ಭೂ ದಾಖಲೆಗಾಗಿ ನಾನೂ ಲಂಚ ನೀಡಿದ್ದೆ: ಪರ್ಸೆಕರ್
ಪಣಜಿ, ಜೂ.24: ಮೂವತ್ತೆಂಟು ವರ್ಷಗಳ ಹಿಂದೆ, ಜಮೀನು ದಾಖಲೆಗಳಿಗಾಗಿ ತಾನೂ ಲಂಚವನ್ನು ನೀಡಿದ್ದೆ. ಆದರೆ, ದಾಖಲೆಗಳು ಮಾತ್ರ ತನಗೆ ಇಂದಿಗೂ ದೊರೆತಿಲ್ಲವೆಂದು ಗೋವಾದ ಮುಖ್ಯಮಂತ್ರಿ ಲಕ್ಷ್ಮೀಕಾಂತ್ ಪರ್ಸೆಕರ್ ಹೇಳಿದ್ದಾರೆ.
ಆಗ ತಾನು ಶಾಸಕನಾಗಿರಲಿಲ್ಲ. ಜಿಲ್ಲಾಧಿಕಾರಿ ಕಚೇರಿಯ ವ್ಯಕ್ತಿಯೊಬ್ಬನಿಗೆ ತಾನು ಹಿಡುವಳಿ ಆದೇಶದ ಪ್ರಮಾಣೀಕೃತ ಪ್ರತಿಗಾಗಿ ಲಂಚ ನೀಡಿದ್ದೆ. ಆದರೆ, ಅದು ತನಗೆ ಸಿಗಲೇ ಇಲ್ಲ. ತನಗೆ ಆ ದಾಖಲೆಯು ಅತ್ಯಂತ ಅವಶ್ಯವಿತ್ತು. ಅದನ್ನು ಕೇವಲ ಆ ವ್ಯಕ್ತಿಯಿಂದ ಪಡೆಯಬಹುದೆಂದು ತಾನು ನಿರ್ಧರಿಸಿದ್ದೆ. ಆದರೆ, ಅವನಿಗೆ ಎಷ್ಟು ಹಣ ಕೊಡಬೇಕೆಂಬುದು ತನಗೆ ಗೊತ್ತಿರಲಿಲ್ಲವೆಂದು ಗೋವಾದಲ್ಲಿ ಗುರುವಾರ ಎಸ್‌ಎಂಎಸ್ ಆಧಾರಿತ ಭೂದಾಖಲೆ ಸೇವೆಯ ಉದ್ಘಾಟನಾ ಸಮಾರಂಭದಲ್ಲಿ ಅವರು ತಿಳಿಸಿದರು.
ಈ ಘಟನೆ ತಾನು ಶಾಸಕನಾಗುವ ಮೊದಲು ನಡೆದಿದೆಯೆಂದ ಪರ್ಸೆಕರ್, ಆದಾಗ್ಯೂ, ಕಂಬ ಕಂಬ ಅಲೆದರೂ ತನಗೆ ಆ ದಾಖಲೆ ಸಿಗಲಿಲ್ಲ ಎಂದರು.
ಆ ಬಳಿಕ ತಾನು ಶಾಸಕನಾದೆ. ಆದರೂ, ಇಂದಿನ ವರೆಗೂ ತನಗೆ ಆದೇಶ ಲಭಿಸಿಲ್ಲವೆಂದು ಅವರು ತಿಳಿಸಿದರು.