂದ್ರವು ಹೊರಡಿಸಿದ ಸಾಮಾನ್ಯ ಯೋಗ ಶಿಷ್ಟಾಚಾರದ ಅನ್ವಯ ತಾವು ಕಾರ್ಯಕ್ರಮವನ್ನು ರೂಪಿಸಿದ್ದಾಗಿ ಅಧಿಕಾರಿಗಳು ಸಮಜಾಯಿಷಿ ನೀಡಿದ್ದರು.

ಶೈಲಜಾರ ಕ್ರಮವನ್ನು ಖಂಡಿಸಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಕುಮ್ಮಣನ್ ಅವರು, ಪ್ರಾರ್ಥನೆಯ ಬಗ್ಗೆ ತನ್ನ ಅಸಹಿಷ್ಣುತೆಯನ್ನು ಪ್ರದರ್ಶಿಸುವ ಮೂಲಕ ಸಚಿವೆ ಯಾರನ್ನು ತುಷ್ಟೀಕರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಯೋಗದ ಬಗ್ಗೆ ಸಮಗ್ರವಾಗಿ ತಿಳಿದುಕೊಳ್ಳಲು ಪ್ರಯತ್ನಿಸುವಂತೆ ಅವರು ಸಚಿವೆಯನ್ನು ಆಗ್ರಹಿಸಿದ್ದಾರೆ.

ಇದೊಂದು ದುರದೃಷ್ಟಕರ ಘಟನೆ ಎಂದು ಬಣ್ಣಿಸಿರುವ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರು,ಯಾವುದೇ ಶುಭ ಕಾರ್ಯಕ್ರಮವನ್ನು ಪ್ರಾರ್ಥನೆಯೊಂದಿಗೆ ಉದ್ಘಾಟಿಸುವುದು ಸಂಪ್ರದಾಯವಾಗಿದೆ ಎಂದು ಒತ್ತಿ ಹೇಳಿದ್ದಾರೆ. ಯೋಗವು ಭಾರತೀಯ ಸಂಸ್ಕೃತಿಯ ಅಖಂಡ ಭಾಗವಾಗಿದ್ದು,ಅದಕ್ಕೂ ಆಸ್ತಿಕತೆಗೆ ಮತ್ತು ನಾಸ್ತಿಕತೆಗೆ ಯಾವುದೇ ಸಂಬಂಧವಿಲ್ಲ. ಇಡೀ ಪ್ರಕರಣಕ್ಕೆ ಅಸಹಿಷ್ಣುತೆಯ ಬಣ್ಣ ಹಚ್ಚುವ ಅಗತ್ಯವಿರಲಿಲ್ಲ ಎಂದು ಅವರು ಹೇಳಿದರು.

ವಿವಾದ ಸೃಷ್ಟಿಯಾದ ಹಿನ್ನೆಲೆಯಲ್ಲಿ ಶೈಲಜಾ ಅವರು ಶ್ಲೋಕ ಪಠಣವನ್ನು ಕಾರ್ಯಕ್ರಮದಲ್ಲಿ ಸೇರಿಸಿದ್ದಕ್ಕಾಗಿ ತಾನು ಅಧಿಕಾರಿಗಳಿಂದ ವಿವರಣೆ ಕೋರಿದ್ದೆ ಎಂಬ ವರದಿಯನ್ನು ತಳ್ಳಿಹಾಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News