ರಾಜನ್ ವಿರುದ್ಧ ಸ್ವಾಮಿ ಟೀಕೆಗಳಿಗೆ ಪಿಎಂ ಗರಂ
ಹೊಸದಿಲ್ಲಿ,ಜೂ.27: ಆರ್‌ಬಿಐ ಗವರ್ನರ್ ರಘುರಾಮ ರಾಜನ್ ಮತ್ತು ವಿತ್ತ ಸಚಿವಾಲಯದ ಕೆಲವು ಹಿರಿಯ ಅಧಿಕಾರಿಗಳ ವಿರುದ್ಧ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿಯವರ ಟೀಕಾಪ್ರಹಾರಕ್ಕೆ ಸೋಮವಾರ ಇಲ್ಲಿ ಅಸಮಾಧಾನ ವ್ಯಕ್ತಪಡಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಇವು ಉಚಿತವಲ್ಲ ಎಂದು ಹೇಳಿದರು.
ರಾಜನ್ ‘ಕಡಿಮೆ ದೇಶಪ್ರೇಮಿಯಲ್ಲ ’ಎಂದು ಬಣ್ಣಿಸಿದ ಮೋದಿ, ತಾವು ವ್ಯವಸ್ಥೆಗಿಂತ ಮೇಲಿನವರು ಎಂದು ಯಾರಾದರೂ ಭಾವಿಸಿದ್ದರೆ ಅದು ತಪ್ಪು ಎಂದು ಸ್ವಾಮಿಯವರನ್ನು ಹೆಸರಿಸದೆ ಝಾಡಿಸಿದರು.
ರಾಜನ್,ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಮಣಿಯನ್ ಮತ್ತು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ ದಾಸ್ ವಿರುದ್ಧ ಸ್ವಾಮಿಯವರ ಇತೀಚಿನ ದಾಳಿಗಳಿಂದ ವಿತ್ತಸಚಿವ ಅರುಣ್ ಜೇಟ್ಲಿ ಮತ್ತು ಬಿಜೆಪಿ ಅಂತರವನ್ನು ಕಾಯ್ದುಕೊಂಡಿರುವ ಈ ಸಂದರ್ಭದಲ್ಲಿ ಪ್ರಧಾನಿಯವರ ಹೇಳಿಕೆಯು ಮಹತ್ವವನ್ನು ಪಡೆದುಕೊಂಡಿದೆ.
ಸ್ವಾಮಿ ಅವರು ಜೇಟ್ಲಿಯವರ ಹೆಸರನ್ನೆತ್ತದೆ ಅವರ ವಿರುದ್ಧವೂ ಕೆಲವು ಅವಹೇಳನಕಾರಿ ಟೀಕೆಗಳನ್ನು ಮಾಡಿದ್ದರು.
ಇಂತಹ ಮಾತುಗಳನ್ನು ನನ್ನ ಪಕ್ಷದವರು ಅಥವಾ ಬೇರೆಯವರು ಆಡಿದ್ದರೂ ಇವು ಸಮಂಜಸವಲ್ಲ ಎಂದು ನಾನು ಭಾವಿಸಿದ್ದೇನೆ. ಪ್ರಚಾರಕ್ಕಾಗಿ ಹಪಾಹಪಿ ರಾಷ್ಟ್ರಕ್ಕೆಂದೂ ಒಳಿತನ್ನು ಮಾಡದು. ಜನರು ಅತ್ಯಂತ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಯಾರೇ ಆದರೂ ತಾನು ವ್ಯವಸ್ಥೆಗಿಂತ ಮೇಲೆ ಎಂದು ಭಾವಿಸಿದ್ದರೆ ಅದು ತಪ್ಪಾಗುತ್ತದೆ ಎಂದು ಮೋದಿ ಆಂಗ್ಲ ಸುದ್ದಿವಾಹಿನಿಯೊಂದಿಗೆ ಮಾತನಾಡುತ್ತ ತಿಳಿಸಿದರು.
