ಆನ್‌ಲೈನ್ ಕೋರ್ಸ್‌ಗಳ ಅಂಕವನ್ನು ನಿಯಮಿತ ಕೋರ್ಸ್‌ಗೆ ವರ್ಗಾಯಿಸುವ ಮಾರ್ಗ ಸೂತ್ರ ಸಿದ್ಧ
ಹೊಸದಿಲ್ಲಿ, ಜೂ.24: ಅಂಗೀಕೃತ ಆನ್‌ಲೈನ್ ಕೋರ್ಸ್‌ಗಳಲ್ಲಿ ಗಳಿಸಿದ ಅಂಕಗಳನ್ನು ನಿಯಮಿತ ತರಗತಿ ಕೋರ್ಸ್‌ಗಳಿಗೆ ವರ್ಗಾಯಿಸಲು ಚೌಕಟ್ಟೊಂದನ್ನು ಒದಗಿಸುವ ಮಾರ್ಗಸೂಚಿಯನ್ನು ಯುಜಿಸಿ ಹೊರಡಿಸಲಿದೆ.
ವಿಶ್ವವಿದ್ಯಾನಿಲಯ ಅನುದಾನ ಆಯೋಗ (ಸ್ವಯಂನ ಮೂಲಕ ಆನ್‌ಲೈನ್ ಶಿಕ್ಷಣ ಕೋರ್ಸ್ ಗಳಿಗಾಗಿ ವರ್ಗಾವಣೆ ಚೌಕಟ್ಟು) ನಿಯಮ, 2016 ಇತ್ತೀಚೆಗೆ ನಡೆದ ಆಯೋಗದ ಸಭೆ ಯಲ್ಲಿ ಅನು ಮೋದನೆಗೊಂಡಿದ್ದು, ಮಾನವ ಸಂಪನ್ಮೂಲಾಭಿ ವೃದ್ಧಿ ಸಚಿವಾಲಯದ ಮಂಜೂರಾತಿ ಪಡೆದಿದೆ. ಅದನ್ನು ಶೀಘ್ರವೇ ಅಧಿಸೂಚಿಸಲಾಗುವುದೆಂದು ಅಧಿಕೃತ ಮೂಲಗಳು ತಿಳಿಸಿವೆ.
ಎಚ್‌ಆರ್‌ಡಿ ಸಚಿವಾಲಯದ ಸಮಗ್ರ ಮುಕ್ತ ಆನ್‌ಲೈನ್ ಕೋರ್ಸುಗಳ(ಎಂಒಒಕೆ) ವೇದಿಕೆ, ಸ್ವಯಂ(ಯುವ ಹಾಗೂ ಆಸಕ್ತ ಮನಸ್ಸುಗಳಿಂದ ಸಕ್ರಿಯ ಕಲಿಕೆಯ ಶಿಕ್ಷಣ ವೆಬ್)ಯನ್ನು ಗಮನದಲ್ಲಿರಿಸಿ ಕೊಂಡು ಮಾರ್ಗದರ್ಶಿ ಸೂತ್ರಗಳನ್ನು ರಚಿಸಲಾಗಿದೆ.
ಸರಕಾರದ ಮಹತ್ತ್ವಾಕಾಂಕ್ಷಿ ಸ್ವಯಂ ಯೋಜನೆ ಯನ್ವಯ 3 ಕೋಟಿ ಶಿಕ್ಷಣಾರ್ಥಿಗಳಿಗಾಗಿ ಅಂತಹ 2 ಸಾವಿರ ಕೋರ್ಸ್‌ಗಳನ್ನು ಆರಂಭಿಸುವ ನಿರೀಕ್ಷೆಯಿದೆ.
ಈ ಯೋಜನೆಯ ಮೂಲಕ ಹಿಂದುಳಿದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಆನ್‌ಲೈನ್ ಕೋರ್ಸ್ ಗಳನ್ನು ಒದಗಿಸುವ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳ ಬೋಧನಾ ಸೌಲಭ್ಯವನ್ನು ಪಡೆಯ ಬಹುದಾಗಿದೆ. ಆ ಮೂಲಕ ದೇಶದಲ್ಲಿ ಉನ್ನತ ಶಿಕ್ಷಣದ ಒಟ್ಟಾರೆ ಗುಣ ಮಟ್ಟವನ್ನು ಹೆಚ್ಚಿಸಬಹುದಾಗಿದೆ.
