20 ಉಪಗ್ರಹಗಳು ಆಗಸಕ್ಕೆ ಚಿಮ್ಮಿದ ಆ ಕ್ಷಣ...
ಭಾರತದ ಬಾಹ್ಯಾಕಾಶ ಸಂಸ್ಥೆ ಇತಿಹಾಸದಲ್ಲೇ ಅತಿಹೆಚ್ಚು ಸಂಖ್ಯೆಯ ಉಪಗ್ರಹಗಳನ್ನು ಉಡಾಯಿಸಲಾಗಿದೆ. ಶ್ರೀಹರಿಕೋಟ ಪ್ರದೇಶದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಪಿಎಸ್‌ಎಲ್‌ವಿಸಿ 34 ಉಪಗ್ರಹ ವಾಹಕದ ಮೂಲಕ 20 ಉಪಗ್ರಹಗಳನ್ನು 505 ಕಿಲೋಮೀಟರ್ ಎತ್ತರದ ಸೌರಕಕ್ಷೆಗೆ ಯಶಸ್ವಿಯಾಗಿ ಸೇರಿಸಲಾಗಿದೆ. ಮುಂಜಾನೆ ಆರು ಗಂಟೆಗೆ ಸರಿಯಾಗಿ ನಮ್ಮ ಎಸ್‌ಯುವಿ ಶರವೇಗದಲ್ಲಿ ಕದಿರು ಆಕೃತಿಯ ದ್ವೀಪದ ಒಳಗಿತ್ತು. ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಸುಲ್ಲೂರುಪೇಟೆ ನಗರದಿಂದ 20 ಕಿಲೋಮೀಟರ್ ದೂರದಲ್ಲಿ ಈ ದ್ವೀಪ ಇದೆ. ದಾರಿಯ ಇಕ್ಕೆಲಗಳಲ್ಲಿ ಪುಲಿಕಟ್ ಕೆರೆ ಚಾಚಿಕೊಂಡಿದೆ. ಬೇಸಿಗೆಯ ಸಮುದ್ರನೀರಿನಿಂದ ಈ ಕೆರೆ ಆವೃತ್ತವಾಗಿದೆ.
ಪುಲಿಕಟ್ ಕೆರೆ, ಒಡಿಶಾದ ಚಿಲ್ಕಾ ಕೆರೆಯನ್ನು ಹೊರತುಪಡಿಸಿದರೆ, ದೇಶದ ಎರಡನೆ ಅತಿದೊಡ್ಡ ಉಪ್ಪುನೀರಿನ ಕೆರೆಯಾಗಿದೆ. ಕೆರೆದಂಡೆಯುದ್ದಕ್ಕೂ ಉದ್ದ ಕೊಕ್ಕಿನ ಪೆನಿಕಾನ್, ಸ್ಟ್ರೋಕ್, ಕೊಕ್ಕರೆ, ಕಿಂಗ್‌ಫಿಶರ್ ಹಾಗೂ ಇತರ ವಲಸೆ ಹಕ್ಕಿಗಳು ಮೀನು ಬೇಟೆಗೆ ಸಜ್ಜಾಗಿದ್ದವು. ಕೆರೆಯಿಂದ ಏಳುವ ಕುಳಿರ್ಗಾಳಿ, ರಭಸದಿಂದ ಸದ್ದುಮಾಡುತ್ತಾ ನಮ್ಮ ವಾಹನಕ್ಕೆ ಅಪ್ಪಳಿಸುತ್ತಿತ್ತು. ಈ ಅಪೂರ್ವ ಅನುಭವ, ನಮಗೆ ಮುಂದಿನ ಕೆಲವು ಗಂಟೆಗಳಲ್ಲಿ ಕೇಳಿಬರುವ ರಾಕೆಟ್ ಸದ್ದನ್ನು ನೆನಪಿಸಿತು. ಶ್ರೀಹರಿಕೋಟ ಭಾರತದ ಪ್ರಾಥಮಿಕ ಕಕ್ಷೆಯ ಉಡಾವಣಾ ಕೇಂದ್ರವಾಗಿದ್ದು, ಉತ್ತಮ ಉಡಾವಣಾ ಕಾರಿಡಾರ್, ಸಮಭಾಜಕ ವೃತ್ತಕ್ಕೆ ಸನಿಹದಲ್ಲಿರುವುದು, ವಾಸತಾಣವಲ್ಲದ ಪ್ರದೇಶವಾಗಿರುವುದರಿಂದ ಉಡಾವಣೆಗೆ ಸುರಕ್ಷಿತ ವಲಯ ಎನಿಸಿಕೊಂಡಿದೆ. ಇಲ್ಲಿ ಬಾಹ್ಯಾಕಾಶ ನೌಕೆಗಳ ಉಡಾವಣೆಗೆ ಎರಡು ಲಾಂಚ್ ಪ್ಯಾಡ್‌ಗಳಿವೆ. ಶ್ರೀಹರಿಕೋಟ ಭಾರತದ ಮಾನವ ಬಾಹ್ಯಾಕಾಶ ವಿಮಾನ ಯೋಜನೆಗೂ ಮುಖ್ಯ ನೆಲೆಯಾಗಿದೆ. ಇದಕ್ಕಾಗಿ ಮೂರನೆ ಲಾಂಚ್‌ಪ್ಯಾಡ್ ನಿರ್ಮಿಸಲಾಗುತ್ತಿದೆ.
