×
Ad

ರಾಜಧಾನಿಗಷ್ಟೇ ದುಬಾರಿ ಅನುದಾನ ಯಾಕೆ..?

Update: 2016-06-22 23:35 IST

ಮಾನ್ಯರೆ,
ನಮ್ಮ ರಾಜ್ಯದ 30 ಜಿಲ್ಲೆಗಳಲ್ಲಿನ ಕೆಲ ಹಳ್ಳಿಗಳು ಇನ್ನೂ ಸಂಪೂರ್ಣವಾಗಿ ‘ಅಭಿವೃದ್ಧಿ’ ಮುಖವನ್ನೇ ಕಂಡಿಲ್ಲ. ಹೆಸರಿಗಷ್ಟೇ ಯೋಜನೆಗಳನ್ನು ಘೋಷಣೆ ಮಾಡಿದರೂ ಇನ್ನೂ ಕಾರ್ಯಗತಗೊಂಡಿಲ್ಲ. ಆದರೆ ನಮ್ಮ ರಾಜಧಾನಿ ಬೆಂಗಳೂರಿಗೆ ತಿಂಗಳಿಗೊಂದು ಯೋಜನೆಗಳು ಘೋಷಣೆಯಾಗುತ್ತೆ. ಸಿಲಿಕಾನ್‌ಸಿಟಿಯ ವಿವಿಧ ಕಡೆ ‘ಅಭಿವೃದ್ದಿ’ ಹೆಸರಲ್ಲಿ ಕಾಮಗಾರಿಗಳು ಬ್ರೇಕ್ ಇಲ್ಲದೇ ನಡಿತಾನೇ ಇರುತ್ತದೆ. ಕಾಲಮಿತಿಯೊಳಗೆ ಈ ಯೋಜನೆಯ ಕಾಮಗಾರಿಗಳು ಮುಗಿಯುವುದೇ ಇಲ್ಲ. ಆದರೆ ಹಣ ಮಾತ್ರ ಖರ್ಚಾಗುತ್ತದೆ. ಇದ್ಯಾಕೆ ಹೀಗೆ..? ಎಂದು ಪ್ರಶ್ನೆ ಮಾಡುವ ಹೊತ್ತಿನಲ್ಲಿ ಮತ್ತೊಂದು ಹೊಸ ಕಾಮಗಾರಿ ಶುರುವಾಗಿರುತ್ತದೆ..!
 
ಈ ವಿಚಾರವೆಲ್ಲ್ಲ ಗೊತ್ತಿದ್ದರೂ ರಾಜ್ಯ ಸರಕಾರ ಬಿಬಿಎಂಪಿಗೆ ಪ್ರಸಕ್ತ ಸಾಲಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ 7,300 ಕೋಟಿ ರೂಪಾಯಿ ನೀಡಲು ನಿರ್ಧರಿಸಿರುವುದು ಆತುರದ ತೀರ್ಮಾನ. ಕಳೆದ ಬಾರಿ ನಗರೋತ್ಥಾನ ಯೋಜನೆಯಡಿ ಸಾವಿರ ಕೋಟಿ ರೂ. ನೀಡಲಾಗಿತ್ತು. ಆದರೆ ಈ ಸಲ ಅದರ 7 ಪಟ್ಟು ಅನುದಾನ ನೀಡಿರುವುದು ಕೆಲ ಅಧಿಕಾರಿಗಳಿಗೆ ಸುಗ್ಗಿಯಾಗಬಹುದು..! ರಸ್ತೆ ಅಭಿವೃದ್ಧಿಗೆ ಅಂತಲೇ 2,976 ಕೋಟಿ ರೂ. ಬಿಡುಗಡೆಗೆ ನಿರ್ಧರಿಸಲಾಗಿದೆ. ಆದರೆ ಇಂದಿಗೂ ಬೆಂಗಳೂರಿನ ಅನೇಕ ರಸ್ತೆಗಳು ಗುಂಡಿಗಳಿಂದ ಆವೃತವಾಗಿದೆ. ಇಂತಹ ಗುಂಡಿಗಳಿಂದ ಅವಘಡಗಳಾಗಿ ಅನೇಕ ಮಂದಿ ಜೀವ ತೆತ್ತಿದ್ದಾರೆ. ಇದಕ್ಕೆ ಯಾರು ಹೊಣೆ..? ರಸ್ತೆ ನಿರ್ಮಿಸಿದ ಇಂಜಿನಿಯರ್ ವಿರುದ್ಧ ಕೇಸ್ ದಾಖಲಿಸಲು ಸರಕಾರ ಸಿದ್ಧವಿದೆಯೇ?
ಮೊದಲು ಕೊಟ್ಟ ಅವಧಿಯ ಒಳಗೆೆ ಕಾಮಗಾರಿ ಮುಗಿಸದಿ ದ್ದವರ ವಿರುದ್ಧ ಸರಕಾರ ಕಠಿಣ ಕ್ರಮ ತೆಗೆದುಕೊಳ್ಳಲಿ. ನಂತರ ಅಭಿವೃದ್ಧಿ ಯೋಜನೆಗಳಿಗೆ ದುಬಾರಿ ಅನುದಾನ ಬಿಡುಗಡೆ ಮಾಡಲಿ. ಜನರ ತೆರಿಗೆಯ ಹಣವನ್ನು ಬೇಕಾಬಿಟ್ಟಿ ಪೋಲು ಮಾಡುವುದು ಎಷ್ಟು ಸರಿ..?

Similar News