×
Ad

ಕಪ್ಪುಹಣ ಗವಾಕ್ಷಿ:ತೆರಿಗೆ ಇಲಾಖೆಯಿಂದ ಆಸ್ತಿ ಮೌಲ್ಯಮಾಪಕರ ಪಟ್ಟಿ ಬಿಡುಗಡೆ

Update: 2016-06-24 20:07 IST

ಹೊಸದಿಲ್ಲಿ,ಜೂ.24: ಈ ತಿಂಗಳು ಆರಂಭಗೊಂಡಿರುವ ಆದಾಯ ಘೋಷಣೆ ಯೋಜನೆ(ಐಡಿಎಸ್),2016ರ ಅಡಿ ದೇಶದೊಳಗಿನ ಕಪ್ಪುಹಣ ಮತ್ತು ಆಸ್ತಿಯನ್ನು ಘೋಷಿಸಲು ನೀಡಲಾಗಿರುವ ಒಂದು ಬಾರಿಯ ಅವಕಾಶವನ್ನು ಬಳಸಿಕೊಳ್ಳಲು ಬಯಸಿರುವವರಿಗಾಗಿ ದೇಶವ್ಯಾಪಿ ನೋಂದಾಯಿತ ಆಸ್ತಿ ಮೌಲ್ಯಮಾಪಕರ ಪಟ್ಟಿಯೊಂದನ್ನು ಆದಾಯತೆರಿಗೆ ಇಲಾಖೆಯು ಶುಕ್ರವಾರ ಪ್ರಕಟಿಸಿದೆ.

ಇಲಾಖೆಯ ಜಾಲತಾಣದಲ್ಲಿ ಪ್ರಕಟಿಸಲಾಗಿರುವ ಪಟ್ಟಿಯು ಸ್ಥಿರಾಸ್ತಿ, ಆಭರಣಗಳು, ಕಾರ್ಖಾನೆ ಮತ್ತು ಯಂತ್ರಗಳು, ಶೇರುಗಳು ಮತ್ತು ಸಾಲಪತ್ರಗಳು ಹಾಗೂ ಕೃಷಿಭೂಮಿಯ ವೌಲ್ಯಮಾಪಕರ ಹೆಸರುಗಳು ಮತ್ತು ವಿಳಾಸಗಳನ್ನು ಒಳಗೊಂಡಿದೆ.

ಯೋಜನೆಯಡಿ ಕಪ್ಪುಹಣ ಅಥವಾ ಕಪ್ಪುಆಸ್ತಿಯ ಮೌಲ್ಯವನ್ನು ಘೋಷಿಸುವಲ್ಲಿ ಸಂದಿಗ್ಧತೆ ಮತ್ತು ತೊಂದರೆಯ ಕುರಿತು ವಿವಿಧೆಡೆಗಳಿಂದ ಕೇಂದ್ರಿಯ ನೇರ ತೆರಿಗೆಗಳ ಮಂಡಳಿ(ಸಿಡಿಬಿಟಿ)ಗೆ ಹಲವಾರು ವಿಚಾರಣೆಗಳು ಬಂದಿದ್ದ ಹಿನ್ನೆಲೆಯಲ್ಲಿ ಈ ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ಹಿರಿಯ ಅಧಿಕಾರಿಯೋರ್ವರು ತಿಳಿಸಿದರು.

ಈ ಮೌಲ್ಯಮಾಪಕರು ಸಂಪತ್ತು ತೆರಿಗೆ ನಿಯಮಗಳಡಿ ಇಲಾಖೆಯಲ್ಲಿ ನೋಂದಣಿಗೊಂಡಿದ್ದಾರೆ. ತಮ್ಮ ತೆರಿಗೆಗೊಳಪಟ್ಟಿರದ ಆಸ್ತಿಗಳನ್ನು ಘೋಷಿಸಲು ಬಯಸಿರುವವರು ಅವುಗಳ ಮೌಲ್ಯಮಾಪನಕ್ಕಾಗಿ ಈ ವೌಲ್ಯಮಾಪಕರ ಸೇವೆಯನ್ನು ಬಳಸಿಕೊಳ್ಳಬಹುದಾಗಿದೆ.

ಐಡಿಎಸ್‌ನಡಿ ಅಕ್ರಮ ಸಂಪತ್ತನ್ನು ಘೋಷಿಸಲು ಸೆ.30ರವರೆಗೆ ಅವಕಾಶವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News