ಉಡಾವಣೆಯ ದಿನವಾದ ಬುಧವಾರ ಪೋಲಾರ್ ಸೆಟಲೈಟ್ ಲಾಂಚ್ ವೆಹಿಕಲ್ ಸಿ34, ಎರಡನೇ ಲಾಂಚ್‌ಪ್ಯಾಡ್‌ನಿಂದ ನಭಕ್ಕೆ ಚಿಮ್ಮಿತು. ಇದು ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಸ್ರೋದ ಅತಿದೊಡ್ಡ ಉಡಾವಣಾ ಕಾರ್ಯಕ್ರಮವಾಗಿತ್ತು. ಆಗಸಕ್ಕೆ ಚಿಮ್ಮಿದ ಪಿಎಸ್‌ಎಲ್‌ವಿಸಿ 34, ಏಕಕಾಲಕ್ಕೆ 20 ಉಪಗ್ರಹಗಳನ್ನು 505 ಕಿಲೋಮೀಟರ್ ಎತ್ತರದ ಸೌರಕಕ್ಷೆಗೆ ಒಯ್ಯುವ ಅಪರೂಪದ ಕ್ಷಣಕ್ಕೆ ನಾವು ಸಾಕ್ಷಿಯಾದೆವು.
ಈ ಪೈಕಿ ಮೂರು ಭಾರತೀಯ ಉಪಗ್ರಹಗಳು. ಭೂ ವೀಕ್ಷಣೆಗೆ ಕಾರ್ಟೋಸ್ಟ್-2 ಒಂದು ಉಪಗ್ರಹ. ಇದು ನಗರ, ಗ್ರಾಮೀಣ, ಕರಾವಳಿ ಭೂಬಳಕೆ, ನೀರು ಹಂಚಿಕೆ ಹಾಗೂ ಇತರ ಅನ್ವಯಿಕೆಗಳಿಗೆ ಬಳಕೆಯಾಗಲಿದೆ. ಇತರ ಎರಡು ಉಪಗ್ರಹಗಳು ಭಾರತೀಯ ವಿಶ್ವವಿದ್ಯಾನಿಲಯಗಳು ಅಭಿವೃದ್ಧಿಪಡಿಸಿದ ಉಪಗ್ರಹಗಳು. ಉಳಿದವುಗಳು ವಾಣಿಜ್ಯ ಬಳಕೆಯ ಉಪಗ್ರಹಗಳು. ಅಮೆರಿಕ, ಕೆನಡಾ, ಜರ್ಮನಿ ಹಾಗೂ ಇಂಡೋನೇಷ್ಯಾದ ಉಪಗ್ರಹಗಳು ಇದರಲ್ಲಿ ಸೇರಿದ್ದವು. ಇಸ್ರೋದ ವಾಣಿಜ್ಯ ಘಟಕವಾದ ಆಂಥ್ರಿಕ್ಸ್ ಕಾರ್ಪೊರೇಷನ್ ಲಿಮಿಟೆಡ್, ವಿದೇಶಿ ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಉಡಾಯಿಸುತ್ತದೆ. ಪ್ರಧಾನಿ ಕಚೇರಿಯ ಮೂಲಗಳನ್ನು ಉಲ್ಲೇಖಿಸಿದ ವರದಿಯ ಪ್ರಕಾರ, 2013ರಿಂದ 2015ರವರೆಗೆ ಭಾರತ ಒಟ್ಟು 28 ವಿದೇಶಿ ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ. ಈ ವಾಣಿಜ್ಯ ಉಡಾವಣಾ ಶುಲ್ಕವಾಗಿ 101 ದಶಲಕ್ಷ ಡಾಲರ್ ಆದಾಯ ಪಡೆದಿದೆ. ಹಲವು ದೇಶಗಳು ಭಾರತದ ಇಸ್ರೋ ಉಡಾವಣಾ ವ್ಯವಸ್ಥೆಯನ್ನು ಬಳಸಿಕೊಳ್ಳಲು ಕಾರಣವೆಂದರೆ ವಿಶ್ವದ ಇತರ ಬಾಹ್ಯಾಕಾಶ ಏಜೆನ್ಸಿಗಳಿಗಿಂತ ತೀರಾ ಕಡಿಮೆ ವೆಚ್ಚದಲ್ಲಿ ಇಸ್ರೋ ಈ ಉಪಗ್ರಹಗಳನ್ನು ಉಡಾಯಿಸುವ ಜವಾಬ್ದಾರಿ ಹೊರುತ್ತದೆ. ಬುಧವಾರದ ಉಡಾವಣೆಯಿಂದಾಗಿ ಭಾರತ ಜಾಗತಿಕವಾಗಿ ಬಾಹ್ಯಾಕಾಶ ಯೋಜನೆಯ ಮುಂಚೂಣಿ ರಾಷ್ಟ್ರವಾಗಿ ಹೊರಹೊಮ್ಮಿದೆ.
