ಜಗತ್ತಿನ ಗಮನ ಸೆಳೆದ ಈಜಿಪ್ಟಿನ ಮಹಿಳಾ ಉದ್ಯಮಿ
ಕಾರ್ಯಕ್ರಮಗಳಿಗೆ ಸಂಬಂಧಿಸಿದ ಅಂತರ್ಜಾಲ ವೇದಿಕೆ ಮತ್ತು ಮೊಬೈಲ್ ಆ್ಯಪ್ ಸಂಸ್ಥೆಯಾಗಿರುವ ಇವೆಂಟಸ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಸಹ ಸಂಸ್ಥಾಪಕಿ ಮೈ ಮೇಧತ್ ಈಜಿಪ್ಟಿನಾದ್ಯಂತ ಹಲವರಿಗೆ ಪ್ರೇರಣೆಯಾಗಿದ್ದಾರೆ. ಜೂನ್ 24ರಂದು ಆಕೆ ವೇದಿಕೆ ಮೇಲೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಮತ್ತು ಫೇಸ್ಬುಕ್ ಮುಖ್ಯಸ್ಥ ಮಾರ್ಕ್ ಝುಕರ್ಬರ್ಗ್ ಜೊತೆಗೆ ಮಾತನಾಡಿದರು. ಈ ಚರ್ಚಾಸಭೆಯಲ್ಲಿ ರ್ವಾಂಡಾದ ಜೀನ್ ಬೋಸ್ಕೋ ಮತ್ತು ಪೆರು ದೇಶದ ಮಾರಿಯಾನ ಕೋಸ್ಟ ಚೆಕಾ ಅವರೂ ಇದ್ದರು.ಕ್ಯಾಲಿಫೋರ್ನಿಯದ ಪಾಲೋ ಆಲ್ಟೋದ ಸ್ಟಾಂಡ್ಫೋರ್ಡ್ ವಿಶ್ವವಿದ್ಯಾನಿಲಯದಲ್ಲಿ ನಡೆದ ಜಾಗತಿಕ ಉದ್ಯಮಿಗಳ ಶೃಂಗಸಭೆ 2016ರಲ್ಲಿ ಈ ಸಭೆಯನ್ನು ಆಯೋಜಿಸಲಾಗಿತ್ತು.
ಶೃಂಗಸಭೆಯಲ್ಲಿ ಭಾಗವಹಿಸಿದ್ದ 11 ಈಜಿಪ್ಟ್ ಉದ್ಯಮಿಗಳ ಪೈಕಿ ಮೈ ಕೂಡ ಸೇರಿದ್ದರು. ಈ ಸಭೆಗೆ ಮೊದಲು ಅಮೆರಿಕದ ವಾಣಿಜ್ಯ ವ್ಯವಹಾರದ ವಿಶೇಷ ಪ್ರತಿನಿಧಿ ಝಿಯಾದ್ ಹೈದರ್ ಕೈರೋಗೆ ಭೇಟಿ ನೀಡಿ ಈಜಿಪ್ಟ್ ಅಧಿಕಾರಿಗಳ ಜೊತೆಗೆ ಉದ್ಯಮ ಮತ್ತು ಅನ್ವೇಷಣೆಗಳ ಮೂಲಕ ಜೀವನಮಟ್ಟ ಸುಧಾರಿಸುವ ಬಗ್ಗೆ ಮಾತುಕತೆ ನಡೆಸಿದ್ದರು. ಉದ್ಯೋಗ ಸೃಷ್ಟಿ ಮತ್ತು ಮಾರುಕಟ್ಟೆ ವೃದ್ಧಿಯ ಬಗ್ಗೆಯೂ ಚರ್ಚೆಯಾಗಿತ್ತು. 2011ರ ಕ್ರಾಂತಿಯ ನಂತರ ಈಜಿಪ್ಟ್‌ನಲ್ಲಿ ಔದ್ಯಮಿಕ ಪರಿಸರ ಸುಧಾರಿಸುತ್ತಿದೆ. ಈಜಿಪ್ಟ್ ಅರ್ಥವ್ಯವಸ್ಥೆ ಮತ್ತು ರಾಜಕೀಯ ರಂಗ ಬಹಳಷ್ಟು ನಷ್ಟ ಅನುಭವಿಸಿದರೂ ಯುವಕರು ಬದಲಾವಣೆಯನ್ನು ಮೂಲಮಟ್ಟದಲ್ಲಿ ತರುವ ನಿಟ್ಟಿನಲ್ಲಿ ಹೊಸ ಹಾದಿಗಳನ್ನು ಮತ್ತು ಔದ್ಯಮಿಕ ಯೋಜನೆಗಳನ್ನು ಹಾಕಿಕೊಳ್ಳುತ್ತಿದ್ದಾರೆ.
ಕೃಪೆ: egyptianstreets.com