145 ಹೋವಿಟ್ಝರ್ ಫಿರಂಗಿಗಳ ಖರೀದಿಗೆ ರಕ್ಷಣಾ ಸಚಿವಾಲಯದ ಹಸಿರು ನಿಶಾನೆ
ಹೊಸದಿಲ್ಲಿ,ಜೂ.25: ಸುದೀರ್ಘ ಕಾಲದಿಂದ ನನೆಗುದಿಗೆ ಬಿದ್ದಿದ್ದ ಅಮೆರಿಕದಿಂದ 5,000 ಕೋ.ರೂ.ವೌಲ್ಯದ 145 ಹಗುರ ಹೋವಿಟ್ಝರ್‌ಗಳನ್ನು ಖರೀದಿಸುವ ಪ್ರಸ್ತಾವನೆಗೆ ರಕ್ಷಣಾ ಸಚಿವಾಲಯವು ಶನಿವಾರ ರಾತ್ರಿ ಹಸಿರು ನಿಶಾನೆಯನ್ನು ತೋರಿಸಿದೆ. 18 ಧನುಷ್ ಆರ್ಟಿಲರಿ ಗನ್‌ಗಳ ಸಗಟು ಉತ್ಪಾದನೆಗೂ ಅದು ಒಪ್ಪಿಗೆ ಸೂಚಿಸಿದೆ. ಬೋಫೊರ್ಸ್ ಹಗರಣದ ನಂತರ ಮೂರು ದಶಕಗಳಲ್ಲಿ ಇದೇ ಮೊದಲ ಬಾರಿಗೆ ಇಂತಹ ಶಸ್ತ್ರಾಸ್ತ್ರ ವ್ಯವಸ್ಥೆಯನ್ನು ಖರೀದಿಸಲಾಗುತ್ತಿದೆ.
ರಕ್ಷಣಾ ಸಚಿವ ಮನೋಹರ ಪಾರಿಕ್ಕರ್ ಅಧ್ಯಕ್ಷತೆಯ ರಕ್ಷಣಾ ಖರೀದಿ ಮಂಡಳಿ(ಡಿಎಸಿ)ಯು 28,000 ಕೋ.ರೂ.ಗಳ ನೂತನ ಯೋಜನೆಗಳು ಸೇರಿದಂತೆ 18 ಪ್ರಸ್ತಾವನೆಗಳನ್ನು ಚರ್ಚೆಗೆತ್ತಿಕೊಂಡಿತ್ತು.
‘ಬಯ್ ಇಂಡಿಯನ್’ ವಿಭಾಗದಡಿ 13,000 ಕೋ.ರೂ.ವೆಚ್ಚದಲ್ಲಿ ಆರು ಮುಂದಿನ ಪೀಳಿಗೆಯ ಕ್ಷಿಪಣಿ ನೌಕೆಗಳ ನಿರ್ಮಾಣ ಪ್ರಸ್ತಾವನೆಗೂ ಸಚಿವಾಲಯದ ಒಪ್ಪಿಗೆ ದೊರಕಿದ್ದು, ಇದರಿಂದಾಗಿ ಟೆಂಡರ್‌ಗಳನ್ನು ಕರೆಯಲು ನೌಕಾಪಡೆಯ ಮಾರ್ಗ ಸುಗಮಗೊಂಡಿದೆ.
25 ಕಿ.ಮೀ.ದಾಳಿ ವ್ಯಾಪ್ತಿಯನ್ನು ಹೊಂದಿರುವ ಈ ಫಿರಂಗಿಗಳ ಪೂರೈಕೆ ಭಾರತದಲ್ಲಿ ಆಗಲಿದ್ದು, ಪೂರೈಕೆಯ ಅವಧಿಯನ್ನು ಡಿಎಸಿ ಕಡಿತಗೊಳಿಸಿದೆ. ಆದರೆ ನಿಖರವಾದ ಗಡುವಿನ ಬಗ್ಗೆ ಯಾವುದೇ ಮಾಹಿತಿ ಲಭಿಸಿಲ್ಲ ಎಂದು ಮೂಲಗಳು ತಿಳಿಸಿವೆ.ಫಿರಂಗಿಗಳ ಖರೀದಿಗೆ ಆಸಕ್ತಿ ವ್ಯಕ್ತಪಡಿಸಿ ಭಾರತವು ಅಮೆರಿಕಕ್ಕೆ ಮನವಿ ಪತ್ರವನ್ನು ಕಳುಹಿಸಿತ್ತು ಎಂದು ರಕ್ಷಣಾ ಸಚಿವಾಲಯದ ಹಿರಿಯ ಅಧಿಕಾರಿಯೋರ್ವರು ತಿಳಿಸಿದರು.
ಈ ಫಿರಂಗಿಗಳನ್ನು ಚೀನಾಕ್ಕೆ ಹೊಂದಿಕೊಂಡಿರುವ ಅರುಣಾಚಲ ಪ್ರದೇಶ ಮತ್ತು ಲಡಾಖ್‌ಗಳಲ್ಲಿಯ ಎತ್ತರದ ಪ್ರದೇಶಗಳಲ್ಲಿ ನಿಯೋಜಿಸಲಾಗುವುದು.ಭಾರತದ ಮನವಿಗೆ ಸ್ಪಂದಿಸಿ ಅಮೆರಿಕವು ಒಪ್ಪಿಗೆ ಪತ್ರವನ್ನು ಕಳುಹಿಸಿತ್ತು. ಶನಿವಾರ ತನ್ನ ಸಭೆಯಲ್ಲಿ ಖರೀದಿ ಷರತ್ತುಗಳು ಮತ್ತು ನಿಬಂಧನೆಗಳನ್ನು ಪರಿಶೀಲಿಸಿದ ಡಿಎಸಿಯು ತನ್ನ ಒಪ್ಪಿಗೆಯನ್ನು ನೀಡಿತು.
ಫಿರಂಗಿಗಳ ತಯಾರಿಕೆ ಸಂಸ್ಥೆ ಬಿಎಇ ಸಿಸ್ಟಮ್ಸ್ 25 ಫಿರಂಗಿಗಳನ್ನು ಸಿದ್ಧ ಸ್ಥಿತಿಯಲ್ಲಿ ಪೂರೈಸಲಿದೆ. ಉಳಿದವುಗಳನ್ನು ಭಾರತದಲ್ಲಿ ಮಹೀಂದ್ರಾದ ಸಹಭಾಗಿತ್ವದಲ್ಲಿ ತಲೆಯೆತ್ತಲಿರುವ ಜೋಡಣೆ ಕೇಂದ್ರದಲ್ಲಿ ಜೋಡಿಸಲಿದೆ. ಹೆಲಿಕಾಪ್ಟರ್‌ಗಳಲ್ಲಿ ಸಾಗಿಸಬಹುದಾದ ಹೋವಿಟ್ಝರ್‌ಗಳ ಖರೀದಿಗಾಗಿ ಹತ್ತು ವರ್ಷಗಳ ಹಿಂದೆ ಪ್ರಸ್ತಾವಿಸಲಾಗಿತ್ತು.