ಪಿಎಸ್‌ಎಲ್‌ವಿ ವಿಶ್ವದ ಅತ್ಯಂತ ವಿಶ್ವಾಸಾರ್ಹ ಉಡಾವಣಾ ವಾಹಕಗಳಲ್ಲೊಂದಾಗಿದ್ದು, ಇದರ ಎಕ್ಸ್‌ಎಲ್ ಅವತರಣಿಕೆಯನ್ನು ವಿಶ್ವದ ಪ್ರಮುಖ ರಾಕೆಟ್ ಶಕ್ತ ದೇಶಗಳು ಕೂಡಾ ಹೊಗಳಿವೆ. ಇದು ಬಾಹ್ಯಾಕಾಶಕ್ಕೆ 36ನೆ ಯಾನವನ್ನು ಕೈಗೊಂಡಿದೆ. ಇದು 20 ವರ್ಷಗಳಿಂದ ಬಳಕೆಯಲ್ಲಿದ್ದು, ಚಂದ್ರಯಾನ-1, ಮಾರ್ಸ್ ಆರ್ಬಿಟರ್ ಮಿಷನ್, ಸ್ಪೇಸ್ ಕ್ಯಾಪ್ಸೂಲ್ ರಿಕವರಿ ಎಕ್ಸ್‌ಪರಿಮೆಂಟ್ ಹಾಗೂ ಭಾರತದ ಪ್ರಾದೇಶಿಕ ಪಥದರ್ಶಕ ಉಪಗ್ರಹ ವ್ಯವಸ್ಥೆ (ಐಆರ್‌ಎನ್‌ಎಸ್‌ಎಸ್)ಗೆ ಕೂಡಾ ಬಳಕೆಯಾಗಿದೆ. ಇದುವರೆಗೆ ಈ ಉಪಗ್ರಹವಾಹಕ 19 ದೇಶಗಳ 40ಕ್ಕೂ ಹೆಚ್ಚು ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ. 2008ರಲ್ಲಿ ಇದು ಅತ್ಯಕ ಸಂಖ್ಯೆಯ ಉಪಗ್ರಹಗಳನ್ನು ಒಂದೇ ಉಡಾವಣೆಯಲ್ಲಿ ಯಶಸ್ವಿಯಾಗಿ ಕಕ್ಷೆಗೆ ಸೇರಿಸುವ ಮೂಲಕ ಇತಿಹಾಸ ನಿರ್ಮಿಸಿತ್ತು. ವಿಭಿನ್ನ ಭೂ ಕೆಳಕಕ್ಷೆಗಳಿಗೆ 10 ಉಪಗ್ರಹಗಳನ್ನು ಸೇರಿಸಿತ್ತು. ಅತಿಹೆಚ್ಚು ಉಪಗ್ರಹಗಳನ್ನು ಒಂದೇ ಮಿಷನ್‌ನಲ್ಲಿ ಉಡಾಯಿಸಿದ ದಾಖಲೆ ರಷ್ಯಾ ಹೆಸರಿನಲ್ಲಿದ್ದು, ರಷ್ಯಾದ ಡಿಎನ್‌ಇಪಿಆರ್ ರಾಕೆಟ್, 2014ರಲ್ಲಿ 37 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿತ್ತು. ಪಿಎಸ್‌ಎಲ್‌ವಿಯ ಯಶಸ್ವಿ ಕಾರ್ಯಾಚರಣೆ ಹಾಗೂ ಸ್ಥಿತಿಸ್ಥಾಪಕತ್ವದಿಂದಾಗಿ ಇದು ವಿಶೇಷ ಮಹತ್ವ ಪಡೆದಿದ್ದು, 1750 ಕೆಜಿ ಪೇಲೋಡನ್ನು ಒಯ್ಯುವ ಸಾಮರ್ಥ್ಯ ಹೊಂದಿದೆ. ಇದು ಸೌರ ಕಕ್ಷೆಯ 600 ಕಿಲೋಮಿಟರ್ ದೂರದ ಧ್ರುವ ಕಕ್ಷೆಗೆ ಉಪಗ್ರಹ ಒಯ್ಯಲು ಶಕ್ತವಾಗಿದೆ.
ನಮ್ಮ ಅತಿಥೇಯರು ತೀರಾ ಗಡಿಬಿಡಿಯಲ್ಲಿದ್ದ ಕಾರಣ ನಮ್ಮ ಎಸ್‌ವಿಯು ಶರವೇಗದಿಂದ ಮುನ್ನುಗ್ಗುತ್ತಿತ್ತು. ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಕುಂಕುಮ ವರ್ಣದ ಗೋಡೆಯಲ್ಲಿ ಇಸ್ರೋ ಕೇಂದ್ರ ಎಂಬ ಹೆಸರು ರಾರಾಜಿಸುತ್ತಿತ್ತು. ಐತಿಹಾಸಿಕ ಉಡಾವಣೆಗೆ 48 ಗಂಟೆಗಳ ಕ್ಷಣಗಣನೆ ಜೂನ್ 20ರಂದು ಸೋಮವಾರ ಆರಂಭವಾಗಿತ್ತು. ಇದರ ಹಿಂದಿನ ದಿನ, ಅಕಾರಿಗಳು ಯೋಜನೆಯ ಸಿದ್ಧತಾ ಪರಾಮರ್ಶೆ ನಡೆಸಿದರು. ಎಲ್ಲ ಪ್ರಕ್ರಿಯೆಗಳನ್ನು ಪರಿಶೀಲಿಸಿದರು. ತಂಡ ಪ್ರತಿ ಸದಸ್ಯರು ಹಾಗೂ ವಿಭಾಗಗಳಿಂದ ಏನನ್ನು ನಿರೀಕ್ಷಿಸಲಾಗಿದೆ ಎಂಬ ವಿವರ ನೀಡಿದರು. ಸಾಮಾನ್ಯ ಕಾರ್ಯಶೈಲಿಯನ್ನು ಸ್ಪಷ್ಟವಾಗಿ ನಿರೂಪಿಸಿದರು. ಉಡಾವಣೆಗಿಂತ ಮುನ್ನವೇ ಪ್ರತಿಯೊಂದು ತಂಡ ಕೂಡಾ ತನ್ನ ಗುರಿಯನ್ನು ಸಾಸುವ ಬಗ್ಗೆ ಮತ್ತು ಇತರ ತಂಡಗಳ ಜತೆ ಸಮನ್ವಯ ಸಾಸುವ ಎರಡೂ ಗುರಿಗಳನ್ನು ಸಾಸುವ ಬಗ್ಗೆ ಹೆಚ್ಚು ಜಾಗರೂಕವಾಗಿರುವಂತೆ ಸೂಚನೆ ನೀಡಲಾಗಿತ್ತು.
