×
Ad

ಕೋಚ್ ಆಯ್ಕೆಯ ವೇಳೆ ಆಟಗಾರರನ್ನು ಮರೆತ ಬಿಸಿಸಿಐ

Update: 2016-06-26 23:48 IST

ಹೊಸದಿಲ್ಲಿ, ಜೂ.26: ಅನಿಲ್ ಕುಂಬ್ಳೆ ಅವರನ್ನು ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ಆಯ್ಕೆ ಮಾಡುವ ಮೊದಲು ಎಲ್ಲರ ಅಭಿಪ್ರಾಯಪಡೆಯಲಾಗಿತ್ತು ಎಂದು ಬಿಸಿಸಿಐ ಧರ್ಮಶಾಲಾದಲ್ಲಿ ಘಂಟಾಘೋಷವಾಗಿ ಘೋಷಿಸಿತ್ತು.

  ಆದರೆ, ಮೂಲಗಳ ಪ್ರಕಾರ, ಹಾಟ್‌ಶೀಟ್‌ಗೆ(ಮುಖ್ಯಕೋಚ್) ಅಭ್ಯರ್ಥಿಯನ್ನು ಆಯ್ಕೆ ಮಾಡುವ ಮೊದಲು ಭಾರತ ತಂಡದ ಯಾವೊಬ್ಬ ಆಟಗಾರರನ ಅಭಿಪ್ರಾಯವನ್ನು ಬಿಸಿಸಿಐ ಪಡೆದಿರಲಿಲ್ಲ.

ಕ್ರಿಕೆಟ್ ಸಲಹಾ ಸಮಿತಿಯ ಸದಸ್ಯರುಗಳಾದ-ಸಚಿನ್ ತೆಂಡುಲ್ಕರ್, ಸೌರವ್ ಗಂಗುಲಿ, ವಿವಿಎಸ್ ಲಕ್ಷ್ಮಣ್ ಹಾಗೂ ಸಂಚಾಲಕ ಸಂಜಯ್ ಜಗದಾಳೆಗೆ ಮುಖ್ಯ ಕೋಚ್ ಹುದ್ದೆಯ ಅಂತಿಮ ಪಟ್ಟಿ ತಯಾರಿಸುವ ಸಂಪೂರ್ಣ ಅಧಿಕಾರವನ್ನು ಬಿಸಿಸಿಐ ನೀಡಿತ್ತು ಎನ್ನಲಾಗಿದೆ.

ಕುಂಬ್ಳೆ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸುವ ತನಕ ಭಾರತೀಯ ಕ್ರಿಕೆಟಿಗರು ರವಿ ಶಾಸ್ತ್ರಿ ಅವರ ಬೆಂಬಲಕ್ಕೆ ನಿಂತಿದ್ದರು. ಕುಂಬ್ಳೆ ಇಲ್ಲವೇ ಶಾಸ್ತ್ರಿ ನಡುವೆ ಯಾರನ್ನು ಆಯ್ಕೆ ಮಾಡಬೇಕೆಂಬ ಬಗ್ಗೆ ಭಿನ್ನಾಭಿಪ್ರಾಯ ಕೇಳಿಬಂದಿತ್ತು ಎಂದು ಮೂಲಗಳು ತಿಳಿಸಿವೆ.

ರವಿ ಶಾಸ್ತ್ರಿ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದ ಆಕಾಂಕ್ಷಿಗಳಲ್ಲಿ ಮುಂಚೂಣಿಯಲ್ಲಿದ್ದರು. ಈ ಹಿನ್ನೆಲೆಯಲ್ಲಿ ಬಿಸಿಸಿಐ ಆಟಗಾರರನ್ನು ಸಂಪರ್ಕಿಸುವ ಗೋಜಿಗೆ ಹೋಗಲಿಲ್ಲ. ರವಿ ಶಾಸ್ತ್ರಿ ತಂಡದ ನಿರ್ದೇಶಕರಾಗಿದ್ದ ಅವಧಿಯಲ್ಲಿ ವಿರಾಟ್ ಕೊಹ್ಲಿ ಎಲ್ಲ ಮೂರು ಮಾದರಿ ಪಂದ್ಯಗಳಲ್ಲಿ ನಾಯಕನಾಗಬೇಕೆಂದು ಆಗಾಗ ಒತ್ತಾಯಪಡಿಸುತ್ತಿದ್ದರು. ಇದು ಬಿಸಿಸಿಐಗೆ ಪಥ್ಯವಾಗಲಿಲ್ಲ ಎನ್ನಲಾಗಿದೆ.

ಶನಿವಾರ ಬಿಸಿಸಿಐ ಮುಖ್ಯ ಕೋಚ್ ಕುಂಬ್ಳೆ ಅವರನ್ನು ಸಂಪರ್ಕಿಸಿದ ಬಳಿಕ ವೆಸ್ಟ್‌ಇಂಡೀಸ್ ಪ್ರವಾಸಕ್ಕೆ ಬ್ಯಾಟಿಂಗ್ ಹಾಗೂ ಫೀಲ್ಡಿಂಗ್ ವಿಭಾಗಕ್ಕೆ ಸಹಾಯಕ ಕೋಚ್‌ಗಳಾಗಿ ಸಂಜಯ ಬಂಗಾರ್ ಹಾಗೂ ಅಭಯ್ ಶರ್ಮರನ್ನು ಆಯ್ಕೆ ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News