×
Ad

ಗೊರಕೆಯ ಕಿರಿಕಿರಿಗೆ ಶಾಶ್ವತ ಪರಿಹಾರ ಈ ಪುಟ್ಟ ಉಪಕರಣ !

Update: 2016-06-24 15:18 IST

ವಾಷಿಂಗ್ಟನ್, ಜೂ.24: ವಯಸ್ಕರು ನಿದ್ದೆ ಮಾಡುವಾಗ ಗೊರಕೆ ಹೊಡೆಯುವುದು ಸಾಮಾನ್ಯ. ಕೆಲವೊಮ್ಮೆ ಇದು ಇತರರಿಗೆ ಕಿರಿಕಿರಿಯೆನಿಸಿದರೆ ಇನ್ನೂ ಹಲವೊಮ್ಮೆ ಅದು ಗೊರಕೆ ಹೊಡೆಯುವವರಿಗೇ ಅಪಾಯಕಾರಿಯಾಗಿ ಅವರು ಸ್ಲೀಪ್ ಏಪ್ನಿಯಾ ಸಮಸ್ಯೆಯಿಂದ ಬಳಲಬಹುದು. ಈ ಸಮಸ್ಯೆಯಿರುವ ವ್ಯಕ್ತಿ ನಿದ್ರಿಸುತ್ತಿರುವಾಗ ಕೆಲವು ಬಾರಿ ಕ್ಷಣ ಕಾಲ ಉಸಿರಾಟ ನಿಲ್ಲುತ್ತದೆ. ಈ ಗೊರಕೆಯ ಸಮಸ್ಯೆ ನಿವಾರಿಸುವ ಸಲುವಾಗಿ ಸದ್ಯ ಕಂಟಿನ್ಯುವಸ್ ಪೊಸಿಟಿವ್ ಏರ್ ವೇ ಫ್ರೆಶರ್ ಡಿವೈಸ್ ಲಭ್ಯವಿದ್ದು, ಈ ಪ್ಲಾಸ್ಟಿಕ್ ಮುಖ ಕವಚವನ್ನು ರೋಗಿ ಮಲಗುವಾಗ ಮೂಗಿಗೆ ಸಿಕ್ಕಿಸಬೇಕಾಗುತ್ತದೆ. ಇದು ರೋಗಿಯ ಉಸಿರಾಟದ ನಳಿಕೆಗಳಲ್ಲಿ ಗಾಳಿ ಹರಿದು ಹೋಗುವಂತೆ ನೋಡಿಕೊಳ್ಳುತ್ತದೆಯಾದರೂ ಅದನ್ನು ಧರಿಸುವುದರಿಂದ ರೋಗಿಗೆ ಸ್ವಲ್ಪ ಅನಾನುಕೂಲತೆಯಾಗುವ ಸಂಭವವಿದೆ.

ಆದರೆ ಇದಕ್ಕಿಂತಲೂ ಉತ್ತಮ ಸಾಧನವೊಂದನ್ನು ಈಗ ಅಭಿವೃದ್ಧಿ ಪಡಿಸಲಾಗಿದ್ದು ಈ ಉಪಕರಣದ ಹೆಸರು ‘ಏರಿಂಗ್’ ಎಂದಾಗಿದೆ. ಈ ಸಾಧನವು ವಾಯು ಒತ್ತಡವನ್ನು ಬಳಸಿ ಉಸಿರಾಟದ ಟ್ಯೂಬುಗಳು ತೆರೆದೇ ಇರುವಂತೆ ನೋಡಿಕೊಳ್ಳುತ್ತವೆ. ರೋಗಿಯ ಉಸಿರಾಟದ ನಳಿಕೆಗಳಿಗೆ ನಿರಂತರ ಗಾಳಿ ಹರಿದು ಬರುತ್ತಿರುವುದರಿಂದ ಸ್ಲೀಪ್ ಏಪ್ನಿಯಾ ಸಮಸ್ಯೆ ಹಾಗೂ ಗೊರಕೆ ಸಮಸ್ಯೆಗೂ ಪರಿಹಾರ ಸಿಕ್ಕಿದಂತೆ ಆಗುತ್ತದೆ.