ಇಡೀ ಪ್ರದೇಶದ ಎಲ್ಲಿ ನೋಡಿದರಲ್ಲಿ, ಸಮವಸಧಾರಿಗಳು ದ್ವಿಚಕ್ರವಾಹನಗಳಲ್ಲಿ, ಜೀಪುಗಳಲ್ಲಿ ಚುರುಕಿನಿಂದ ಓಡಾಡುತ್ತಿರುವುದು ಕಂಡುಬರುತ್ತಿತ್ತು. ಉಡಾವಣೆಗೆ ಕ್ಷಣಗಣನೆ ಆರಂಭವಾಗುವ ಮುನ್ನವೇ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಲಾಯಿತು. ಕೀಪಕ್ ಉದ್ಯೋಗಿ ಕ್ಯಾಂಟಿನ್ ಎದುರು ದೊಡ್ಡ ಸಂದಣಿ ಸೇರಿತ್ತು. ಬಹಳಷ್ಟು ಮಂದಿ ಉದ್ಯೋಗಿಗಳು ಈ ಐತಿಹಾಸಿಕ ಕ್ಷಣ ವೀಕ್ಷಣೆಗಾಗಿ ಅತಿಥಿಗಳನ್ನು ಕರೆ ತಂದಿದ್ದರು. ಮಧ್ಯಾಹ್ನ ಹಾಗೂ ರಾತ್ರಿ ಪಾಳಿಯ ಉದ್ಯೋಗಿಗಳು, ವಿಶೇಷ ಉಡಾವಣಾ ಕರ್ತವ್ಯಕ್ಕಾಗಿ ಬೆಳಿಗ್ಗೆಯ ಪಾಳಿಗೂ ನಿಯೋಜಿತರಾಗಿದ್ದರು. ಉಡಾವಣಾ ದಿನ ಮುಂಜಾನೆ ವಿಶೇಷ ಉಪಾಹಾರ ವ್ಯವಸ್ಥೆಗೊಳಿಸಲಾಗಿತ್ತು. ಇಡ್ಲಿ, ವಡಾ, ಉಪ್ಪಿಟ್ಟು, ಪೊಂಗಲ್, ತೆಂಗಿನ ಹಾಗೂ ಹುಣಸೆ ಚಟ್ನಿ, ಸಿಹಿ ತಿಂಡಿ ಹಾಗೂ ಕಾಫಿ ಸರಬರಾಜು ಯಥೇಚ್ಛವಾಗಿತ್ತು. ಸಮೃದ್ಧ ಗಾಳಿಯ ನಡುವೆ ಒಂದೆಡೆ ಹಬ್ಬದ ವಾತಾವರಣವಾದರೆ ಮನಸ್ಸಿನ ಇನ್ನೊಂದು ಮೂಲೆಯಲ್ಲಿ ಪರೀಕ್ಷಾ ಕೊಠಡಿಯ ಉದ್ವಿಗ್ನತೆ ಎದ್ದುಕಾಣುತ್ತಿತ್ತು.
ಪಿಎಸ್‌ಎಲ್‌ವಿ ಕೌತುಕ
ಪಿಎಸ್‌ಎಲ್‌ವಿಯಲ್ಲಿ ಮುಖ್ಯವಾಗಿ ನಾಲ್ಕು ಭಾಗಗಳಿವೆ. ಪ್ರತಿಯೊಂದಕ್ಕೂ ಪ್ರತ್ಯೇಕ ಮೋಟರ್‌ಗಳು, ಇಂಧನ ಹಾಗೂ ನೋದಕ (ಪ್ರೊಪಲೆಂಟ್)ಗಳಿವೆ. ಕೆಳಗಿನ ವಿಭಾಗ (ಪಿಎಸ್1) ವಾಹಕದ ಪ್ರಮುಖ ಭಾಗವಾಗಿದ್ದು, ನಾಲ್ಕನೇ ಭಾಗ ಕಕ್ಷೆಗೆ ಸೇರಿಸಬೇಕಾದ ಎಲ್ಲ ಉಪಗ್ರಹಗಳನ್ನು ಹಿಡಿದಿಟ್ಟುಕೊಳ್ಳುತ್ತದೆ. ವಾಹಕದ ಇಂಜಿನ್ ಸಮನ್ವಯಗೊಳಿಸಲು ಆರು ಪಟ್ಟಿಗಳಲ್ಲಿ 12.2 ಟನ್ ನೋದಕಗಳನ್ನು ಅಳವಡಿಸಲಾಗಿದೆ. ಈ ಪೈಕಿ ನಾಲ್ಕು ನೆಲಮಟ್ಟದಲ್ಲಿವೆ. ಪ್ರಮುಖ ಭಾಗಕ್ಕೆ ಕಿಡಿ ಹಚ್ಚಿದಾಗ ನೋದಕಗಳು ಉರಿಯಲು ಆರಂಭಿಸುತ್ತವೆ. ಆಗ ನೆಲಮಟ್ಟದ ನಾಲ್ಕು ಬೂಸ್ಟರ್‌ಗಳು ಕೂಡಾ ಪ್ರಮುಖ ಭಾಗದ ಜತೆ ಉರಿಯಲಾರಂಭಿಸುತ್ತದೆ. ಈ ಅಗಾಧ ಶಕ್ತಿ, ಈ ದೈತ್ಯ ವಾಹಕ ಗುರುತ್ವಾಕರ್ಷಣ ಶಕ್ತಿಯಿಂದ ಕಳಚಿಕೊಳ್ಳಲು ಬೇಕಾದ ಅಗಾಧ ಶಕ್ತಿಯನ್ನು ನೀಡುತ್ತದೆ. ಮೇಲಕ್ಕೆ ಚಿಮುತ್ತಲೇ ಅಗಾಧ ವೇಗೋತ್ಕರ್ಷವನ್ನು ಪ್ರತಿ ಹಂತದಲ್ಲೂ ಪಡೆಯುತ್ತದೆ.
ಘನ ನೋದಕಗಳನ್ನು ಇಸ್ರೋದ ಶ್ರೀಹರಿಕೋಟ ಉಡಾವಣಾ ಕೇಂದ್ರದಲ್ಲೇ ಉತ್ಪಾದಿಸಲಾಗುತ್ತದೆ. ಅಂತೆಯೇ ಪಿಎಸ್2ಗೆ ಬೇಕಾದ 42 ಟನ್ ದ್ರವ ನೋದಕವನ್ನು ಕೈಗಾರಿಕಾ ಸಹಭಾಗಿತ್ವ ಸಂಸ್ಥೆಯಿಂದ ಪಡೆಯಲಾಗುತ್ತದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಇಂಜಿನಿಯರ್ ಎನ್. ನಾರಾಯಣಮೂರ್ತಿ ವಿವರಿಸಿದರು. ಇವರು ಪಿಎಸ್‌ಎಲ್‌ವಿ ಅಭಿವೃದ್ಧಿಗೊಳಿಸುವ ಆರಂಭಿಕ ವರ್ಷದಿಂದಲೇ ಈ ಕಾರ್ಯದಲ್ಲಿ ತೊಡಗಿಸಿಕೊಂಡವರು. ಈ ವಿಶೇಷ ಘನೀಕೃತ ಹಾಗೂ ದ್ರವ ನೋದಕಗಳ ಸಂರಚನೆಯಾಗಿ ಸರಕಾರದಿಂದ ವಿಶೇಷ ಅನುಮತಿ ಪಡೆಯಲಾಗಿದೆ. ಒಂದು ಹಂತದಲ್ಲಿ ವಿಜ್ಞಾನಿಗಳಿಗೆ, ಪಿಎಸ್2 ಇಂಧನವನ್ನು 33 ರಿಂದ 37.5 ಟನ್‌ಗಳಿಗೆ ಹೆಚ್ಚಿಸುವುದರಿಂದ ವಾಹಕದ ಪೇಲೋಡ್ ಸಾಮರ್ಥ್ಯವನ್ನು ಹೆಚ್ಚಿಸಬಹುದು ಮತ್ತು ಹೆಚ್ಚು ತೂಕದ ಉಪಗ್ರಹಗಳನ್ನು ಕೂಡಾ ಆಯಾ ಕಕ್ಷೆಗೆ ಸೇರಿಸಬಹುದು ಎನ್ನುವ ವಾಸ್ತವ ಅರಿವಿಗೆ ಬಂತು ಎಂದು ಅವರು ವಿವರಿಸಿದರು.
ಇಂದು ಪಿಎಸ್‌ಎಲ್‌ವಿಯ ಮೂರು ಅವತರಣಿಕೆಗಳು ಲಭ್ಯ ಇವೆ. ಆರು ಪಟ್ಟಿಗಳ ಜನರಿಕ್ ವಾಹಕ ಮೊದಲನೆಯದು. ಇದು ಆರಂಭಿಕ ಅವತರಣಿಕೆಯಾಗಿದ್ದು, ಇದನ್ನು ಸದ್ಯದಲ್ಲೇ ಕೈಬಿಡಲಾಗುತ್ತದೆ. ಪ್ರಮುಖ ಭಾಗ ಮಾತ್ರ ಇರುವ ಅವತರಣಿಕೆ ಇನ್ನೊಂದು. ಇದರಲ್ಲಿ ಯಾವುದೇ ಪಟ್ಟಿ ಸಂರಚನೆ ಇರುವುದಿಲ್ಲ. ಮೂರನೆಯದು ಎಕ್ಸ್‌ಎಲ್ ಅವತರಣಿಕೆ. ಇದರಲ್ಲಿ ಹೆಚ್ಚುವರಿ ಪಟ್ಟಿ ಸಂರಚನೆ ಇರುತ್ತದೆ. ಈ ಉಡಾವಣಾ ವಾಹಕದ ಇತರ ಭಾಗಗಳನ್ನು ಬೆಂಗಳೂರು ಕ್ಯಾಂಪಸ್‌ನಲ್ಲಿ ಪ್ರತ್ಯೇಕವಾಗಿ ಉತ್ಪಾದಿಸಲಾಗುತ್ತದೆ. ವಿಕ್ರಂ ಸಾರಾಭಾಯ್ ಕೇಂದ್ರದಲ್ಲಿ ಇವುಗಳನ್ನು ಉತ್ಪಾದಿಸಿ ಶ್ರೀಹರಿಕೋಟಕ್ಕೆ ಪರೀಕ್ಷೆ ಹಾಗೂ ಉಡಾವಣೆಗಾಗಿ ರವಾನಿಸಲಾಗುತ್ತದೆ.
ವಾಹಕದ ಪ್ರತಿ ಭಾಗಗಳನ್ನು ಪರೀಕ್ಷಿಸಿದ ಬಳಿಕ ಇದನ್ನು ಸಮಗ್ರಗೊಳಿಸಿ, ಜೋಡಿಸಲಾಗುತ್ತದೆ. ಒಂದು ನಾಭಿಯಾಕಾರದ ಗೋಪುರವು ಸಮನ್ವಯಗೊಳಿಸಲಾದ ವಾಹಕಕ್ಕೆ ವಿವಿಧ ಹಂತಗಳಲ್ಲಿ ವೈರ್ ಹಾಗೂ ಪೈಪ್‌ಗಳ ಮೂಲಕ ಸಂಪರ್ಕಿಸುತ್ತದೆ. ಇದಕ್ಕೆ ಇಂಧನ ಹಾಗೂ ಅನಿಲಗಳನ್ನು ತುಂಬಿಸಿ, ಅವುಗಳ ಬ್ಯಾಟರಿಗಳನ್ನು ಚಾರ್ಜ್ ಮಾಡಲಾಗುತ್ತದೆ. ಬಳಿಕ ಇತರ ಪ್ರಕ್ರಿಯೆಗಳನ್ನು ಸಂಯೋಜಿಸಲಾಗುತ್ತದೆ. ಉಡಾವಣೆಯ ಮುನ್ನಾದಿನ ಎಲ್ಲ ಇಂಧನ ಟ್ಯಾಂಕ್‌ಗಳನ್ನು ನೋದಕಗಳಿಂದ ಭರ್ತಿ ಮಾಡಲಾಗುತ್ತದೆ.
ಉಡಾವಣೆಯ ದಿನ
ಉಡಾವಣಾ ಕ್ಷಣಕ್ಕಿಂತ ಐದು ಗಂಟೆ ಮುಂಚಿತವಾಗಿಯೇ, ಜಿಪಿಎಸ್ ರೇಡಿಯೊಸಾನಿಕ್ ಬಲೂನ್‌ಗಳನ್ನು ಗಂಟೆಗೊಂದರಂತೆ ವಾತಾವರಣಕ್ಕೆ ಹಾರಿಬಿಡಲಾಗುತ್ತದೆ. ಈ ಬಲೂನ್‌ಗಳು ಗಾಳಿಯ ವೇಗ ಹಾಗೂ ದಿಕ್ಕು ಮತ್ತಿತರ ಮಾನದಂಡಗಳ ಬಗೆಗೆ ಮಾಹಿತಿ ರವಾನಿಸುತ್ತದೆ. ಉಡಾವಣೆಗೆ ಒಂದು ಗಂಟೆ ಮೊದಲು, ಈ ಮಾಹಿತಿಗಳನ್ನು ಪ್ರೋಗ್ರಾಮಿಂಗ್‌ಗೆ ಒಳಪಡಿಸಿ, ಉಡಾವಣಾ ವಾಹಕದ ಸಿಸ್ಟಂಗೆ ನೀಡಲಾಗುತ್ತದೆ. ಇದು ಗಾಳಿಯ ವೇಗವನ್ನು ಅನುಕೂಲಕರವಾಗಿ ಬಳಸಿಕೊಳ್ಳಲು ನೆರವು ನೀಡುತ್ತದೆ. ಮಳೆ ಬಂದ ಬಳಿಕ ನೀವು ಎಚ್ಚರಿಕೆಯಿಂದ ರಸ್ತೆಯ ಕೊಚ್ಚೆ ಗುಂಡಿಗಳಿಗೆ ಕಾಲಿಡುವುದನ್ನು ತಪ್ಪಿಸಿಕೊಳ್ಳುವಂತೆ, ವಾಹಕಕ್ಕೆ ಪ್ರತಿಕೂಲ ಶಕ್ತಿಗಳನ್ನು ತಪ್ಪಿಸಿಕೊಳ್ಳುವ ರೀತಿಯಲ್ಲಿ ಪ್ರೋಗ್ರಾಮಿಂಗ್ ಮಾಡಲಾಗುತ್ತದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಕಾರಿಯೊಬ್ಬರು ಸಿದ್ಧತೆಯ ಹಂತವನ್ನು ವಿವರಿಸಿದರು.
ಸಾಗರ ಮತ್ತು ವಾಯು ಸಂಚಾರ ಕಮಾಂಡ್‌ಗಳು ತಮ್ಮ ಅನುಮತಿಯನ್ನು ಒಂದು ಗಂಟೆ ಮುಂಚಿತವಾಗಿ ನೀಡುತ್ತವೆ. ಎಲ್ಲ ವಾಯು ಹಾಗೂ ಜಲಮಾರ್ಗದ ವಾಹನಗಳನ್ನು ತಡೆದು ಸಂಚಾರಕ್ಕೆ ಮುಕ್ತ ವಾತಾವರಣ ಕಲ್ಪಿಸಲಾಗುತ್ತದೆ. ಆ ಬಳಿಕ ನೋದಕ, ಇಂಧನ ಹಾಗೂ ನಿಯಂತ್ರಣ ಟ್ಯಾಂಕ್‌ಗಳನ್ನು 30 ನಿಮಿಷ ಮುಂಚಿತವಾಗಿ, ಆವಿಯಾಗುವ ದ್ರವ ಇಂಧನ ಭರ್ತಿ ಮಾಡಿ, ನೋದಕಗಳ ಮೇಲೆ ನಿಧಾನವಾದ ಒತ್ತಡ ಹೇರುವಂತೆ ಮಾಡಲಾಗುತ್ತದೆ. ರಾಕೆಟ್ ಮೇಲ್ಮುಖವಾಗಿ ಏರುವ ಹಾಗೂ ಶರವೇಗದಲ್ಲಿ ಚಿಮ್ಮುವ ಕ್ಷಣವನ್ನು ಕಲ್ಪಿಸಿಕೊಳ್ಳಿ. ಒಳಗಿದ್ದ ಎಲ್ಲವೂ ಸಮರ್ಪಕವಾಗಿ ಸುತ್ತಬೇಕು. ಆದರೆ ನೋದಕಗಳು ಗಾಳಿಯ ತಡೆಯಿಂದಾಗಿ ಇಂಜಿನ್‌ಗೆ ನೋದಕಗಳು ಸರಾಗವಾಗಿ ಹರಿಯುವುದನ್ನು ತಡೆದಲ್ಲಿ ಇದು ಆಗುವುದಿಲ್ಲ. ಇದನ್ನು ತಡೆಯುವ ಸಲುವಾಗಿ ಹಾಗೂ ನೋದಕಗಳ ಮೇಲೆ ನಿಧಾನವಾಗಿ ಒತ್ತಡ ನಿರ್ವಹಿಸುವ ಸಲುವಾಗಿ, ಅತ್ಯಕ ಒತ್ತಡದ (375 ಬಾರ್) ಹೀಲಿಯಂ ಅನಿಲವನ್ನು ಇಂಧನ ಟ್ಯಾಂಕ್‌ಗಳಿಗೆ ಹರಿಸಲಾಗುತ್ತದೆ ಎಂದು ಅಕಾರಿಗಳು ವಿವರಿಸಿದರು.
ಈ ಕೊನೆಯ 30 ನಿಮಿಷಗಳಲ್ಲಿ, ಮಿಷನ್ ಕಂಟ್ರೋಲ್ ರೂಮ್‌ನಿಂದ ಸ್ಪೀಕರ್ ಮೂಲಕ ಘೋಷಣೆಗಳು ಬರುತ್ತವೆ. ಸಿದ್ಧತೆಗಳ ಸೂಕ್ಷ್ಮ ವಿವರಗಳನ್ನೂ ಕ್ಷಣ ಕ್ಷಣಕ್ಕೆ ನೀಡಲಾಗುತ್ತದೆ. ನಾವು ವೀಕ್ಷಿಸುವ ಸಭಾಗೃಹಕ್ಕೂ, ಲೈವ್ ಕಮೆಂಟರಿ ವ್ಯವಸ್ಥೆ ಇರುತ್ತದೆ. ಇಲ್ಲಿ ಉಡಾವಣೆಯ ಸೂಕ್ಷ್ಮ ಹಾಗೂ ದೊಡ್ಡ ಆಯಾಮಗಳನ್ನು ಸಮಗ್ರವಾಗಿ ವಿವರಿಸಲಾಗುತ್ತದೆ. ಉಡಾವಣೆಗೆ 20 ನಿಮಿಷ ಮುನ್ನ, ಬಾಹ್ಯಾಕಾಶ ನೌಕೆಯನ್ನು ಆಂತರಿಕ ವಿದ್ಯುತ್ ಮೂಲಕ ಸ್ವಿಚ್ ಆನ್ ಮಾಡಲಾಗುತ್ತದೆ. 10 ನಿಮಿಷ ಬಾಕಿ ಇರುವಾಗ, ಇಡೀ ವ್ಯವಸ್ಥೆ ಸ್ವಯಂಚಾಲಿತ ಉಡಾವಣಾ ಸಂಕೇತ ಹಂತಕ್ಕೆ ಪರಿವರ್ತನೆಯಾಗುತ್ತದೆ. ಅಂದರೆ ಎಲ್ಲ ಹೊಣೆ ಅಥವಾ ಅಕಾರವನ್ನು ಕಂಪ್ಯೂಟರ್ ಕೈಗೆ ಹಸ್ತಾಂತರಿಸಲಾಗುತ್ತದೆ. ಇದು ಪಿಎಸ್‌ಎಲ್‌ವಿಯ ಎಲ್ಲ ಭಾಗಗಳಿಂದಲೂ ಮಾಹಿತಿಯನ್ನು ಪಡೆದು ಪರಿಶೀಲಿಸುತ್ತದೆ. ಕೊನೆಕ್ಷಣದ ಸಂಭಾವ್ಯ ತೊಡಕುಗಳ ಪತ್ತೆಯಾಗಿ ಇದು ತಡಕಾಡುತ್ತದೆ. ಯಾವುದೇ ಹಂತದಲ್ಲಿ ಸೋರಿಕೆ ಅಥವಾ ನಿಧಾನ ಪ್ರವೃತ್ತಿ ಕಂಡುಬಂದರೆ, ಅದನ್ನು ಈ ಹಂತದಲ್ಲಿ ಪತ್ತೆ ಮಾಡಲಾಗುತ್ತದೆ ಹಾಗೂ ಈ ಕಂಪ್ಯೂಟರ್‌ಗಳು ಅಗತ್ಯ ಬಿದ್ದರೆ, ಉಡಾವಣೆಯನ್ನು ಸ್ಥಗಿತಗೊಳಿಸಬೇಕಾದ ನಿರ್ಧಾರವನ್ನೂ ಕೈಗೊಳ್ಳುತ್ತವೆ.
ಹಿಂದೆ ಕೆಲವು ಬಾರಿ ಇಂಥ ದೋಷಗಳು ಕಂಡುಬಂದ ಹಿನ್ನೆಲೆಯಲ್ಲಿ ಉಡಾವಣೆ ಸ್ಥಗಿತಗೊಳಿಸಿರುವ ನಿದರ್ಶನವೂ ಇದೆ ಎಂದು ಹಿರಿಯ ಅಕಾರಿಯೊಬ್ಬರು ಹೇಳಿದರು. ಜಿಎಸ್‌ಎಸ್‌ವಿ ವಾಹಕದಲ್ಲಿ ನೋದಕಗಳ ಸೋರಿಕೆ ಇದ್ದುದು, ಉಡಾವಣೆಗೆ ಒಂದು ಗಂಟೆ ಮುಂಚಿತವಾಗಿ ಪತ್ತೆಯಾದ ನಿದರ್ಶನವನ್ನು ವಿವರಿಸಿದರು. ಆದರೆ ತಲೆ ಕೆಡಿಸಿಕೊಳ್ಳದ ವಿಜ್ಞಾನಿಗಳು ಶಿಷ್ಟಾಚಾರವನ್ನು ಪಾಲಿಸಿ, ಈ ಸೋರಿಕೆ ತಡೆಯಲು ಸುರಕ್ಷಾ ಕ್ರಮಗಳನ್ನು ಅನುಸರಿಸಿದರು. ನಿಗದಿತ ಸಮಯಕ್ಕೇ ದೋಷ ಸರಿಪಡಿಸಿ, ಉಡಾಯಿಸಲಾಯಿತು ಎಂದು ಹೇಳಿದರು.
ಉಡಾವಣೆಗೆ ಮೂರು ಸೆಕೆಂಡ್ ಮೊದಲು ರೋಲ್ ಕಂಟ್ರೋಲ್ ಇಂಜಿನ್ ಉರಿಯಲಾರಂಭಿಸುತ್ತದೆ. ಕಂಪ್ಯೂಟರ್, ಇದು ನಿಗದಿತ ವೇಳಾಪಟ್ಟಿಯಂತೆ ನಡೆಯುತ್ತಿದೆಯೇ ಎಂದು ಖಚಿತಪಡಿಸಿದ ಬಳಿಕ, ಕೋರ್ ಹಾಗೂ ನಾಲ್ಕು ಪಟ್ಟಿಯ ಬೂಸ್ಟರ್‌ಗಳು ಉಡಾವಣೆ ಕ್ಷಣದಲ್ಲಿ ಉರಿಯಲಾರಂಭಿಸುತ್ತವೆ. ರಾಕೆಟ್‌ನ ಬಾಲದ ಭಾಗದಿಂದ ದಟ್ಟವಾದ ಹೊಗೆ ಹೊರಡುತ್ತದೆ. ಎಲ್ಲ ನಿರೀಕ್ಷೆಗಳಂತೆ ಇಂಧನ ದಹಿಸಲು ಆರಂಭಿಸಿದಾಗ ಎಲ್ಲರೂ ನಿರಾಳವಾಗುತ್ತಾರೆ. ಈ ಹಂತದಲ್ಲಿ ಇಂಧನದಿಂದ ವಾಹಕವನ್ನು ಮತ್ತು ಪೇಲೋಡ್ ಮೇಲಕ್ಕೆತ್ತಲು ಬೇಕಾಗುವ ಪ್ರಬಲ ಶಕ್ತಿ ದೊರಕುತ್ತದೆ. ಕ್ಷಣಮಾತ್ರದಲ್ಲೇ, ರಾಕೆಟ್ ಆಗಸದೆತ್ತರಕ್ಕೆ ಚಿಮ್ಮುತ್ತದೆ.
ಕುರುಪ್ ಸಭಾಗೃಹದ ಟೆರೇಸ್‌ನಲ್ಲಿ, ಇಸ್ರೋ ಉದ್ಯೋಗಿಗಳ ಸಂಬಂಕರು ಹಾಗೂ ವೈಯಕ್ತಿಕ ಅತಿಥಿಗಳು ಈ ಉಡಾವಣೆಯನ್ನು ವೀಕ್ಷಿಸಲು ಜಮಾಯಿಸಿದ್ದರು. ನಾನು ನನ್ನ ಸುತ್ತ ಇದ್ದ ಮುಖಗಳನ್ನು ಸೂಕ್ಷ್ಮವಾಗಿ ವೀಕ್ಷಿಸಿದೆ. ಬಹುತೇಕ ಎಲ್ಲರ ಮೊಗದಲ್ಲೂ ನಗುವಿತ್ತು. ಕೆಲವರು ಇನ್ನೂ ಗಮನ ಕೇಂದ್ರೀಕರಿಸಿದ್ದರು. ನಮ್ಮಲ್ಲಿ ಬಹುತೇಕ ಮಂದಿಗೆ ಈ ಅತ್ಯುನ್ನತ ತಾಂತ್ರಿಕ ನಡೆಯ ಚಲಿಸುವ ಭಾಗಗಳನ್ನು ಗ್ರಹಿಸಲು ಸಾಧ್ಯವಾಗಲಿಲ್ಲ. ಆದರೆ ಇದು ತೀರಾ ವಿಶೇಷ ಕ್ಷಣ ಎನ್ನುವುದು ನಮಗೆ ಖಾತ್ರಿಯಾಗಿತ್ತು. ಕೆಲವರಲ್ಲಿ ಆನಂದಭಾಷ್ಪಜಿನುಗುತ್ತಿತ್ತು. ಇದಕ್ಕೆ ಸೂರ್ಯ, ಅಚ್ಚರಿ ಹಾಗೂ ಹೆಮ್ಮೆ ಕಾರಣವಾಗಿರಬಹುದು.
ಕೃಪೆ: ಹಿಂದೂಸ್ತಾನ್ ಟೈಮ್ಸ್