ಹೊಸ ಯುಜಿಸಿ ನಿಯಮದಂತೆ, ಶಿಕ್ಷಣ ಸಂಸ್ಥೆ ಗಳು ತಮ್ಮ ಶೈಕ್ಷಣಿಕ ಅಗತ್ಯವನ್ನು ಪರಿಗಣಿಸಿ ಅಂಕ ವರ್ಗಾವಣೆಗೆ ಯಾವ ಕೋರ್ಸ್‌ಗಳಿಗೆ ಅನು ಮತಿ ನೀಡಬೇಕೆಂಬುದನ್ನು ನಿರ್ಧರಿಸಬಹುದು. ಆದಾಗ್ಯೂ, ಸಂಸ್ಥೆಯೊಂದು ಒಂದು ಸೆಮಿಸ್ಟರ್‌ನಲ್ಲಿ ಸ್ವಯಂ ನನ್ವಯ ಆನ್‌ಲೈನ್ ವಿಭಾಗದ ಮೂಲಕ ನಿರ್ದಿಷ್ಟ ಕಾರ್ಯ ಕ್ರಮವೊಂದಕ್ಕೆ ನೀಡಲಾಗುವ ಒಟ್ಟು ಸೀಟ್‌ಗಳಲ್ಲಿ ಶೇ.20ರ ವರೆಗೆ ಮಾತ್ರ ಅವಕಾಶ ನೀಡಬಹುದು.
ಉನ್ನತ ಶಿಕ್ಷಣದ ಲಭ್ಯತೆಯನ್ನು ವಿಸ್ತರಿಸುವುದು ಹಾಗೂ ತಂತ್ರಜ್ಞಾನದ ಮುನ್ನಡೆಯನ್ನು ಉಪಯೋಗಿಸಿ ಅದರ ಖರ್ಚನ್ನು ಕಡಿಮೆಗೊಳಿಸುವುದು ಇದರ ಗುರಿಯಾಗಿದೆಯೆಂದು ಹಿರಿಯಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹೊಸ ಮಾರ್ಗದರ್ಶಿ ಸೂತ್ರವು ಕೊಠಡಿಯೊಳಗಿನ ಬೋಧನೆಗೆ ಆನ್‌ಲೈನ್ ಕಲಿಕೆಯನ್ನು ಪರ್ಯಾಯ ವಾಗಿಸುವ ಉದ್ದೇಶ ಇರಿಸಿರುವುದರಿಂದ, ಆನ್‌ಲೈನ್ ಕೋರ್ಸ್‌ಗಳನ್ನು ಆಯ್ಕೆ ಮಾಡುವಾಗ ಅವುಗಳನ್ನು ನಡೆಸಲು ಸೂಕ್ತ ಬೋಧಕ ಸಿಬ್ಬಂದಿಯ ಅಲಭ್ಯತೆಯಂತಹ ಅಂಶಗಳನ್ನು ಗಮನದಲ್ಲಿರಿಸುವಂತೆ ಸಂಸ್ಥೆಗಳಿಗೆ ಸಲಹೆ ನೀಡಲಾಗಿದೆ.
ಮುಂದಿನ ಸೆಮಿಸ್ಟರ್‌ನಲ್ಲಿ ನೀಡಬೇಕಾದ ಆನ್‌ಲೈನ್ ಕೋರ್ಸ್‌ಗಳ ಪಟ್ಟಿಯನ್ನು ಜೂ.1 ಹಾಗೂ ನ.1ರಂದು ಶಿಕ್ಷಣ ಸಂಸ್ಥೆಗಳ ರಿಜಿಸ್ಟ್ರಾರ್‌ಗಳಿಗೆ ಸ್ವಯಂ ಅಧಿಸೂಚಿಸಲಿದೆಯೆಂದು ಯುಜಿಸಿ ನಿಯಮಗಳು ಹೇಳುತ್ತವೆ. ಆದಾಗ್ಯೂ, ಈ ಕಾರ್ಯಕ್ರಮದ ವೇಳೆ ಪ್ರಾಯೋಗಿಕ ತರಗತಿ ಹಾಗೂ ಪರೀಕ್ಷೆಗಳ ವೇಳೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲು ಸಮನ್ವಯಕಾರನೊಬ್ಬನನ್ನು ಸಂಸ್ಥೆಗಳು ನೇಮಿಸಬೇಕಾಗಿದೆ.
ಅಂತಿಮ ಪರೀಕ್ಷೆ ಮುಗಿದ 4 ವಾರಗಳೊಳಗೆ ವಿದ್ಯಾರ್ಥಿಗಳಿಗೆ ಹಾಗೂ ಅವರ ಮಾತೃ ಸಂಸ್ಥೆಗೆ ಅಂತಿಮ ಅಂಕಗಳು ಅಥವಾ ದರ್ಜೆಯ ಕುರಿತು ತಿಳಿಸಬೇಕೆಂದು ಮಾರ್ಗಸೂಚಿ ಹೇಳಿದೆ.