‘ವಿಚ್ಛೇದನ’ ಸವಾಲಿನ ಬಗ್ಗೆ ಫಡ್ನವೀಸರ ಸ್ಪಷ್ಟೀಕರಣ ಕೇಳಿದ ಶಿವಸೇನೆ
ಮುಂಬೈ, ಜೂ.24: ಬಿಜೆಪಿಯ ಪ್ರಕಟನೆಯೊಂದು ಮಿತ್ರಪಕ್ಷ ಶಿವಸೇನೆಗೆ ಮೈತ್ರಿಕೂಟದಿಂದ ಹೊರ ನಡೆಯುವಂತೆ ಸವಾಲು ಹಾಕಿದ ಒಂದು ದಿನದ ಬಳಿಕ, ಈ ವಿಷಯದ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ಶಿವಸೇನೆಯು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ರನ್ನು ಆಗ್ರಹಿಸಿದೆ. ತಾನು ಈ ಲೇಖನವನ್ನು ಗಂಭೀರವಾಗಿ ಪರಿಗಣಿಸಿದ್ದು, ಇದು ಬಿಜೆಪಿಯ ಅಧಿಕೃತ ನಿಲುವೇ ಎಂಬುದನ್ನು ತಿಳಿಸುವಂತೆ ಅದು ಕೇಳಿದೆ.
ರಾಜ್ಯ ಬಿಜೆಪಿ ಘಟಕದ ಪಾಕ್ಷಿಕ ‘ಮನೋಗತ್’ನಲ್ಲಿ ‘ರಾವುತ್‌ರೇ ನೀವು ಯಾವಾಗ ತಲಾಕ್ ಹೇಳುವಿರಿ?’ ಎಂಬ ಶಿರೋನಾಮೆಯ ಬಿಜೆಪಿ ವಕ್ತಾರ ಮಾಧವ ಭಂಡಾರಿಯವರ ಲೇಖನವು, ಮೈತ್ರಿಯನ್ನು ಭದ್ರವಾಗಿರಿಸಲು ಕಳೆದ ಒಂದೂವರೆ ದಶಕದಲ್ಲಿ ಬಿಜೆಪಿ ಮಾಡಿರುವ ತ್ಯಾಗವನ್ನು ವಿವರಿಸುತ್ತ, ಶಿವಸೇನೆಗೆ ‘ವಿಚ್ಛೇದನ’ ಮಾಡುವಂತೆ ಸವಾಲು ಹಾಕಿದ್ದರು.
ಲೇಖನವು ಬಾಲಿವುಡ್‌ನ ‘ಶೋಲೆ’ ಚಿತ್ರ ಹಾಗೂ ಅಸ್ರಾಣಿ ನಟಿಸಿದ್ದ ಅದರ ಜೈಲರ್‌ನ ಪಾತ್ರದ ವಿವರಣೆ ನೀಡುತ್ತ, ಪೊಲೀಸರಿಗೆ ಬೇರೆ ಬೇರೆ ದಿಕ್ಕುಗಳಿಗೆ ಮಾರ್ಚ್ ಮಾಡುವಂತೆ ಜೈಲರ್ ಆದೇಶಿಸುತ್ತಾನೆ. ಬಳಿಕ ನೋಡಿದರೆ ಆತನ ಹಿಂದೆ ಯಾರೂ ಇರುವುದಿಲ್ಲವೆಂದು ಮಾರ್ಮಿಕವಾಗಿ ಹೇಳಿತ್ತು.
ಸರಕಾರದಿಂದ ತಾವು ಹೊರ ನಡೆದರೆ ಶಿವಸೇನೆಯ ಯಾವನೇ ಒಬ್ಬನೂ ತಮ್ಮ ಬೆನ್ನ ಹಿಂದೆ ಉಳಿಯುವುದಿಲ್ಲವೆಂಬ ಸಂಶಯ ಬಹುಶಃ ಸಂಜಯ ರಾವತ್ ಹಾಗೂ ಅವರ ಪಕ್ಷಾಧ್ಯಕ್ಷ ಉದ್ಭವ ಠಾಕ್ರೆಯವರಿಗಿರಬೇಕೆಂದು ಅದು ಟೀಕಿಸಿದೆ.
ಲೇಖನಕ್ಕೆ ಪ್ರತಿಕ್ರಿಯಿಸಿದ ಶಿವಸೇನಾ ಸಂಸದ ರಾವತ್, ನೀತಿ ನಿರ್ಧಾರಗಳ ಬಗ್ಗೆ ಟೀಕೆ ಮಾಡಬೇಕೇ ಹೊರತು ವೈಯಕ್ತಿಕ ಮಟ್ಟದಲ್ಲಲ್ಲ ಎಂದಿದ್ದಾರೆ.
ಬಿಜೆಪಿ ತನ್ನದೇ ಸರಕಾರವನ್ನು ಮುಗಿಸಲು ಪ್ರಯತ್ನಿಸುತ್ತಿರುವಂತಿದೆ. ತಾವು ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಅವರ ಸರಕಾರ ತಮ್ಮ ಬೆಂಬಲದ ಮೇಲೆ ನಿಂತಿದೆಯೆಂಬುದು ಅವರಿಗೆ ನೆನಪಿರಲಿ. ಇಲ್ಲದಿದ್ದಲ್ಲಿ ಅವರಿಗೆ ಛಗನ್ ಭುಜಬಲ್, ಸುನೀಲ್ ತತ್ಕರೆ ಹಾಗೂ ಅಜಿತ್ ಪವಾರ್‌ರ(ಎನ್‌ಸಿಪಿಯನ್ನುಲ್ಲೇಖಿಸಿ) ಬೆಂಬಲ ಪಡೆಯುವ ಆಯ್ಕೆಯಿದೆ. ಆ ಬಳಿಕ ಜನರೇ ಅವರಿಗುತ್ತರಿಸುತ್ತಾರೆಂದು ರಾವತ್ ಹೇಳಿದ್ದಾರೆ.
ಕೇಂದ್ರ ಹಾಗೂ ರಾಜ್ಯದ ಬಿಜೆಪಿ ನೇತೃತ್ವದ ಸರಕಾರಗಳು ನಿಜಾಂ ಸರಕಾರಕ್ಕಿಂತಲೂ ಕೆಟ್ಟವೆಂದು ಇತ್ತೀಚೆಗೆ ರಾವತ್ ಹೇಳಿದ್ದರು. ಅವರ ಈ ‘ನಿಜಾಂ’ ಉಲ್ಲೇಖವನ್ನು ಲೇಖನ ಟೀಕಿಸಿತ್ತು.