ವ್ಯಾಪಂ ಆರೋಪಿ ಶರ್ಮನಿಗೆ ಜಾಮೀನು ಬಿಡುಗಡೆ
ಭೋಪಾಲ್, ಜೂ.25: ಮಧ್ಯಪ್ರದೇಶ ಹೈಕೋರ್ಟ್ ಜಾಮೀನು ಮಂಜೂರು ಮಾಡಿದ ಎರಡು ದಿನಗಳ ಬಳಿಕ, ವ್ಯಾಪಂ ಹಗರಣದ ಆರೋಪಿ, ಗಣಿ ಉದ್ಯಮಿ ಸುಧೀರ್ ಶರ್ಮ ಶುಕ್ರವಾರ ಭೋಪಾಲದ ಕಾರಾಗೃಹದಿಂದ ಹೊರ ಬಂದಿದ್ದಾರೆ. ಆ ವೇಳೆ ಅವರನ್ನು ಕುತೂಹಲಿತ ಬೆಂಬಲಿಗರು ಸ್ವಾಗತಿಸಿದ್ದಾರೆ.
ಶುಕ್ರವಾರ ಸಂಜೆ 4:30ರ ಸುಮಾರಿಗೆ ಶರ್ಮನನ್ನು ಬಿಡುಗಡೆಗೊಳಿಸಲಾಗಿದೆಯೆಂದು ಬಂದಿಖಾನೆಯ ಅಧೀಕ್ಷಕ ಅಖಿಲೇಶ್ ತೋಮರ್ ಪಿಟಿಐಗೆ ತಿಳಿಸಿದ್ದಾರೆ.
ಕಾರಾಗೃಹದಿಂದ ಹೊರ ಬಂದೊಡನೆಯೇ ಶರ್ಮ, ಹತ್ತಿರದ ಹನುಮಾನ್ ದೇಗುಲಕ್ಕೆ ಭೇಟಿ ನೀಡಿದ್ದಾನೆ. ಅಲ್ಲಿ 50ರಷ್ಟು ವಾಹನಗಳಲ್ಲಿ ಬಂದಿದ್ದ ಆತನ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿತಿಂಡಿ ವಿತರಿಸಿದರು ಹಾಗೂ ಶರ್ಮನನ್ನು ಮಾಲೆ ತೊಡಿಸಿ ಸ್ವಾಗತಿಸಿದರು.
ತಾನು ಅಮಾಯಕನಾಗಿದ್ದೇನೆ. ತನಗೆ ನ್ಯಾಯಾಂಗದ ಮೇಲೆ ವಿಶ್ವಾಸವಿದೆ. ತನಗೆ ನ್ಯಾಯ ದೊರೆಯಲಿದೆಯೆಂದು ಸುಮಾರು 2 ವರ್ಷಗಳ ಸೆರೆಮನೆ ವಾಸದ ಬಳಿಕ ಹೊರಬಂದಿರುವ ಶರ್ಮ ಪತ್ರಕರ್ತರೊಡನೆ ಹೇಳಿದರು.
ತನ್ನ ಬಂಧನದ ಹಿಂದೆ ರಾಜಕೀಯ ಪಿತೂರಿಯ ಸಾಧ್ಯತೆಯನ್ನು ಆತ ತಳ್ಳಿಹಾಕಿದ್ದಾನೆ.