×
Ad

ಸಚಿವ ಯು.ಟಿ.ಖಾದರ್ ಅವರಿಗೊಂದು ಪತ್ರ

Update: 2016-06-24 20:54 IST

ರಿಗೆ,

ಶ್ರೀ ಯು.ಟಿ.ಖಾದರ್ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರು 

ಕರ್ನಾಟಕ ಸರಕಾರ

ಮಾನ್ಯರೆ,
                                                     ವಿಷಯ: ಪಡಿತರ ಚೀಟಿ ವಿಚಾರದಲ್ಲಿ ಈ ಕೆಳಕಂಡ ಅಂಶ ಪರಿಗಣಿಸುವ ಕುರಿತು

1) ಪಡಿತರ ಕಾರ್ಡು ಹೆಸರಲ್ಲಿ ವರ್ಷಕ್ಕೆ 2-3 ಸಲ ಅದೇ ಜನರ ಅದೇ ಆಧಾರ್ ಕಾರ್ಡು, ಅದೇ ವಾಸ ಸ್ಥಳದ ದೃಢೀಕರಣ ಪತ್ರ, ಅದೇ ಚುನಾವಣಾ ಗುರುತಿನ ಚೀಟಿಯನ್ನು ಕೊಡುವಂತೆ ಆದೇಶ ಹೊರಡಿಸುವುದನ್ನು ತಡೆಗಟ್ಟಿರಿ. ಈ ದಾಖಲಾತಿಗಳ ಅಗತ್ಯ ಇದ್ದರೆ ಕನಿಷ್ಠ ಐದು ವರ್ಷಕ್ಕೆ ಒಮ್ಮೆ ಪಡೆಯುವಂತೆ ನಿಯಮ ರೂಪಿಸಿ. ಆಹಾರ ಇಲಾಖೆಯ ಈ ಅತಿರೇಕದ ವರ್ತನೆಯಿಂದ ಸಾಮಾನ್ಯ ಜನರು ಅತ್ಯಂತ ಹೆಚ್ಚಿನ ಕಿರಿಕಿರಿ ಅನುಭವಿಸುತ್ತಿದ್ದಾರೆ. ಕೂಲಿ ಕಾರ್ಮಿಕರು, ದಿನಗೂಲಿಗಳಿಗೆ ಸಿಗುತ್ತಿರುವ ಈ ಪಡಿತರ ಕಾರ್ಡಿನ ಸೌಲಭ್ಯ ಸಹಕಾರಿ ನಿಜ. ಹಾಗಂತ ಅದೇ ಕಾರ್ಮಿಕರನ್ನು ತಮ್ಮ ಕೆಲಸ ಬಿಟ್ಟು ಗ್ರಾ ಪಂ ಕಚೇರಿ, ಆಹಾರ ಇಲಾಖೆ ಎದುರು ದಿನವಿಡೀ ಕಾದು ನಿಲ್ಲುವಂತೆ, ಅಲೆದಾಡುವಂತೆ ಮಾಡುವುದು ಸರಿಯಲ್ಲವಲ್ಲ.

2) ಅಲ್ಲದೇ ಪಡಿತರ ವಿಚಾರದಲ್ಲಿ ಗ್ರಾ ಪಂ ಕಛೇರಿಗಳಿಗೆ ತೆರಳುವ ಜನರಿಂದ ಬಲವಂತದ ಕಂದಾಯ ವಸೂಲಿ ಕಾರ್ಯಗಳು ಎಲ್ಲೆಡೆಯೂ ನಡೆಯುತ್ತಿದೆ. ಕಂದಾಯ ಕಟ್ಟಿದ ರಸೀದಿ ಕಳೆದುಕೊಳ್ಳುವ ಜನರಿಂದ ಹಳೆಯ ವರ್ಷದ್ದು, ಈ ವರ್ಷದ್ದು, ಹಿಂದಿನ ವರ್ಷದ್ದು ಎಂದು ಒಂದೇ ವರ್ಷದಲ್ಲಿ 2-3 ಸಲ ಕರ ವಸೂಲಾತಿ ಮಾಡುತ್ತಿರುವ ಗಂಭೀರ ಆರೋಪಗಳು ಜನರದ್ದಾಗಿದೆ. ಹೀಗಾಗಿ ಪಡಿತರ ಚೀಟಿ ವಿಚಾರದಲ್ಲಿ ಗ್ರಾಪಂ ಗಳಿಗೆ ತೆರಳುವ ಜನರಿಂದ ಕಂದಾಯ ವಸೂಲಿ ಮಾಡದಿರುವಂತೆ ಕಟ್ಟು ನಿಟ್ಟಿನ ಸೂಚನೆ ನೀಡಬೇಕು. ಕಂದಾಯ ವಸೂಲಿಗೆ ಪ್ರತಿ ಗ್ರಾಪಂ ಗಳಲ್ಲಿ ಪ್ರತ್ಯೇಕ ಸಿಬ್ಬಂದಿಗಳ ನೇಮಕ ನಡೆದಿರುತ್ತದೆ. ಪ್ರತಿ ದಿನವೂ ಹಳ್ಳೀ, ಹಳ್ಳಿಗಳಿಗೆ ತೆರಳಿ ಕರ ವಸೂಲಿ ಹೊರತುಪಡಿಸಿದರೆ ಅವರಿಗೆ ಬೇರೆ ಕೆಲಸವೇ ಇರುವುದಿಲ್ಲ. ಹೀಗಾಗಿ ಅವರು ಪಂಚಾಯತ್ ಕಛೇರಿಗೆ ಕಾರ್ಡು ವಿಚಾರದ ಕೆಲಸಕ್ಕಾಗಿ ಕೂಲಿ ಕೆಲಸ ಬಿಟ್ಟು ಬರುವ ಜನರಿಂದ ಕರ ವಸೂಲಿ ನಡೆಸದೇ, ಮನೆ, ಮನೆಗೆ ತೆರಳಿ ಬೇರೆ ಸಮಯದಲ್ಲಿ ಕರ ವಸೂಲಿ ಮಾಡಿಕೊಳ್ಳಲಿ.

