×
Ad

ಆರೆಸ್ಸೆಸ್‌ನಿಂದ ಬೃಹತ್ ಇಫ್ತಾರ್ ಕೂಟ

Update: 2016-06-22 23:00 IST

ಹೊಸದಿಲ್ಲಿ,ಜೂ.21: ಆರೆಸ್ಸೆಸ್ ಪೋಷಿತ ಮುಸ್ಲಿಮ್ ರಾಷ್ಟ್ರೀಯ ಮಂಚ್(ಎಂಆರ್‌ಎಂ) ತನ್ನ ‘ಮುಸ್ಲಿಮ್ ವಿರೋಧಿ’ ಹಣೆಪಟ್ಟಿ ಯನ್ನು ಕಳಚಿಕೊಳ್ಳುವ ಮತ್ತು ಶಾಂತಿ ಹಾಗೂ ಸೌಹಾರ್ದದ ಸಂದೇಶವನ್ನು ಹರಡುವ ಉದ್ದೇಶದೊಡನೆ ಮತ್ತು ದೇಶವನ್ನು ‘ದಂಗೆ ಮುಕ್ತ’ವನ್ನಾಗಿಸಲು ಜುಲೈ 2ರಂದು ಬೃಹತ್ ಇಫ್ತಾರ್ ಕೂಟವನ್ನು ಏರ್ಪಡಿಸಿದೆ. ಇಸ್ಲಾಮಿಕ್ ಮತ್ತು ಇಸ್ಲಾಮೇತರ ರಾಷ್ಟ್ರಗಳ ರಾಯಭಾರಿಗಳಿಗೆ ಅದು ಆಮಂತ್ರಣಗಳನ್ನು ರವಾನಿಸಿದೆ. ಸಂಸತ್ ಭವನ ಸಂಕೀರ್ಣ ದಲ್ಲಿ ನಡೆಯಲಿರುವ ಇಫ್ತಾರ್ ಕೂಟಕ್ಕೆ ಆಮಂತ್ರಿತರಲ್ಲಿ ಪಾಕಿಸ್ತಾನದ ರಾಯ ಭಾರಿಯೂ ಸೇರಿದ್ದಾರೆ.

ಎಂಆರ್‌ಎಂನ ಈ ಬಾರಿಯ ಇಫ್ತಾರ್ ಕೂಟ ಬೃಹತ್ ಕಾರ್ಯಕ್ರಮವಾಗಿರಲಿದೆ. ದೇಶಾದ್ಯಂತ ಸಣ್ಣ ಪ್ರಮಾಣದಲ್ಲಿ ಇಫ್ತಾರ್ ಕೂಟಗಳನ್ನು ಆಯೋಜಿಸುವಂತೆ ಅದು ತನ್ನ ಸದಸ್ಯರಿಗೂ ಸೂಚಿಸಿದೆ.

 2002ರಲ್ಲಿ ಆರೆಸ್ಸೆಸ್‌ನ ಆಗಿನ ಮುಖ್ಯಸ್ಥ ಕೆ.ಎಸ್.ಸುದರ್ಶನ ಅವರು ಹಿಂದೂಗಳು ಮತ್ತು ಮುಸ್ಲಿಮರನ್ನು ಒಗ್ಗೂಡಿಸುವ ಉದ್ದೇಶದಿಂದ ಕೈಗೊಂಡಿದ್ದ ಉಪಕ್ರಮವಾಗಿ ಎಂಆರ್‌ಎಂ ಅಸ್ತಿತ್ವಕ್ಕೆ ಬಂದಿತ್ತು. ಭಾರತೀಯತೆ ಬಗ್ಗೆ ವಿಶ್ವಕ್ಕೆ ತಿಳಿಸುವುದು ಮತ್ತು ಎಲ್ಲ ಸಮುದಾಯಗಳ ಜನರು ಶಾಂತಿ ಮತ್ತು ಸೌಹಾರ್ದತೆಯಿಂದ ಬದುಕಲು ನೆರವಾಗುವುದು ಇಫ್ತಾರ್ ಕೂಟದ ಉದ್ದೇಶ ವಾಗಿದೆ. ಭಾರತವು ಮುಸ್ಲಿಮ್ ಜಗತ್ತಿಗೆ ಶಾಂತಿಯ ಆಶಾಕಿರಣವಾಗಿದೆ ಎಂದು ಆರೆಸ್ಸೆಸ್ ನಾಯಕ ಹಾಗೂ ಎಂಆರ್‌ಎಂನ ಪೋಷಕ ಇಂದ್ರೇಶ್ ಕುಮಾರ್ ಹೇಳಿದರು.
ಪ್ರೀತಿ-ವಿಶ್ವಾಸ ಮನೆಯಿಂದ ಆರಂಭ ಗೊಳ್ಳುತ್ತದೆ. ಎಲ್ಲರೂ ಸೌಹಾರ್ದದಲ್ಲಿ ಬದುಕಬೇಕು ಮತ್ತು ಭಯೋತ್ಪಾದನೆ ಸೇರಿದಂತೆ ಭಾರತ ಮತ್ತು ವಿಶ್ವವನ್ನು ಹಿಂಸೆಯಿಂದ ಮುಕ್ತಗೊಳಿಸಬೇಕು ಎಂದು ಅಲ್ಪಸಂಖ್ಯಾತ ಸಮುದಾಯದವರಿಗೆ ತನ್ನ ಮನವಿಯಲ್ಲಿ ಅವರು ಹೇಳಿದ್ದಾರೆ.
 ವಾಯು ಮಾಲಿನ್ಯವನ್ನು ತಡೆಯಲು ಸಸಿಗಳನ್ನು ನೆಡುವಂತೆ ಮತ್ತು ತುಳಸಿಯ ಗಿಡವನ್ನು ಮನೆಗಳಲ್ಲಿ ಬೆಳೆಸಿ ಆರಾಧಿಸುವಂತೆ ತಾನು ಸಮುದಾಯದ ಸದಸ್ಯರಿಗೆ ಆಗ್ರಹಿಸಿದ್ದೇನೆ ಎಂದು ಹೇಳಿರುವ ಕುಮಾರ್, ಪವಿತ್ರ ಕುರ್‌ಆನ್ ನಲ್ಲಿ ತುಳಸಿಯನ್ನು ರೆಹಾನ್ ಎಂದು ಉಲ್ಲೇಖಿಸಲಾಗಿದ್ದು ಅದನ್ನು ‘ಸ್ವರ್ಗಲೋಕದ ಸಸ್ಯ’ಎಂದೂ ಬಣ್ಣಿಸಲಾಗಿದೆ ಎಂದಿದ್ದಾರೆ.
ಮುಸ್ಲಿಮ್ ರಾಷ್ಟ್ರೀಯ ಮಂಚ್ ಈ ಹಿಂದೆಯೂ ದಿಲ್ಲಿಯಲ್ಲಿ ಕೆಲವು ರಾಜತಾಂತ್ರಿಕರಿಗೆ ಇಫ್ತಾರ್ ಕೂಟವನ್ನು ಆಯೋಜಿಸಿತ್ತು, ಆದರೆ ಈ ಬಾರಿ ದೊಡ್ಡ ಪ್ರಮಾಣದಲ್ಲಿ ಕೂಟವನ್ನು ಹಮ್ಮಿಕೊಳ್ಳಲಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News