ವಿಕಾಸ್ ಕೃಷ್ಣನ್ ಕ್ವಾರ್ಟರ್‌ಫೈನಲ್‌ಗೆ

Update: 2016-06-22 17:59 GMT

ಬಾಕು(ಅಝೆಬೈಜಾನ್), ಜೂ.22: ಈ ಹಿಂದೆ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ವಿಜೇತ ಬಾಕ್ಸರ್ ವಿಕಾಸ್ ಕೃಷ್ಣನ್(75 ಕೆ.ಜಿ.) ವಿಶ್ವ ಒಲಿಂಪಿಕ್ಸ್ ಕ್ವಾಲಿಫೈಯರ್ ಟೂರ್ನಮೆಂಟ್‌ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ ಮೂರನೆ ಭಾರತೀಯ ಬಾಕ್ಸರ್ ಎನಿಸಿಕೊಂಡಿದ್ದಾರೆ. ವಿಕಾಸ್‌ಗೆ ಆಗಸ್ಟ್‌ನಲ್ಲಿ ನಡೆಯಲಿರುವ ರಿಯೋ ಗೇಮ್ಸ್‌ನಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಇನ್ನೊಂದೇ ಮೆಟ್ಟಿಲು ಏರಬೇಕಾಗಿದೆ.

ದ್ವಿತೀಯ ಶ್ರೇಯಾಂಕದ ವಿಕಾಸ್ ಮಂಗಳವಾರ ರಾತ್ರಿ ನಡೆದ ಪಂದ್ಯದಲ್ಲಿ ಜಾರ್ಜಿಯದ ಕ್ವಾಚಾಟ್ಜ್‌ರನ್ನು 3-0 ಅಂತರದಿಂದ ಮಣಿಸಿದರು. ಅಂತಿಮ 8ರ ಸುತ್ತಿನಲ್ಲಿ ಕೊರಿಯಾದ ಲೀ ಡಾಂಗ್ವಿನ್‌ರನ್ನು ಎದುರಿಸಲಿದ್ದಾರೆ.

  ವಿಕಾಸ್ ಎಲ್ಲ ಮೂರು ಸುತ್ತಿನ ಪಂದ್ಯದಲ್ಲೂ ಪ್ರಾಬಲ್ಯ ಸಾಧಿಸಿದ್ದಾರೆ. ಅವರು ಈ ಗೆಲುವಿಗಾಗಿ ಹೆಚ್ಚು ಕಠಿಣ ಶ್ರಮಪಟ್ಟಿಲ್ಲ. ಜಾರ್ಜಿಯಾ ಆಟಗಾರ ಉತ್ತಮ ಪ್ರದರ್ಶನ ನೀಡಲು ಯತ್ನಿಸಿದ್ದಾರೆ. ಅಂತಿಮವಾಗಿ ವಿಕಾಸ್ ಸುಲಭ ಜಯ ಸಾಧಿಸಿದರು ಎಂದು ಭಾರತದ ಬಾಕ್ಸಿಂಗ್ ಕೋಚ್ ಗುರ್ಬಾಕ್ಸ್ ಸಿಂಗ್ ಹೇಳಿದ್ದಾರೆ.

ವಿಕಾಸ್ ಈಗಾಗಲೇ ಕ್ವಾರ್ಟರ್‌ಫೈನಲ್‌ಗೆ ತಲುಪಿರುವ ಮನೋಜ್ ಕುಮಾರ್(64ಕೆಜಿ) ಹಾಗೂ ಸುಮಿತ್ ಸಾಂಗ್ವಾನ್(81ಕೆಜಿ)ರನ್ನು ಸೇರಿಕೊಂಡಿದ್ದಾರೆ. ಒಂದುವೇಳೆ ಈ ಮೂವರು ಟೂರ್ನಿಯಲ್ಲಿ ಸೆಮಿಫೈನಲ್‌ಗೆ ತಲುಪಿದರೆ ಪದಕವನ್ನು ದೃಢಪಡಿಸುವ ಜೊತೆಗೆ ಒಲಿಂಪಿಕ್ಸ್‌ಗೂ ಟಿಕೆಟ್ ಗಿಟ್ಟಿಸಿಕೊಳ್ಳಲಿದ್ದಾರೆ.

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತ ಬಾಕ್ಸರ್ ಎಲ್. ದೇವೇಂದ್ರೊ ಸಿಂಗ್(49ಕೆಜಿ) ಸೆಮಿಫೈನಲ್‌ಗೆ ತಲುಪಿದ್ದಾರೆ. ರಿಯೋ ಗೇಮ್ಸ್‌ನಲ್ಲಿ ಸ್ಥಾನ ಪಡೆಯಬೇಕಾದರೆ ಫೈನಲ್‌ಗೆ ತಲುಪಬೇಕಾಗಿದೆ. ದೇವೇಂದ್ರೊ ಮುಂದಿನ ಸುತ್ತಿನಲ್ಲಿ ಸ್ಪೇನ್‌ನ ಸ್ಯಾಮುಯೆಲ್ ಹೆರೆಡಿಯಾರನ್ನು ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News