3) ಶ್ರೀಸಾಮಾನ್ಯರು ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದ ಬಳಿಕ ಅಧಿಕಾರಿಗಳು ಅರ್ಜಿದಾರರ ಮನೆಗೆ ತೆರಳಿ ಅರ್ಜಿಯನ್ನು ಪರಿಶೀಲನೆ ನಡೆಸಿ ಕಾರ್ಡು ಮಂಜೂರಾತಿ ಮಾಡಿದರೆ ಉತ್ತಮವಾದೀತು. ಅರ್ಜಿ ಪಡೆದು ಕಾರ್ಡು ವಿತರಣೆ ನಂತರ ಪರಿಶೀಲನೆ ಮಾಡಿ ಕಾರ್ಡು ಕೊಡಬೇಕೋ, ಬೇಡವೋ ಎಂದು ನಿರ್ಧರಿಸುವುದು, ಪದೇ, ಪದೇ ದಾಖಲೆ ಪಡೆಯುವುದು ಸರಿಯಾದ ಕ್ರಮವಲ್ಲ.

4) ಗ್ಯಾಸ್ ಸೌಲಭ್ಯ ಪಡೆದವರಿಗೆ ಸೀಮೆ ಎಣ್ಣೆ ನಿರಾಕರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗ್ಯಾಸ್ ಇರೋ ಮನೆಗಳಲ್ಲಿ ಕೆಲವು ಸಲ ಅನಿವಾರ್ಯವಾಗುವ ಸೀಮೆಣ್ಣೆ ಇಲ್ಲದೇ ಪರದಾಟವೇ ನಡೆಯುತ್ತಿದೆ. ಆದ್ದರಿಂದ ಕನಿಷ್ಠ ಒಂದು ಲೀಟರ್ ಸೀಮೆಣ್ಣೆಯನ್ನು ಹಳ್ಳಿಯ ಜನರ ಅಗತ್ಯವನ್ನು ಮನಗಂಡು ಒದಗಿಸಬೇಕಾಗಿದೆ.

5) ಸಾಮಾನ್ಯವಾಗಿ ಪ್ರತಿ ಮನೆಗಳಲ್ಲಿ ಹೆಣ್ಣು ಮಕ್ಕಳ ಹೆಸರು ಕಾರ್ಡುಗಳಿಂದ ತೆಗೆಸುವುದು ಬೇರೆ ಕಡೆ ಸೇರಿಸುವುದು ನಡೆಯುತ್ತದೆ. ಆದರೆ ಈ ಒಂದು ಹೆಸರು ತೆಗೆಸಲು/ಸೇರಿಸಲು ಆ ಮನೆಯಲ್ಲಿರುವ ಎಲ್ಲಾ ಮಂದಿಯೂ ಗ್ರಾಪಂ ಕಚೇರಿಗೆ ತೆರಳಿ ಹೆಬ್ಬೆಟ್ಟಿನ ಗುರುತು ಮತ್ತು ಫೋಟೋ ನೀಡುವ ಕಾನೂನು ಜಾರಿಯಲ್ಲಿದೆ. ಈ ಕಾನೂನಿನಿಂದ ಬಡವರ್ಗದ ಮತ್ತು ಮಧ್ಯಮ ವರ್ಗದ ಜನರಿಗೆ ತೀವ್ರ ಸಮಸ್ಯೆ ಎದುರಾಗುತ್ತಿದೆ. ಆದ್ದರಿಂದ ಯಜಮಾನ ಓರ್ವರ ಹಾಜರಿಯಲ್ಲಿ ಹೆಸರು ಸೇರ್ಪಡೆ ಮತ್ತು ತೆರವು ಮಾಡಲು ಆದೇಶ ಹೊರಡಿಸಬೇಕು.

ಇದರಿಂದ ಸಾವಿರಾರು ಕುಟುಂಬಗಳಿಗೆ ಅನುಕೂಲವಾಗುತ್ತದೆ ಎಂಬುದನ್ನು ಮರೆಯದಿರಿ.

ಇತಿ ತಮ್ಮ ವಿಶ್ವಾಸಿ,

ಅಝೀಝ್ ಕಿರುಗುಂದ
ಚಿಕ್ಕಮಗಳೂರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News