×
Ad

ಎನ್‌ಎಸ್‌ಜಿ ಸದಸ್ಯತನದ ಭಾರತದ ಆಸೆ ಜೀವಂತ

Update: 2016-06-26 19:28 IST

ಹೊಸದಿಲ್ಲಿ, ಜೂ.26: ಈ ವಾರ ಸಿಯೋಲ್‌ನಲ್ಲಿ ನಡೆದ ಪರಮಾಣು ಪೂರೈಕೆದಾರರ ಗುಂಪಿನ(ಎನ್‌ಎಸ್‌ಜಿ) ಸರ್ವ ಸದಸ್ಯರ ಸಭೆಯಲ್ಲಿ ಭಾರತವು ಗುಂಪಿನ ಸದಸ್ಯತ್ವ ಪಡೆಯಲು ವಿಫಲವಾಗಿರಬಹುದು. ಆದರೆ, ಈ ವರ್ಷ ಅದರ ಸದಸ್ಯತ್ವ ಪಡೆಯುವ ಭಾರತದ ಆಸೆ ಇನ್ನೂ ಜೀವಂತವಿದೆ.

ಭಾರತದ ಸದಸ್ಯತ್ವಕ್ಕೆ ಚೀನದ ಪ್ರಬಲ ವಿರೋಧದ ಹೊರತಾಗಿಯೂ, ಭಾರತದಂತಹ ಪ್ರಸರಣ ತಡೆ ಒಪ್ಪಂದಕ್ಕೆ(ಎನ್‌ಪಿಟಿ) ಸಹಿ ಹಾಕದ ದೇಶಗಳನ್ನು ಗುಂಪಿಗೆ ಸೇರಿಸಿಕೊಳ್ಳುವ ಪ್ರಕ್ರಿಯೆಯ ಬಗ್ಗೆ ಚರ್ಚಿಸಲು ಈ ವರ್ಷಾಂತ್ಯದೊಳಗೆ ಪುನಃ ಸಭೆ ನಡೆಸಲು ಎನ್‌ಎಸ್‌ಜಿ ನಿರ್ಧರಿಸಿದೆಯೆಂದು ಎನ್‌ಡಿಟಿವಿ ತಿಳಿಸಿದೆ.

ಎರಡನೆ ಸಭೆಯ ಸಲಹೆ ಮೆಕ್ಸಿಕೊದಿಂದ ಬಂದಿದ್ದು, ಅದನ್ನು ಚೀನ ವಿರೋಧಿಸಿತ್ತು. ಆದರೆ, ಅದರ ಆಕ್ಷೇಪವನ್ನು ಮೂಲೆಗೆ ತಳ್ಳಲಾಯಿತೆಂದು ಮೂಲಗಳು ಹೇಳಿವೆ.

ಸಭೆಯ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಆದರೆ, ಅದು ಈ ವರ್ಷಾಂತ್ಯದೊಳಗೆ ನಡೆಯಬಹುದು. ಭಾರತದ ಸದಸ್ಯತ್ವದ ಕುರಿತು ಅನೌಪಚಾರಿಕ ಸಮಾಲೋಚನೆಗಾಗಿ ಎನ್‌ಎಸ್‌ಜಿ ಸಮಿತಿಯೊಂದನ್ನು ರಚಿಸಿದೆ. ಅದರ ನೇತೃತ್ವವನ್ನು ಅರ್ಜೆಂಟೀನದ ರಾಯಭಾರಿ ರಫೇಲ್ ಗ್ರೋಸಿಯವರಿಗೆ ನೀಡಲಾಗಿದೆಯೆಂದು ಬೆಳವಣಿಗೆಗಳ ಬಗ್ಗೆ ತಿಳಿದಿರುವ ರಾಜತಂತ್ರಜ್ಞರು ತಿಳಿಸಿದ್ದಾರೆ.

ಈ ವರ್ಷಾಂತ್ಯದೊಳಗೆ ಭಾರತವು ಎನ್‌ಎಸ್‌ಜಿಯ ಪೂರ್ಣಪ್ರಮಾಣದ ಸದಸ್ಯನಾಗಲು ಮುಂದೆ ದಾರಿಯೊಂದಿದೆ. ಆ ಬಗ್ಗೆ ತಮಗೆ ಭರವಸೆಯಿದೆ. ಅದಕ್ಕೆ ಸ್ವಲ್ಪ ಕೆಲಸವಾಗಬೇಕಾಗಿದೆ. ಆದರೆ, ಈ ವರ್ಷಾಂತ್ಯದೊಳಗೆ ಭಾರತವು ಗುಂಪಿನ ಪೂರ್ಣಪ್ರಮಾಣದ ಸದಸ್ಯನಾಗುವುದೆಂಬ ವಿಶ್ವಾಸ ತಮಗಿದೆಯೆಂದು ಅಮೆರಿಕದ ಹಿರಿಯಧಿಕಾರಿಯೊಬ್ಬರು ಶುಕ್ರವಾರ ಪಿಟಿಐಗೆ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News