ಪ್ರಜಾಪ್ರಭುತ್ವ ನಮ್ಮ ಶಕ್ತಿ: ಮೋದಿ
ಹೊಸದಿಲ್ಲಿ, ಜೂ.26: ಪ್ರಜಾಪ್ರಭುತ್ವವು ನಮ್ಮ ಶಕ್ತಿ. ನಾವು ಸದಾ ನಮ್ಮ ಪ್ರಜಾಪ್ರಭುತ್ವದ ಹಂದರವನ್ನು ಬಲಪಡಿಸಬೇಕು. ಪ್ರಜಾಪ್ರಭುತ್ವದಲ್ಲಿ ಜನರ ಭಾಗವಹಿಸುವಿಕೆ ಮುಖ್ಯವಾದುದು. ಜನರ ಧ್ವನಿಯನ್ನು ದಮನಿಸಿದ್ದ ದಿನವೊಂದಿತ್ತು. ಆದರೆ, ಭಾರತದ ಜನ ಈಗ ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಅಭಿವ್ಯಕ್ತಿಸುತ್ತಿದ್ದಾರೆಂದು ಪ್ರಧಾನಿ ನರೇಂದ್ರ ಮೋದಿ ಅವರು ಅಭಿಪ್ರಾಯಪಟ್ಟಿದ್ದಾರೆ.
ತನ್ನ 21ನೆ ‘ಮನ್‌ಕೀ ಬಾತ್’ ರೇಡಿಯೊ ಕಾರ್ಯಕ್ರಮದಲ್ಲಿ ತನ್ನ ಚಿಂತನೆಗಳನ್ನು ಹೊರಹಾಕಿದ್ದಾರೆ.
‘ಮನ್‌ಕೀ ಬಾತ್’ ಕಾರ್ಯಕ್ರಮವನ್ನು ಆಗಾಗ ಟೀಕಿಸಲಾಗುತ್ತಿದೆ. ನಮ್ಮದು ಪ್ರಜಾಪ್ರಭುತ್ವವಾದುದರಿಂದ ಅದು ಸಾಧ್ಯವಾಗಿದೆ. 1975ರ ಜೂ.25-26ರಂದು ಭಾರತದಲ್ಲಿ ತುರ್ತುಸ್ಥಿತಿ ಘೋಷಿಸಿದ್ದುದು ನೆನಪಿದೆಯೇ? ಎಂದು ಅವರು ಕೇಳಿದರು.
ಅನೇಕರು, ‘ರೇಟ್ ಮೈ ಗವರ್ನಮೆಂಟ್’ ಬಗ್ಗೆ ಅಭಿಪ್ರಾಯಗಳನ್ನು ಕಳುಹಿಸಿದ್ದಾರೆ. ಸಲಹೆ ಕಳುಹಿಸಿ ಸರಕಾರದ ವೌಲ್ಯಮಾಪನ ನಡೆಸಲು ಸಮಯವನ್ನು ಉಪಯೋಗಿಸಿದ 3 ಲಕ್ಷ ಜನರಿಗೆ ಶಿರಬಾಗುತ್ತೇನೆಂದು ಪ್ರಧಾನಿ ಹೇಳಿದ್ದಾರೆ.
ಜಗತ್ತು ಜೂ.21ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಅದ್ದೂರಿಯಾಗಿ ನಡೆಸಿದೆ. ಭಾರತ ಹಾಗೂ ಪ್ರಪಂಚದಾದ್ಯಂತ ಹಲವು ಮಂದಿ ಯೋಗಾಭ್ಯಾಸ ಮಾಡಿದ್ದಾರೆ. ಯೋಗದ ಸಂಬಂಧ ಅಂಚೆ ಚೀಟಿಗಳು ಬಿಡುಗಡೆಯಾಗುತ್ತಿವೆ. ಸಾಮಾಜಿಕ ಜಾಲತಾಣ ಟ್ವಿಟ್ಟರ್ ಸಹ ವಿಶೇಷ ಸ್ಫೂರ್ತಿಯಿಂದ ಯೋಗ ದಿನದಲ್ಲಿ ಕೈಜೋಡಿಸಿದೆ. ವಿಶ್ವಸಂಸ್ಥೆಯ ಮೇಲೆ ಯೋಗದ ಬಿಂಬ ಜನಪ್ರಿಯವಾಗಿದೆ. ನಾವು ಯೋಗವು ಹೇಗೆ ಡಯಾಬಿಟಿಸನ್ನು ನಿಯಂತ್ರಿಸ ಬಹುದೆಂಬುದರ ಕುರಿತು ಚಿಂತನೆ ನಡೆಸಬೇಕಾಗಿದೆ ಯೆಂದು ಪ್ರಧಾನಿ ಹೇಳಿದ್ದಾರೆ.
