ಪ್ರಧಾನಿ ಮೋದಿಯಿಂದ ಅರ್ನಬ್ ಮುಖವಾಡ ಕಳಚಿದ ಯಶಸ್ವಿ ಸಂದರ್ಶನ !
ಸೋಮವಾರದ 'ಇಡೀ ದೇಶದ ವಕೀಲ ' ಅರ್ನಬ್ ಗೋಸ್ವಾಮಿ ಅವರು ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರ 'ಐತಿಹಾಸಿಕ' ಸಂದರ್ಶನದಲ್ಲಿ ಮೂಡಿಬಂದ ಮುಖ್ಯಅಂಶ ಏನು ? ದೇಶಾದ್ಯಂತ ಎಲ್ಲ ಪತ್ರಿಕಾ ಸಂಪಾದರಿಗೆ ಇಂದು ಬಹುದೊಡ್ಡ ತಲೆನೋವಾಗಿರುವ ಪ್ರಶ್ನೆ ಇದು. ಇಂದಿನ ಸಂದರ್ಶನದ ಪ್ರಧಾನಿಯ ಯಾವ ಹೇಳಿಕೆಯನ್ನು ನಾಳಿನ ಪತ್ರಿಕೆಗೆ ಹೆಡ್ ಲೈನ್ ಮಾಡಬೇಕೆಂದು ಪತ್ರಿಕಾ ಸಂಪಾದಕರು ತಲೆಕೆರೆದುಕೊಳ್ಳುತ್ತಿದ್ದಾರೆ. ಪ್ರಧಾನಿಯಂತಹ ಪ್ರಧಾನಿಯನ್ನೇ ಸಂದರ್ಶನ ಮಾಡಿಯೂ ಒಂದು ಮುಖ್ಯ ಹೆಡ್ ಲೈನ್ ಸಿಗಲು ಕಷ್ಟವಾಗುವಂತೆ ಮಾಡಿರುವ 'ಹೆಗ್ಗಳಿಕೆ' ಅರ್ನಬ್ ಅವರದ್ದು. ಹೌದು , ಪ್ರಧಾನಿ ಸಂದರ್ಶನದಲ್ಲಿ ಸುಬ್ರಮಣ್ಯನ್ ಸ್ವಾಮಿಗೆ ಪರೋಕ್ಷವಾಗಿ ಕುಟುಕಿದ್ದಾರೆ. ಇದು ಬಹಳ ಸಮಯದಿಂದ ಜನರು ನಿರೀಕ್ಷಿಸುತ್ತಿದ್ದ ಹೇಳಿಕೆ. ಆದರೆ ಪ್ರಧಾನಿಯ ಪ್ರಪ್ರಥಮ ಸಂದರ್ಶನದಲ್ಲಿ ದೇಶದ ಜನತೆ ಬಹಳಷ್ಟು ವಿಷಯಗಳ ಬಗ್ಗೆ ಪ್ರಧಾನಿಯ ಮಾತು ಕೇಳಲು ಕಾತರರಾಗಿರುತ್ತಾರೆ. ಆದರೆ ಅದ್ಯಾವುದನ್ನೂ ' ದೇಶದ ಜನತೆಗೆ' ತೆಗೆದುಕೊಡಲು ವಿಫಲವಾಗಿದ್ದಾರೆ ಅರ್ನಬ್ !
ಹಾಗಾದರೆ ಇಂದಿನ ಸಂದರ್ಶನದಲ್ಲಿ ಬಹಿರಂಗವಾದ ಬಹುದೊಡ್ಡ ವಿಷಯ ಯಾವುದು ? ಅದೇನೆಂದರೆ ಅರ್ನಬ್ ಕೂಡ ಸಾಮಾನ್ಯ ಮನುಷ್ಯರಂತೆ ಮಾತುಕತೆ ನಡೆಸಬಲ್ಲರು. ಅವರು ಮನಸ್ಸು ಮಾಡಿದರೆ ಪ್ರಶ್ನೆಯನ್ನು ಮಾತ್ರ ಕೇಳಿ ಉತ್ತರ ನೀಡಲು ಎದುರು ಕುಳಿತವರಿಗೂ ಅವಕಾಶ ಬಿಡಬಲ್ಲರು.
ಇಷ್ಟು ಮಹತ್ವದ ಒನ್ ಟು ಒನ್ ಸಂದರ್ಶನದಲ್ಲಿ ಒಂದೇ ಒಂದು ಬಹುಚರ್ಚಿತ ವಿಷಯ ಮೂಡಿ ಬರಲಿಲ್ಲ, ಮಹತ್ವದ ಹೇಳಿಕೆ ಸಿಗಲಿಲ್ಲ. ಇದಕ್ಕೆ ಪ್ರಧಾನಿಯನ್ನು ದೂರಿ ಪ್ರಯೋಜನವಿಲ್ಲ. ಏಕೆಂದರೆ ನೀವು ಸರಿಯಾದ ಪ್ರಶ್ನೆ ಕೇಳಿದರೆ ಮಾತ್ರ ಸರಿಯಾದ ಉತ್ತರ ಸಿಗುತ್ತದೆ. ಪ್ರಶ್ನೆಗೆ ತಕ್ಕ ಉತ್ತರ ಸಿಗುತ್ತದೆ. ಹಾಗಾಗಿ ಇಂದಿನ ಸಂದರ್ಶನದಲ್ಲಿ ದೂರಿಗೆ ಅರ್ಹ ಅರ್ನಬ್ ಮಾತ್ರ !
ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ರಾಹುಲ್ ಗಾಂಧಿಯ ಸಂದರ್ಶನ ಮಾಡಿದ ಅರ್ನಬ್ ಇಂದು ನಾಪತ್ತೆಯಾಗಿದ್ದರು. ಅಲ್ಲಿ ಆಕ್ರೋಶ , ಆರ್ಭಟ, ಬೊಬ್ಬೆ, ಸಿಟ್ಟು, ಸೆಡವು, ಬೋಧನೆ ಯಾವುದೂ ಇರಲಿಲ್ಲ. ಏಕೆಂದರೆ ಅರ್ನಬ್ ಇಂದು ನಡೆಸಿದ್ದು ಹಾಲಿ ಪ್ರಧಾನಿಯೊಬ್ಬರು ಖಾಸಗಿ ಚಾನಲ್ ಒಂದಕ್ಕೆ ನೀಡಿದ್ದ ' ಪ್ರಪ್ರಥಮ ಐತಿಹಾಸಿಕ ಸಂದರ್ಶನವನ್ನು'. ಹಾಗಾಗಿ , ಇಂದು ಇದ್ದದ್ದು ಸ್ವಲ್ಪ ನಾಚಿಕೊಂಡ, ಪುಳಕಿತರಾಗಿದ್ದ, ರೋಮಾಂಚನಗೊಂಡಿದ್ದ 'ಸ್ವಾಮಿ'. ಅವರ ಪ್ರತಿ ಪ್ರಶ್ನೆಯಲ್ಲೂ ಸೌಜನ್ಯ ತುಂಬಿ ತುಳುಕುತ್ತಿತ್ತು. ನಯ, ವಿನಯ ಪ್ರತಿ ಪದದಲ್ಲೂ ಎದ್ದು ಕಾಣುತ್ತಿತ್ತು. ಯಾವುದೇ ಕಾರಣಕ್ಕೂ ಸಂಯಮ ಕಳೆದುಕೊಳ್ಳದೆ ನಾನು ಈ ಸಂದರ್ಶನ ಪಾಸಾಗಿಯೇ ಸಿದ್ದ ಎಂದು ರೆಡಿಯಾಗಿ ಬಂದಿದ್ದ ವಿನೀತ ವಿದ್ಯಾರ್ಥಿಯಾಗಿದ್ದರು ಗೋಸ್ವಾಮಿ.
ಹಾಗಾದರೆ, ಅರ್ನಬ್ ಗೂ ಸಂದರ್ಶನ ನಡೆಸಲು ಗೊತ್ತಿದೆ ಎಂದಾಯಿತು ! ಸಾಮಾನ್ಯವಾಗಿ ಅಧಿಕಾರದಲ್ಲಿರುವವರ ಮುಖವಾಡ ಕಳಚುವಂತಹ ಸಂದರ್ಶನ ನಡೆಸುವುದು ಒಬ್ಬ ಯಶಸ್ವಿ ಪತ್ರಕರ್ತನ ಸಾಮರ್ಥ್ಯ, ಹೆಗ್ಗಳಿಕೆ. ಅಂತಹ ಯಶಸ್ವಿ ಸಂದರ್ಶನವನ್ನು ಇಂದು ನಡೆಸಿದ ಕೀರ್ತಿ ಪ್ರಧಾನಿ ಮೋದಿಯವರಿಗೆ ಸಲ್ಲುತ್ತದೆ ! ಈ ದೇಶದ ಅತ್ಯಂತ ಪ್ರಭಾವಿ ಸ್ಥಾನದಲ್ಲಿರುವ ಮಾಧ್ಯಮ ದೊರೆಯೊಬ್ಬನ ಅಸಲಿ ಮುಖವಾಡವನ್ನು ಇಂದಿನ ಸಂದರ್ಶನದಲ್ಲಿ ಅವರು ಕಳಚಿದ್ದಾರೆ. ಅಲ್ಲಿಗೆ ಅವರು ಅತ್ಯುತ್ತಮ ವಾಗ್ಮಿ, ಮಾತುಗಾರ ಮಾತ್ರವಲ್ಲ ಅದ್ಭುತ ಸಂದರ್ಶನಕಾರ ಕೂಡ ಹೌದು ಎಂದು ಸಾಬೀತು ಪಡಿಸಿದ್ದಾರೆ.
ಪ್ರಧಾನಿ ಮೋದಿಯವರಿಗೆ ಅಭಿನಂದನೆಗಳು .