ಆದಷ್ಟು ಬೇಗ ಹೊರಡಿ : ಬ್ರಿಟನ್‌ಗೆ ಇಯು ನಾಯಕರ ಕರೆ
ಬ್ರಸೆಲ್ಸ್ (ಬೆಲ್ಜಿಯಂ), ಜೂ. 24: ಐರೋಪ್ಯ ಒಕ್ಕೂಟ (ಇಯು)ದಿಂದ ಹೊರಬರುವ ಮಾತುಕತೆಗಳನ್ನು ‘‘ಎಷ್ಟು ಸಾಧ್ಯವೋ ಅಷ್ಟು ಬೇಗ’’ ಆರಂಭಿಸಿ ಎಂಬುದಾಗಿ ಒಕ್ಕೂಟದ ಮುಖ್ಯಸ್ಥರು ಶುಕ್ರವಾರ ಬ್ರಿಟನ್‌ಗೆ ಸೂಚಿಸಿದ್ದಾರೆ.
ಈ ಕುರಿತ ಮಾತುಕತೆಗಳನ್ನು ತನ್ನ ಉತ್ತರಾಧಿಕಾರಿಗೆ ಬಿಡುವುದಾಗಿ ನಿರ್ಗಮನ ಪ್ರಧಾನಿ ಡೇವಿಡ್ ಕ್ಯಾಮರೂನ್ ಹೇಳಿರುವ ಹಿನ್ನೆಲೆಯಲ್ಲಿ ಈ ಸೂಚನೆ ನೀಡಲಾಗಿದೆ.
ಐರೋಪ್ಯ ಒಕ್ಕೂಟದಿಂದ ಹೊರಬರುವ ತೀರ್ಮಾನವನ್ನು ಜನಮತಗಣನೆಯಲ್ಲಿ ಬ್ರಿಟನ್ ನೀಡಿದ ಬಳಿಕ ಕ್ಯಾಮರೂನ್ ತನ್ನ ರಾಜೀನಾಮೆಯನ್ನು ಘೋಷಿಸಿದ್ದಾರೆ. ಅಕ್ಟೋಬರ್‌ನಲ್ಲಿ ತಾನು ಅಧಿಕಾರದಿಂದ ಕೆಳಗಿಳಿಯುವುದಾಗಿ ಅವರು ಹೇಳಿದ್ದಾರೆ.
‘‘ಬ್ರಿಟಿಶ್ ಜನತೆ ತೆಗೆದುಕೊಂಡಿರುವ ಈ ನಿರ್ಧಾರವನ್ನು ಜಾರಿಗೊಳಿಸುವ ಪ್ರಕ್ರಿಯೆ ಎಷ್ಟೇ ನೋವಿನದಾಗಿದ್ದರೂ, ಬ್ರಿಟಿಶ್ ಸರಕಾರ ಆದಷ್ಟು ಬೇಗ ಅದನ್ನು ಜಾರಿಗೊಳಿಸುವ ಪ್ರಕ್ರಿಯೆಯನ್ನು ಆರಂಭಿಸಬೇಕು ಎಂದು ನಾವು ನಿರೀಕ್ಷಿಸುತ್ತೇವೆ’’ ಎಂದು ಜಂಟಿ ಹೇಳಿಕೆಯೊಂದು ತಿಳಿಸಿದೆ.
‘‘ಈ ವಿಷಯದಲ್ಲಿನ ಯಾವುದೇ ವಿಳಂಬ ಅನಿಶ್ಚಿತತೆಯನ್ನು ಅನಗತ್ಯವಾಗಿ ಮುಂದುವರಿಸುತ್ತದೆ’’ ಎಂದು ಬ್ರಸೆಲ್ಸ್‌ನಲ್ಲಿ ನಡೆದ ತುರ್ತು ಸಭೆಯ ಬಳಿಕ ಹೊರಡಿಸಲಾದ ಹೇಳಿಕೆ ಅಭಿಪ್ರಾಯಪಟ್ಟಿದೆ.
ಐರೋಪ್ಯ ಒಕ್ಕೂಟದ ಅಧ್ಯಕ್ಷ ಡೊನಾಲ್ಡ್ ಟಸ್ಕ್, ಐರೋಪ್ಯ ಕಮಿಶನ್ ಮುಖ್ಯಸ್ಥ ಜೀನ್-ಕ್ಲಾಡ್ ಜಂಕರ್, ಐರೋಪ್ಯ ಒಕ್ಕೂಟ ಪಾರ್ಲಿಮೆಂಟ್ ನಾಯಕ ಮಾರ್ಟಿನ್ ಶುಲ್ಝ್ ಮತ್ತು ಡಚ್ ಪ್ರಧಾನಿ ಮಾರ್ಕ್ ರೂತ್ ಹೇಳಿಕೆಗೆ ಸಹಿ ಹಾಕಿದ್ದಾರೆ.