ಕೋರ್ಟ್ ಪತ್ನಿಯನ್ನೂ ಕೊಡಿಸಲಿಲ್ಲ, ಕಾರು, ಚಿನ್ನವನ್ನೂ ಕೊಡಿಸಲಿಲ್ಲ: ಗಲ್ಫ್ ಉದ್ಯೋಗಿ ಕಂಗಾಲು
ಕೊಲ್ಲಂ, ಜೂನ್ 26: ಆನ್‌ಲೈನ್ ಚಾಟಿಂಗ್‌ನಲ್ಲಿ ಪರಿಚಿತನಾದ ಯುವಕನೊಂದಿಗೆ ಗಲ್ಫ್ ಉದ್ಯೋಗಿಯೊಬ್ಬನ ಪತ್ನಿ ಆರು ಪವನ್ ಚಿನ್ನ ಹಾಗೂ ಐಷಾರಾಮಿ ಕಾರಿನೊಂದಿಗೆ ಹೊರಟು ಹೋಗಿದ್ದಾಳೆ. ಪತಿ ಗಲ್ಫ್‌ನಿಂದ ಮರಳಿದ ಗುರುವಾರ ರಾತ್ರಿ ಪತ್ನಿ ಗೆಳೆಯನೊಂದಿಗೆ ಓಡಿ ಹೋಗಿದ್ದಾಳೆ.
ಕರುನಾಗಪಳ್ಳಿ ಕಲೇಶ್ವರಪುರಂ ನಿವಾಸಿಗಳಾದ ಇವರ ವಿವಾಹ ಕಳೆದ ವರ್ಷವಷ್ಟೇ ಆಗಿತ್ತು. ಪತ್ನಿ ಇಂಜಿನಿಯರಿಂಗ್ ಓದಿದ್ದಳು. ಮದುವೆಯಾದ ಬಳಿಕ ಪತಿ ಗಲ್ಫ್‌ಗೆ ಹೋಗಿದ್ದ. ಆದರೆ ಈ ನಡುವೆ ತನ್ನ ಪತ್ನಿ ಯಾರೊಂದಿಗೊ ಸಂಬಂಧ ಹೊಂದಿದ್ದಾಳೆಂದು ಸುಳಿವು ಸಿಕ್ಕಿ ಆತ ಪತ್ನಿಗೆ ತಿಳಿಸದೆಯೇ ಊರಿಗೆ ಬಂದಿದ್ದ. ಆದರೆ ಪತ್ನಿಗೆ ಪತಿಯ ಅಕಾಲಿಕ ಆಗಮನದಿಂದ ಶಂಕೆ ಹುಟ್ಟಿಕೊಂಡಿತ್ತು. ತನಗೆ ಪರಿಚಿತನಾದ ತಿರುವನಂತಪುರಂನ ವಿಷ್ಣು ಎಂಬಾತನೊಂದಿಗೆ ಪತಿ ಬಂದ ದಿನ ರಾತ್ರಿ ಓಡಿಹೋಗಿದ್ದಳು. ಹೋಗುವಾಗ ಆರುಪವನ್ ಚಿನ್ನ ಅದ್ದೂರಿ ಕಾರನ್ನೂ ಒಯ್ದಿದ್ದಳು.
ಪತಿ ಪೊಲೀಸರಿಗೆ ದೂರು ನೀಡಿದ ಪ್ರಕಾರ ಇಬ್ಬರನ್ನೂ ಪತ್ತೆಹಚ್ಚಿದ ಪೊಲೀಸರು ಕೋರ್ಟ್‌ಗೆ ಹಾಜರಾಗಲು ಹೇಳಿದ್ದರು. ಯುವತಿ ಪ್ರೇಮಿಯೊಂದಿಗೆ ಕೋರ್ಟ್‌ನಲ್ಲಿ ಹಾಜರಾಗಿದ್ದಳು. ಯುವತಿಯನ್ನು ಪ್ರೇಮಿಯೊಂದಿಗೆ ಹೋಗಲು ಕೋರ್ಟ್ ಅನುಮತಿ ನೀಡಿತು. ಕಾರು ಬಂಗಾರ ಕೂಡಾ ಮರಳಿ ಸಿಗದೆ ಪತಿ ಬರಿಗೈಯಲ್ಲಿ ಮರಳಬೇಕಾಯಿತು.