ಕಳೆದ ಕೆಲವು ವಾರಗಳಲ್ಲಿ ದೇಶದ ವಿವಿಧ ಭಾಗಗಳಲ್ಲಿ ಮಳೆಯಾಗಿರುವ ಬಗ್ಗೆ ನಮಗೆ ಧನಾತ್ಮಕ ವಾರ್ತೆ ಬಂದಿದೆ. ಮುಂಗಾರು ದೇಶಾದ್ಯಂತ ಆಗಮಿಸಿದ್ದು, ರೈತರಿಗೆ ಶುಭ ಹಾರೈಸುತ್ತಿದ್ದೇನೆಂದು ಅವರು ತಿಳಿಸಿದ್ದಾರೆ.
ನಮ್ಮ ರೈತರಂತೆಯೇ ನಮ್ಮ ವಿಜ್ಞಾನಿಗಳು ಕೂಡ ದೇಶವನ್ನು ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯುವುದಕ್ಕಾಗಿ ಕಠಿಣವಾಗಿ ಕೆಲಸ ಮಾಡುತ್ತಿದ್ದಾರೆ. ನಿನ್ನೆ ತಾನು ಪುಣೆಯಲ್ಲಿ ಉಪಗ್ರಹವೊಂದನ್ನು ತಯಾರಿಸಿದ್ದ ಕಾಲೇಜು ವಿದ್ಯಾರ್ಥಿಗಳನ್ನು ಭೇಟಿಯಾಗಿದ್ದೆ. ಕೆಲವು ದಿನಗಳ ಹಿಂದೆ ಆ ಉಪಗ್ರಹವೂ ಇನ್ನೂ ಕೆಲವು ಉಪಗ್ರಹಗಳೊಂದಿಗೆ ಕಕ್ಷೆ ಸೇರಿದೆ. ಈ ಉಪಗ್ರಹ ನಮ್ಮ ಯುವಕರ ಕೌಶಲ ಹಾಗೂ ಮಹತ್ತ್ವಾಕಾಂಕ್ಷೆಯನ್ನು ಪ್ರತಿಫಲಿಸಿದೆ. ಚೆನ್ನೈಯ ವಿದ್ಯಾರ್ಥಿಗಳೂ ಉಪಗ್ರಹವೊಂದನ್ನು ನಿರ್ಮಿಸಿದ್ದಾರೆ. ತಾನು ಈ ಸಾಧನೆಗಾಗಿ ಇಸ್ರೊ ಹಾಗೂ ಅದರ ಎಲ್ಲ ವಿಜ್ಞಾನಿಗಳನ್ನು ಅಭಿನಂದಿಸುತ್ತೇನೆ. ಭಾರತ ಅವರ ಕುರಿತು ಹೆಮ್ಮೆ ಪಡುತ್ತಿದೆಯೆಂದು ಪ್ರಧಾನಿ ಹೇಳಿದ್ದಾರೆ.
‘ಬೇಟಿ ಬಚಾವೋ, ಬೇಟಿ ಪಢಾವೋ’ ಯೋಜನೆ ಹಲವರ ಮನ ಮುಟ್ಟಿದೆ. ವಿವಿಧ ಪರೀಕ್ಷೆಗಳು ಮಹಿಳೆಯರು ಹೇಗೆ ಮೇಲುಗೈ ಸಾಧಿಸಿದ್ದಾರೆಂಬುದನ್ನು ತೋರಿಸುತ್ತಿವೆ. ಅವನಿ ಚತುರ್ವೇದಿ, ಭಾವನಾಕಾಂತ್ ಹಾಗೂ ಮೋಹನಾ ಸಿಂಗ್ ಎಂಬ ಮೂವರು ಯುದ್ಧ ವಿಮಾನ ಪೈಲಟ್‌ಗಳು ನಮ್ಮನ್ನು ಅತ್ಯಂತ ಹೆಮ್ಮೆ ಪಡುವಂತೆ ಮಾಡಿದ್ದಾರೆಂದು ಮೋದಿ ಶ್ಲಾಘಿಸಿದ್ದಾರೆ.