ಸ್ವಾಮಿಯವರ ಹೆಸರನ್ನೆತ್ತದೆ,ರಾಜನ್ ವಿರುದ್ಧ ನಿಮ್ಮ ಪಕ್ಷದ ರಾಜ್ಯಸಭಾ ಸದಸ್ಯರ ಟೀಕೆಗಳು ಸಮಂಜಸವೇ ಎಂದು ಪ್ರಧಾನಿಯವರನ್ನು ಪ್ರಶ್ನಿಸಲಾಗಿತ್ತು.
ನನ್ನ ಸಂದೇಶವು ಅತ್ಯಂತ ಸ್ಪಷ್ಟವಾಗಿದೆ ಮತ್ತು ಆ ಕುರಿತು ನನ್ನಲ್ಲಿ ಯಾವುದೇ ಗೊಂದಲಗಳಿಲ್ಲ ಎಂದು ಮೋದಿ ತಿಳಿಸಿದರು. ಸಂಯಮವನ್ನು ಕಾಯ್ದುಕೊಳ್ಳುವಂತೆ ಮತ್ತು ಮಾತು ಹಾಗೂ ವರ್ತನೆಯ ಮೇಲೆ ಹತೋಟಿಯನ್ನಿಟ್ಟುಕೊಳ್ಳುವಂತೆ ಮೋದಿಯವರು ಇತ್ತೀಚಿಗೆ ಅಲಹಾಬಾದ್‌ನಲ್ಲಿ ಪಕ್ಷದ ನಾಯಕರಿಗೆ ನೀಡಿದ್ದ ಸಲಹೆಯನ್ನು ನೆನಪಿಸಿದ ಸುದ್ದಿಗಾರರು, ಇದರ ಬಳಿಕವೂ ಅತ್ಯಂತ ಹಿರಿಯ ಸರಕಾರಿ ಅಧಿಕಾರಿಗಳ ವಿರುದ್ಧ ಟೀಕಾಪ್ರಹಾರ ನಡೆಯುತ್ತಿದೆ. ಈ ವಿಷಯದಲ್ಲಿ ನಿಮ್ಮ ಸಂದೇಶ ಸ್ಪಷ್ಟವಾಗಿತ್ತೇ ಎಂದು ಪ್ರಶ್ನಿಸಿದ್ದರು.
ಆರ್‌ಬಿಐ ಗವರ್ನರ್ ಆಗಿ ಎರಡನೆ ಅವಧಿಗೆ ಮುಂದುವರಿಯಲು ನಕಾರ ಸೂಚಿಸಿರುವ ರಾಜನ್ ಅವರನ್ನು ಪ್ರಶಂಸಿಸಿದ ಪ್ರಧಾನಿ, ಅವರ ರಾಷ್ಟ್ರಪ್ರೇಮವೇನೂ ಕಡಿಮೆಯದಲ್ಲ. ಅವರು ಯಾವುದೇ ಹುದ್ದೆಯಲ್ಲಿರಲಿ...ಇಲ್ಲದಿರಲಿ, ಭಾರತಕ್ಕೆ ಅವರ ಸೇವೆ ಮುಂದುವರಿಯುತ್ತದೆ ಎಂಬ ಭರವಸೆ ನನಗಿದೆ ಎಂದರು. ರಾಜನ್ ಮಾನಸಿಕವಾಗಿ ಸಂಪೂರ್ಣ ಭಾರತೀಯರಲ್ಲ ಎಂದು ಸ್ವಾಮಿ ಟೀಕಿಸಿದ್ದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಮೋದಿ, ರಾಜನ್ ಯುಪಿಎ ಸರಕಾರದಿಂದ ನೇಮಕಗೊಂಡಿದ್ದರೂ ಅವರು ತನ್ನ ಅಧಿಕಾರಾವಧಿಯನ್ನು ಪೂರ್ಣಗೊಳಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದರು.