ಕೈರಾನ ಹಿಂದೂ ವಲಸೆ ಪಟ್ಟಿಯಿಂದ ತನ್ನ ಹೆಸರನ್ನೇ ಕೈಬಿಟ್ಟ ಬಿಜೆಪಿ ಸಂಸದ
ಕೈರಾನ , ಜೂ . ೨೩: ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ಕೈರಾನದಿಂದ ಮುಸ್ಲಿಮರಿಗೆ ಹೆದರಿ ಹಿಂದೂಗಳು ವಲಸೆ ಹೋಗುತ್ತಿದ್ದಾರೆ ಎಂದು ಬಿಜೆಪಿ ಸಂಸದ ನೀಡಿದ ಪಟ್ಟಿ ಸಂಪೂರ್ಣ ಆಧಾರರಹಿತ ಹಾಗೂ ತಪ್ಪುಗಳಿಂದ ಕೂಡಿದ್ದು ಎಂದು ಜಿಲ್ಲಾಡಳಿತ ಹಾಗೂ ಹಲವು ಮಾಧ್ಯಮಗಳು ಬಹಿರಂಗಪಡಿಸಿದ್ದವು. ಈ ಬಳಿಕ ಖುದ್ದು ಬಿಜೆಪಿ ಸಂಸದ ಹುಕುಂ ಸಿಂಗ್ ಅವರೇ ಈ ಪಟ್ಟಿಯ ಬಗ್ಗೆ ತಿಪ್ಪರಲಾಗ ಹೊಡೆದು ರಾಗ ಬದಲಿಸಿದ್ದರು. ಈಗ ಹುಕುಂ ಸಿಂಗ್ ಅವರ ಪಟ್ಟಿಯಲ್ಲಿನ ಇನ್ನೊಂದು ಬಹುದೊಡ್ಡ ಲೋಪ ಬಹಿರಂಗವಾಗಿದೆ. ಅದರಲ್ಲಿ ಕೈರಾನದಿಂದ ವಲಸೆ ಹೋದ ಒಂದು ಬಹುಮುಖ್ಯ ಹಿಂದೂವೊಬ್ಬರ ಹೆಸರೇ ಇಲ್ಲ ಎಂದು ತಿಳಿದು ಬಂದಿದೆ. ಆ ಹಿಂದೂ ಬೇರಾರೂ ಅಲ್ಲ, ಸ್ವತಃ ಹುಕುಂ ಸಿಂಗ್ ಅವರೇ !
ಹೌದು, ಬಿಜೆಪಿ ಸಂಸದ ಹುಕುಂ ಸಿಂಗ್ ಅವರು ಮೂರು ದಶಕಗಳ ಹಿಂದೆ ಕೈರಾನದಿಂದ ವಲಸೆ ಹೋಗಿ ಮುಝಫರ್ ನಗರದಲ್ಲಿ ನೆಲೆಸಿದವರು ಎಂದು ಕೈರಾನದ ಸ್ಥಳೀಯರು ಖಚಿತಪಡಿಸಿದ್ದಾರೆ. ಆದರೆ ಅವರು ಸ್ವತಃ ತನ್ನ ಹೆಸರನ್ನು ಬರೆಯಲು ಮರೆತು ಬಿಟ್ಟಿದ್ದಾರೆ.
" ಮೂರು ದಶಕಗಳ ಹಿಂದೆ ಹುಕುಂ ಸಿಂಗ್ ಸಾಹೇಬರು ಇಲ್ಲಿಂದ ವಲಸೆ ಹೋಗಿ ಮುಝಫರ್ ನಗರದ ಹಿಂದೂ ಬಾಹುಳ್ಯವಿರುವ ಗಾಂಧಿ ಕಾಲನಿಯಲ್ಲಿ ನೆಲೆಸಿದರು. ಆದರೆ ೨೦೧೦ ರಲ್ಲಿ ಅವರ ಕುಟುಂಬದಲ್ಲಿ ಒಂದು ದುರಂತ ನಡೆಯಿತು. ಗೂಂಡಾಗಳು ಅವರ ಮನೆಗೆ ನುಗ್ಗಿ ಅವರ ಪತ್ನಿಯನ್ನು ಕೊಲೆ ಮಾಡಿದರು.ಈ ದುಷ್ಕೃತ್ಯ ಎಸಗಿದ್ದು ' ಬೇರೆ ಸಮುದಾಯದವರಲ್ಲ '. ಆ ಬಳಿಕ ಹುಕುಂ ಸಿಂಗ್ ಅವರು ಮತ್ತೆ ಕೈರಾನಕ್ಕೆ ಬಂದು ನಗರದ ಹೊರವಲಯದಲ್ಲಿ ನೆಲೆಸಿದರು. ಆದರೆ ಮೊನ್ನೆ ಪಟ್ಟಿ ನೀಡುವಾಗ ಯಾಕೆ ಅವರು ಇದನ್ನು ಮರೆತರು ಎಂದು ನನಗೆ ಆಶ್ಚರ್ಯವಾಗುತ್ತಿದೆ " ಎಂದು ಶಾಮ್ಲಿ ವಕ್ಫ್ ಬೋರ್ಡ್ ಅಧ್ಯಕ್ಷ ಫರ್ಹತ್ ಖಾನ್ ಅವರು ಹೇಳಿದ್ದಾರೆ.
ತಾನು ಕೈರಾನದಿಂದ ಮುಝಫರ್ ನಗರಕ್ಕೆ ವಲಸೆ ಹೋಗಿದ್ದು ಹೌದು ಎಂದು ಹುಕುಂ ಸಿಂಗ್ ಅವರೂ ಒಪ್ಪಿಕೊಂಡಿದ್ದಾರೆ.
ಕೈರಾನಾದ ಸ್ಥಳೀಯರ ಪ್ರಕಾರ ಹುಕುಂ ಸಿಂಗ್ ಅವರ ಮೇಲೆ ಗೂಂಡಾಗಳಿಗೆ ಪರೋಕ್ಷ ಸಹಕಾರ , ಬೆಂಬಲ ನೀಡುವ ಆರೋಪವೂ ಇದೆ. "ಕೈರಾನದ ಕುಖ್ಯಾತ ಗೂಂಡಾ ಮೂಕೀಮ್ ಕಾಲಾಗೂ ಹುಕುಂ ಸಿಂಗ್ ಅವರ ಅಭಯ ಇತ್ತು. ಆದ್ದರಿಂದಲೇ ಅವರು ಈ ಹಿಂದೆ ಎಂದೂ ಆತನ ವಿರುದ್ಧ ಯಾವುದೇ ಆರೋಪ ಮಾಡಿಲ್ಲ, ಆತನ ವಿರುದ್ಧ ಕ್ರಮಕ್ಕೆ ಆಗ್ರಹಿಸಿಲ್ಲ . ಈಗ ಉತ್ತರ ಪ್ರದೇಶ ಚುನಾವಣೆ ಹತ್ತಿರ ಬರುವಾಗ ಕೇವಲ ರಾಜಕೀಯ ಕಾರಣಕ್ಕೆ ಅವರು ಈ ಹೊಸ ವರಸೆ ಪ್ರಾರಂಭಿಸಿದ್ದಾರೆ " ಎಂದು ಸ್ಥಳೀಯರು ಹೇಳಿದ್ದಾರೆ.