ತನ್ನ ಕಾರ್ಯ ನಿರ್ವಹಿಸಲು ಏರಿಂಗ್ ನೂರಾರು ಮೈಕ್ರೋ ಬ್ಲೋವರ್ ಪ್ಲೇಟುಗಳನ್ನು ಉಪಯೋಗಿಸುತ್ತದೆ. ಈ ಪ್ಲೇಟ್‌ಗಳು ಇಲೆಕ್ಟ್ರೋಸ್ಟೇಟಿಕ್ ಶಕ್ತಿಯ ಮುಖಾಂತರ ತೆರೆದು ಮುಚ್ಚಿಕೊಳ್ಳುತ್ತವೆ. ಸಿಲಿಕಾನ್ ರಬ್ಬರ್ ಕವಚವಿರುವ ಎರಡು ನೋಸ್ ಬಡ್‌ಗಳ ಮುಖಾಂತರ ಗಾಳಿ ಮನುಷ್ಯನ ದೇಹವನ್ನು ಪ್ರವೇಶಿಸುತ್ತದೆ, ಬಡ್‌ಗಳು ಮೂಗಿನೊಳಗೆ ಸೀಲ್‌ನಂತೆ ಅಂಟಿಕೊಂಡು ಈ ಸಾಧನ ರೋಗಿ ಮಲಗಿರುವಾಗ ಆತನ ಅಥವಾ ಆಕೆಯ ಮೂಗಿನಲ್ಲಿಯೇ ಇರುವಂತೆ ನೋಡಿಕೊಳ್ಳುತ್ತದೆ.

ಶಕ್ತಿಶಾಲಿ ಹಾಗೂ ಅಷ್ಟೇ ಹಗುರವಾಗಿರುವ ಝಿಂಕ್ ಏರ್ ಬ್ಯಾಟರಿಗಳ ಮೂಲಕ ಏರಿಂಗ್ ಕಾರ್ಯನಿರ್ವಹಿಸುತ್ತದೆ. ಈ ಸಾಧನ ಕೇವಲ ಎಂಟು ಗಂಟೆಗಳ ಕಾಲ ಮಾತ್ರ ಕೆಲಸ ನಿರ್ವಹಿಸುತ್ತದೆ. ಅದರ ಬ್ಯಾಟರಿಯನ್ನು ರಿಚಾರ್ಜ್ ಮಾಡಲು ಸಾಧ್ಯವಿಲ್ಲದ ಕಾರಣ ಈ ಸಾಧನವನ್ನು ಒಮ್ಮೆ ಮಾತ್ರ ಬಳಸಬಹುದಾಗಿದೆ.

ಪ್ರತಿಯೊಂದು ಏರಿಂಗ್ ಬೆಲೆ ಅಂದಾಜು ಮೂರು ಡಾಲರ್ ಆಗಬಹುದಾಗಿದ್ದು ಒಮ್ಮೆ ಉಪಯೋಗಿಸಿ ಬಿಸಾಡುವಂತಹ ಇಂತಹ ಸಾಧನಕ್ಕೆ ಇದು ದುಬಾರಿ ದರವೇ ಸರಿ. ಈ ಸಾಧನದ ಮಾದರಿಯನ್ನು ಅದರ ಅನ್ವೇಷಕ ಸ್ಟೀಫನ್ ಮಾರ್ಷ್ ಮುಂದಿನ ಕೆಲ ತಿಂಗಳುಗಳಲ್ಲಿ ತಯಾರಿಸಲಿದ್ದಾರೆಂದು ಏರಿಂಗ್ ಬ್ಲಾಗ್ ತಿಳಿಸಿದೆ.

courtesy: techinsider.io

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News