ಅಮೆರಿಕದಿಂದ ಗಸ್ತು ಡ್ರೋನ್‌ಗಳ ಖರೀದಿಗೆ ಮುಂದಾದ ಭಾರತ
ವಾಶಿಂಗ್ಟನ್, ಜೂ. 23: ಹಿಂದೂ ಮಹಾ ಸಾಗರದಲ್ಲಿರುವ ತನ್ನ ಸಾಗರದ ಸೊತ್ತುಗಳ ಮೇಲೆ ನಿಗಾ ಇಡುವುದಕ್ಕಾಗಿ ಹಾಗೂ ಅವುಗಳ ರಕ್ಷಣೆಗಾಗಿ ಗಸ್ತು ಡ್ರೋನ್‌ಗಳ ಖರೀದಿಯಲ್ಲಿ ಆಸಕ್ತಿ ವ್ಯಕ್ತಪಡಿಸಿ ಭಾರತ ಅಮೆರಿಕಕ್ಕೆ ಕೋರಿಕೆ ಪತ್ರ (ಎಲ್‌ಒಆರ್)ವೊಂದನ್ನು ಕಳುಹಿಸಿದೆ.
ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ವ್ಯವಸ್ಥೆ (ಎಂಟಿಸಿಆರ್)ಗೆ ಭಾರತ ಸೇರ್ಪಡೆಗೊಂಡ ಹಾಗೂ ‘ಪ್ರಮುಖ ರಕ್ಷಣಾ ಭಾಗೀದಾರ’ ಎಂಬುದಾಗಿ ಅಮೆರಿಕದಿಂದ ಮಾನ್ಯತೆ ಪಡೆದ ಕೆಲವೇ ದಿನಗಳಲ್ಲಿ ಭಾರತವು ಕೋರಿಕೆ ಪತ್ರವನ್ನು ಕಳೆದ ವಾರ ಕಳುಹಿಸಿದೆ.
ಮುಖ್ಯವಾಗಿ ಹಿಂದೂ ಮಹಾ ಸಾಗರದಲ್ಲಿರುವ ದೇಶದ ಮಹತ್ವದ ಸಾಗರ ಸೊತ್ತುಗಳನ್ನು ರಕ್ಷಿಸುವ ಹಾಗೂ ಮುಂಬೈ ಭಯೋತ್ಪಾದಕ ದಾಳಿಯಂಥ ಯಾವುದೇ ಅತಿಕ್ರಮಣವನ್ನು ತಡೆಯುವ ನಿಟ್ಟಿನಲ್ಲಿ ಮೋದಿ ಸರಕಾರ ಕ್ಷಿಪ್ರ ಕ್ರಮಗಳನ್ನು ತೆಗೆದುಕೊಳ್ಳಲು ಉದ್ದೇಶಿಸಿದೆ.
ಬಹೂಪಯೋಗಿ ಹಾಗೂ ಸಾಗರ ತೀರದಲ್ಲಿ ಗಸ್ತು ನಡೆಸುವ ಅತ್ಯಾಧುನಿಕ ಪ್ರಡೇಟರ್ ಗಾರ್ಡಿಯನ್ ಯುಎವಿಗಳನ್ನು ಜನರಲ್ ಅಟೋಮಿಕ್ಸ್‌ನಿಂದ ಖರೀದಿಸುವ ಇಂಗಿತವನ್ನು ಪತ್ರ ವ್ಯಕ್ತಪಡಿಸಿದೆ ಎಂದು ಮೂಲಗಳು ತಿಳಿಸಿವೆ.
ಈ ಉಪಕರಣಗಳು ಅತ್ಯಂತ ಎತ್ತರದಲ್ಲಿ ವಿಸ್ತೃತ ಪ್ರದೇಶದ ಮೇಲೆ ನಿಗಾ ಇಡುವ ಸುದೀರ್ಘ ಕಾಲ ಕಾರ್ಯಾಚರಣೆ ನಡೆಸುವ ಐಎಸ್‌ಆರ್ ಸಾಮರ್ಥ್ಯವನ್ನು ಹೊಂದಿವೆ.
50,000 ಅಡಿಗಿಂತಲೂ ಹೆಚ್ಚಿನ ಎತ್ತರದಲ್ಲಿ ಹಾರುವ ಡ್ರೋನ್‌ಗಳು 24 ಗಂಟೆಗಳಿಗೂ ಅಧಿಕ ಅವಧಿ ನಿರಂತರವಾಗಿ ಹಾರುತ್ತಾ ಫುಟ್ಬಾಲೊಂದರಷ್ಟು ಸಣ್ಣ ಗಾತ್ರದ ವಸ್ತುಗಳ ಮೇಲೂ ನಿಗಾ ಇಡುತ್ತವೆ ಎಂದು ಅವು ಹೇಳಿವೆ.
ಅಮೆರಿಕದಿಂದ ಈ ಡ್ರೋನ್‌ಗಳನ್ನು ಖರೀದಿಸಲು ಭಾರತ ಈ ಹಿಂದೆಯೂ ಆಸಕ್ತಿ ತೋರಿಸಿತ್ತು. ಆದರೆ, ಭಾರತ ಎಂಟಿಸಿಆರ್‌ನ ಸದಸ್ಯನಾಗಿಲ್ಲದ ಕಾರಣ ಭಾರತದ ಅರ್ಜಿಯನ್ನು ಅಮೆರಿಕ ಮಾನ್ಯ ಮಾಡಿರಲಿಲ್ಲ.
ಈ ತಿಂಗಳ ಆರಂಭದಲ್ಲಿ ಅಮೆರಿಕಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಜೊತೆ ಡ್ರೋನ್ ಖರೀದಿ ವಿಷಯದಲ್ಲಿ ಮಾತುಕತೆ ನಡೆಸಿದ್ದರು. ಆ ಸಂದರ್ಭದಲ್ಲಿ ಒಬಾಮ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದರು.