ಸಾಲದ ಸಮಸ್ಯೆಗೆ ಇಸ್ಲಾಮಿಕ್ ಫೈನಾನ್ಸ್ ಪರಿಹಾರ
ನ್ಯೂಯಾರ್ಕ್, ಜೂ.24: ಸಾಲದ ಸಮಸ್ಯೆಗೆ ಇಸ್ಲಾಮಿಕ್ ಫೈನಾನ್ಸ್ ಪರಿಹಾರ ಒದಗಿಸಬಲ್ಲದು ಎಂದು ಸಿಟಿ ಗ್ರೂಪ್ ಮುಖ್ಯ ಆರ್ಥಿಕ ತಜ್ಞ ವಿಲೆಮ್ ಬ್ಯಾಟರ್ ಅಭಿಪ್ರಾಯ ಪಟ್ಟಿದ್ದಾರೆ.
ಹೆಚ್ಚುತ್ತಿರುವ ಕುಟುಂಬಗಳ ಸಾಲದ ಸಮಸ್ಯೆಗೆ ಇಂತಹ ಪರಿಹಾರವನ್ನು ಹೆಚ್ಚಿನ ಆರ್ಥಿಕ ತಜ್ಞರು ಶಿಫಾರಸು ಮಾಡದೇ ಇರುವ ಸಂದರ್ಭದಲ್ಲಿ ಬ್ಯಾಟರ್ ಅವರ ಹೇಳಿಕೆ ಸಾಕಷ್ಟು ಕುತೂಹಲ ಮೂಡಿಸಿದೆ.
ಕುಟುಂಬಗಳ ಸಾಲ ಪಡೆಯಲು ಅದಕ್ಕೆ ಭದ್ರತೆಯೊದಗಿಸಲು ಕುಟುಂಬಗಳ ಬಳಿ ಹೆಚ್ಚಿನದೇನೂ ಇರುವುದಿಲ್ಲವಾದುದರಿಂದ ಅವರು ದೊಡ್ಡ ಮೊತ್ತದ ಸಾಲಗಳನ್ನು ಪಡೆಯಲು ಅನರ್ಹರಾಗುತ್ತಾರೆ ಎಂದು ಹೇಳುವ ವಿಲೆಮ್, ಇಂತಹ ಸಂದರ್ಭದಲ್ಲಿ ಇಸ್ಲಾಮಿಕ್ ಮಾದರಿಯ ಅಡವು ಇಡುವ ಪದ್ಧತಿ ಸಹಕಾರಿಯಾಗುತ್ತದೆ. ಇಸ್ಲಾಮ್ ಧರ್ಮದಲ್ಲಿ ಬಡ್ಡಿ ಹೇರುವುದಕ್ಕೆ ನಿಷೇಧವಿರುವುದರಿಂದ, ಫೈನಾನ್ಶಿಯರ್‌ಗಳು ಬಾಡಿಗೆ ವಿಧಿಸುತ್ತಾರಲ್ಲದೆ ಸಾಲಗಾರರು ಕ್ರಮೇಣ ಆಸ್ತಿಯಲ್ಲಿ ಇಕ್ವಿಟಿ ಖರೀದಿಸಲು ಅನುಮತಿಸುತ್ತಾರೆ. ಧಾರ್ಮಿಕ ನಿಯಮಗಳನ್ನು ಅನುಸರಿಸುವುದರ ಜೊತೆಗೆ ಅಷ್ಟೊಂದೇನೂ ಸಮಸ್ಯೆಯೊಡ್ಡದ ಸಾಲವನ್ನೂ ಪಡೆದಂತಾಗುತ್ತದೆ ಎಂದು ವಿಲೆಮ್ ಹೇಳುತ್ತಾರೆ.
ಸಾಲಗಾರರಿಗೆ ಹಣದ ಸಮಸ್ಯೆ ಎದುರಾದಲ್ಲಿ ಅವರು ಇಕ್ವಿಟಿ ಖರೀದಿಯನ್ನು ನಿಲ್ಲಿಸಬಹುದು ಅಥವಾ ಈಗಾಗಲೇ ಖರೀದಿಸಿದ್ದನ್ನು ಮರಳಿ ಮಾರಾಟ ಮಾಡಬಹುದು. ಇಲ್ಲಿ ಸಾಲ ಹಿಂದಿರುಗಿಸಿಲ್ಲವೆಂಬ ನೆಪದಲ್ಲಿ ಅವರನ್ನು ಮನೆಯಿಂದ ಹೊರಗೆ ತಳ್ಳುವ ಅವಕಾಶ ಕಡಿಮೆ, ಎಂದೂ ಅವರು ವಿವರಿಸುತ್ತಾರೆ. ‘‘ಉತ್ತಮ ಫೈನಾನ್ಶಿಯಲ್ ಇಂಜಿನಿಯರಿಂಗ್’ಗೆ ಇಸ್ಲಾಮಿಕ್ ಅಡಮಾನ ಪದ್ಧತಿ ಒಂದು ವಿರಳ ಉದಾಹರಣೆ.