ಕುವೈಟ್: ಹೊಟೇಲ್, ಕ್ಯಾಟರಿಂಗ್‌ಗೆ ಶೇ 50ರಷ್ಟು ವಿದೇಶಿಗಳ ನೇಮಕಾತಿಗಾಗಿ ಅನುಮತಿ
ಕುವೈಟ್ ಸಿಟಿ,ಜೂನ್ 27: ಹೊಟೆಲ್ ಯೂನಿಯನ್ ಅಧೀನದಲ್ಲಿ ಕಾರ್ಯವೆಸಗುವ ದೇಶದ ಹೋಟೆಲ್ ಹಾಗೂಕ್ಯಾಟರಿಂಗ್ ಕಂಪೆನಿಗಳಿಗೆ ಶೇ. 50ರಷ್ಟು ವಿದೇಶಿ ಕಾರ್ಮಿಕರನ್ನು ಹೊರಗಿನಿಂದ ಕರೆತರಲು ಅನುಮತಿ ನೀಡಲಾಗಿದೆ. ಸ್ವದೇಶಿಯರು ಈ ಕ್ಷೇತ್ರದಲ್ಲಿ ಕೆಲಸ ಮಾಡಲು ನಿರಾಕರಿಸಿದ್ದರಿಂದ ವಿದೇಶಿಯರನ್ನು ಆಶ್ರಯಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಆದರೆ, ಸರಿಯಾದ ಕಾನೂನು ವ್ಯವಸ್ಥೆಯನ್ನು ಪಾಲಿಸಿ ತಮಗೆ ಅಗತ್ಯವಾದ ಕಾರ್ಮಿಕರಲ್ಲಿ ವಿದೇಶದಿಂದ ಶೇ. 50ರಷ್ಟು ಕಾರ್ಮಿಕರ ರಿಕ್ರ್ಯೂಟ್ ನಡೆಸಲು ಹೊಟೇಲ್ ಕ್ಯಾಟರಿಂಗ್ ಕಂಪೆನಿ ಮಾಲಕರಿಗೆ ಅನುಮತಿ ನೀಡಲಾಗಿದೆ.
ಮ್ಯಾನ್‌ಪವರ್ ಅಥಾರಿಟಿಯ ಉನ್ನತ ಮೂಲಗಳು ಈ ವಿಚಾರವನ್ನು ಇಲ್ಲಿ ಬಹಿರಂಗಪಡಿಸಿವೆ. ಹೊಟೇಲ್‌ಗಳು, ಕ್ಯಾಟರಿಂಗ್ ಕಂಪೆನಿಗಳಲ್ಲಿ ಕೆಲಸ ಮಾಡಲು ಸ್ವದೇಶಿಗಳು ಇಚ್ಛೆವ್ಯಕ್ತಪಡಿಸದಿರುವುದರಿಂದ ಈ ಕ್ಷೇತ್ರದಲ್ಲಿ ದೇಶದೊಳಗಿನಿಂದ ಸಾಕಷ್ಟು ಕಾರ್ಮಿಕರು ಸಿಕ್ಕಿಲ್ಲ. ಈ ನಿಟ್ಟಿನಲ್ಲಿ ಈ ತೀರ್ಮಾನ ತಳೆಯುವಂತೆ ಅಧಿಕಾರಿಗಳನ್ನು ಪ್ರೇರೇಪಿಸಿದೆ.
ಹೀಗೆ ಕರೆತಂದ ಕಾರ್ಮಿಕರಿಗೆ ಕ್ಯಾಟರಿಂಗ್ ಕಂಪೆನಿ, ಹೊಟೇಲ್‌ಗಳಲ್ಲದೆ ಬೇರೆ ಯಾವುದೇ ಕ್ಷೇತ್ರಕ್ಕೂ ವೀಸಾ ಪರಿವರ್ತನೆಗೆ ಅವಕಾಶ ನೀಡುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿದೇಶಗಳಿಂದ ಕಾರ್ಮಿಕರನ್ನು ಕರೆತರುವ ಪ್ರಮಾಣದಲ್ಲಿ ಶೇ. 25ರಷ್ಟು ಕಡಿತಗೊಳಿಸಲು ಸರಕಾರ ಚಿಂತಿಸುತ್ತಿರುವಾಗಲೇ ಹೊಟೇಲ್ ಕ್ಯಾಟರಿಂಗ್ ಕಂಪೆನಿಗಳಿಗೆ ಶೇ. 50ರಷ್ಟು ಕಾರ್ಮಿಕರನ್ನು ರಿಕ್ರ್ಯೂಟ್ ನಡೆಸುವ ಅನುಮತಿ ಲಭಿಸುತ್ತಿದೆ. ಹೊಸ ತೀರ್ಮಾನ ಜಾರಿಗೆ ಬಂದರೆ ಭಾರತೀಯರು ಸಹಿತ ಈ ಕ್ಷೇತ್ರದಲ್ಲಿ ಕೆಲಸ ಮಾಡಲು ಇಚ್ಛಿಸುವವರಿಗೆ ಉದ್ಯೋಗಾವಕಾಶ ಹೆಚ್ಚಳವಾಗಲಿದೆ.