ಮೆಹಬೂಬಾಗೆ 12 ಸಾವಿರ ಮತಗಳ ಭರ್ಜರಿ ಜಯ
ಶ್ರೀನಗರ, ಜೂ.25: ಅನಂತನಾಗ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಶನಿವಾರ 12 ಸಾವಿರಕ್ಕೂ ಹೆಚ್ಚು ಮತಗಳಿಂದ ಜಯ ಗಳಿಸಿದ್ದಾರೆ.
10 ಸುತ್ತುಗಳ ಮತ ಎಣಿಕೆಯ ಬಳಿಕ ಮೆಹಬೂಬಾ 16 ಸಾವಿರಕ್ಕೂ ಹೆಚ್ಚು ಮತಗಳನ್ನು ಗಳಿಸಿದ್ದರೆ, ಅವರ ನಿಕಟ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಹಿಲಾಲ್ ಅಹಮದ್ ಶಾ 5,529 ಮತಗಳನ್ನು ಗಳಿಸಿದರು. ನ್ಯಾಶನಲ್ ಕಾನ್ಪರೆನ್ಸ್ ಅಭ್ಯರ್ಥಿ ಇಫ್ತಿಖಾರ್ ಮಿಸ್ಗರ್ 2,702 ಮತಗಳೊಂದಿಗೆ 3ನೆ ಸ್ಥಾನದಲ್ಲಿದ್ದಾರೆಂದು ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ಚುನಾವಣಾ ವಿಜಯಕ್ಕಾಗಿ ಮೆಹಬೂಬಾರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.
ಅನಂತನಾಗ್ ಕ್ಷೇತ್ರದ ಶಾಸಕ ಹಾಗೂ ಆಗಿನ ಮುಖ್ಯಮಂತ್ರಿ ಮುಫ್ತಿ ಮುಹಮ್ಮದ್ ಸಯೀದ್ ಈ ವರ್ಷ ಜ.7ರಂದು ನಿಧನರಾದ ಕಾರಣ ಅಲ್ಲಿ ಉಪಚುನಾವಣೆ ಅನಿವಾರ್ಯವಾಯಿತು. 57ರ ಹರೆಯದ ಮೆಹಬೂಬಾ, ಕಣದಲ್ಲಿದ್ದ 8 ಅಭ್ಯರ್ಥಿಗಳಲ್ಲಿ ಒಬ್ಬರಾಗಿದ್ದರು.
ಜೂ.22ರಂದು ಮತದಾನ ನಡೆದಿತ್ತು. ಕ್ಷೇತ್ರದ ಒಟ್ಟು 28,466 ಮತದಾರರಲ್ಲಿ 356 ಮಂದಿ ನೋಟಾ ಚಲಾಯಿಸಿರುವುದು ಕುತೂಹಲಕಾರಿ ಯಾಗಿದೆ. ಜಮ್ಮು-ಕಾಶ್ಮೀರ ವಿಧಾನಸಭೆಯಲ್ಲಿ ಇದು 4ನೆಯ ಅವಧಿಯಾಗಿದೆ.