×
Ad

ಹಳೆಯ ವಿಮಾನಗಳ ಆಮದು ನೀತಿ ಸಡಿಲಿಕೆ

Update: 2016-06-26 23:50 IST

ಹೊಸದಿಲ್ಲಿ,ಜೂ.26: ಹಳೆಯ ವಿಮಾನಗಳ ಆಮದಿಗೆ ಸಂಬಂಧಿಸಿದ ಎರಡು ದಶಕಗಳಷ್ಟು ಹಳೆಯದಾದ ನಿಯಮಗಳನ್ನು ಸರಕಾರವು ತಿದ್ದುಪಡಿಗೊಳಿಸಿದೆ. ದೇಶೀಯ ವಿಮಾನಯಾನ ಸಂಸ್ಥೆಗಳು ಈಗ 18 ವರ್ಷಗಳವರೆಗಿನ ಹಳೆಯ ವಿಮಾನಗಳನ್ನು ಆಮದು ಮಾಡಿಕೊಳ್ಳಬಹುದಾಗಿದೆ. ಈ ಕ್ರಮವು ಪಾದೇಶಿಕ ಸಂಪರ್ಕಜಾಲವನ್ನು ಹೆಚ್ಚಿಸುವ ಸರಕಾರದ ಮಹತ್ವಾಕಾಂಕ್ಷಿ ಪ್ರಯತ್ನಗಳಿಗೆ ಪುಷ್ಟಿ ನೀಡುವ ನಿರೀಕ್ಷೆಯಿದೆ.

ಈವರೆಗೆ 15 ವರ್ಷಗಳಿಗಿಂತ ಹಳೆಯ ವಿಮಾನಗಳನ್ನು ಆಮದು ಮಾಡಿಕೊಳ್ಳುವಂತಿರಲಿಲ್ಲ.
 ಬೃಹತ್ ಬೆಳವಣಿಗೆಯ ವಿಪುಲ ಅವಕಾಶಗಳುಳ್ಳ ದೇಶೀಯ ವಾಯುಯಾನ ಕ್ಷೇತ್ರದಲ್ಲಿ ಉದ್ಯಮವನ್ನು ಸುಲಭಗೊಳಿಸುವ ಪ್ರಯತ್ನಗಳ ಅಂಗವಾಗಿ ನಾಗರಿಕ ವಾಯುಯಾನ ಮಹಾ ನಿರ್ದೇಶನಾಲಯ(ಡಿಜಿಸಿಎ)ವು 1993,ಜುಲೈನಲ್ಲಿ ಜಾರಿಗೆ ಬಂದಿದ್ದ ನಿಯಮಗಳನ್ನು ಪರಿಷ್ಕರಿಸಿದೆ. ಇದರಂತೆ ದೇಶೀಯ ವಿಮಾನಯಾನ ಸಂಸ್ಥೆಗಳು 10,000 ಅಡಿಗಳಿಗೂ ಹೆಚ್ಚಿನ ಎತ್ತರದಲ್ಲಿ ಕ್ಯಾಬಿನ್ ಒತ್ತಡವನ್ನು ತಡೆದುಕೊಳ್ಳುವಲ್ಲಿ ಸಮರ್ಥವಾಗಿರುವ 18 ವರ್ಷಗಳವರೆಗಿನ ಹಳೆಯ ವಿಮಾನಗಳನ್ನು ಆಮದು ಮಾಡಿಕೊಳ್ಳಬಹುದಾಗಿದೆ.
ಪರಿಷ್ಕೃತ ನಿಯಮಗಳಂತೆ ಸರಕು ಸಾಗಣೆಗೆ ಬಳಸುವ ವಿಮಾನಗಳು 25 ವರ್ಷಗಳಿಗಿಂತ ಕಡಿಮೆ ಹಳೆಯದಾಗಿರಬೇಕು. ವಿಮಾನಗಳು ಹಳೆಯದಾದಷ್ಟೂ ಅಪಘಾತಗಳು ಹೆಚ್ಚುತ್ತವೆಯೇ ಎಂಬ ಬಗ್ಗೆ ಅಂತಾರಾಷ್ಟ್ರೀಯ ವೈಮಾನಿಕ ಉದ್ಯಮರಂಗವು ಅಧ್ಯಯನಗಳನ್ನು ನಡೆಸಿದೆ. 18 ವರ್ಷಗಳವರೆಗಿನ ಹಳೆಯ ವಿಮಾನಗಳು ಅಪಘಾತಕ್ಕೆ ಗುರಿಯಾಗುತ್ತವೆಂದು ಅಧ್ಯಯನಗಳು ಸ್ಪಷ್ಟವಾಗಿ ಸಾಬೀತುಗೊಳಿಸಿಲ್ಲ ಎಂದು ಡಿಜಿಸಿಎ ಹೇಳಿದೆ.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News