×
Ad

ಸಂತ್ರಸ್ತರಿಗೆ ಭೀತಿಯ ನಡುವೆಯೂ ಭವಿಷ್ಯದ ಯೋಚನೆ

Update: 2016-06-27 22:50 IST

ಹ್ಮದಾಬಾದ್‌ನ ಇಂದಿನ ಅನೇಕ ಯುವಕರ ನೆನಪಿನಿಂದ 2002ರ ಗುಜರಾತ್ ದಂಗೆಯು ಅಳಿಸಿ ಹೋಗಿದೆ. ತಾವು ಭವಿಷ್ಯದೆಡೆಗೆ ನೋಡಲು ಬಯಸುತ್ತಿದ್ದೇವೆಂದು ಅವರು ಹೇಳುತ್ತಿದ್ದಾರೆ.

ಕೆಲವರು ಕಾನೂನು ವೃತ್ತಿಯನ್ನು, ಇನ್ನು ಕೆಲವರು ಇತರ ಶಿಕ್ಷಣವನ್ನು ಮುಂದುವರಿಸುತ್ತಿದ್ದಾರೆ. ಹಿಂದೂಗಳು ಹಾಗೂ ಮುಸ್ಲಿಮರಲ್ಲಿ ಒಂದು ರೀತಿಯ ಸೌಹಾರ್ದ ಮರು ಸ್ಥಾಪನೆಯಾಗಿದೆ. ಮದುವೆಯ ಕರೆಯೋಲೆಗಳು ಮತ್ತೆ ವಿನಿಮಯವಾಗುತ್ತಿವೆ. ಯಾವ ಸಮುದಾಯವೂ 2002ರ ಪುನರಾವರ್ತನೆ ಬಯಸುತ್ತಿಲ್ಲವೆಂದು ಯುವಕರು ತಿಳಿಸಿದ್ದಾರೆ.

ಆದರೆ, ಹೇಳಲಾಗದ ರೀತಿಯಲ್ಲಿ ರಕ್ತದೋಕುಳಿಯ ಭೂತ ಉಳಿದುಕೊಂಡಿದೆ. ರೈಲ್ವೆ ಬೋಗಿಯೊಂದರ ತುಂಬಿ ಇದ್ದ ಹಿಂದೂ ಯಾತ್ರಿಕರು ಬೆಂಕಿಯ ಕೆನ್ನಾಲಗೆಗೆ ಬಲಿಯಾದ ಬಳಿಕ, ಗುಜರಾತಿನಾದ್ಯಂತದ ನಗರಗಳಲ್ಲಿ ಮೂರು ದಿನಗಳ ಹಿಂಸಾಚಾರ ಭುಗಿಲೆದ್ದಿತ್ತು. ಅದಾಗಿ 14 ವರ್ಷಗಳು ಕಳೆದಿವೆ. ಆದಾಗ್ಯೂ ತೀವ್ರವಾಗಿ ಬಾಧಿತವಾಗಿದ್ದ ಅಹ್ಮದಾಬಾದ್‌ನ ಉಪನಗರ ನರೋಡಾಪಾಟಿಯಾ ಹಾಗೂ ಮುಸ್ಲಿಮ್ ಬಾಹುಳ್ಯದ ಗುಲ್ಬರ್ಗ್ ಹೌಸಿಂಗ್ ಸೊಸೈಟಿಗಳಲ್ಲಿ ಗಾಯದ ಗುರುತು ಇನ್ನೂ ಕಾಣಿಸುತ್ತಿದೆ.
ನರೋಡಾದಲ್ಲಿ ಮುಸ್ಲಿಮ್ ಕುಟುಂಬಗಳು ಈಗಲೂ ವಾರ್ಷಿಕ ನವರಾತ್ರಿ ಹಾಗೂ ರಥಯಾತ್ರಾ ಉತ್ಸವಗಳಿಗೆ ಮೊದಲು ತಮ್ಮ ಮನೆಗಳನ್ನು ತ್ಯಜಿಸುತ್ತಿದ್ದಾರೆ. ‘‘ನಮ್ಮ ಪ್ರದೇಶದಲ್ಲಿ ಹಿಂದೂಗಳ ದೊಡ್ಡ ಗುಂಪು ಸೇರಿದಾಗೆಲ್ಲ ನಾವು ಬೆಲೆಬಾಳುವ ವಸ್ತುಗಳೊಂದಿಗೆ ಬೇರೆ ಕಡೆಗೆ ಹೋಗುತ್ತೇವೆ. ನಾವು ದೂರ ಹೋಗಿ ಸಂಬಂಧಿಕರ ಮನೆಗಳಲ್ಲಿ ವಾಸಿಸುತ್ತೇವೆ. ಹಿಂದೂಗಳ ಉತ್ಸವಗಳು ಮುಗಿದ ಬಳಿಕ ಮರಳುತ್ತೇವೆ. ನಾವೀಗಲೂ ಹೆದರುತ್ತಿದ್ದೇವೆ’’ ಎಂದು 20ರ ಹರೆಯದ ಕಾಲೇಜು ವಿದ್ಯಾರ್ಥಿ ಆಸಿಫ್ ಮನ್ಸೂರಿ ಎಂಬಾತ ಹೇಳಿದ್ದಾರೆ.

ಮನ್ಸೂರಿ ಆಟೋರಿಕ್ಷಾ ಚಾಲಕನೊಬ್ಬನ ಐವರು ಮಕ್ಕಳಲ್ಲಿ ಒಬ್ಬರಾಗಿದ್ದಾರೆ. ಹಿಂಸಾಚಾರ ನಡೆದ ವೇಳೆ ಆತನಿಗೆ 6ರ ಹರೆಯ. ಖಡ್ಗಗಳನ್ನು ಹಿಡಿದಿದ್ದ ಜನರು ಮನೆಗಳಿಗೆ ಬೆಂಕಿ ಹಚ್ಚುತ್ತಿದ್ದುದು ತನಗೆ ನೆನಪಿದೆ. ತಾವು 2 ವರ್ಷ ಪರಿಹಾರ ಶಿಬಿರ ಹಾಗೂ ಸಂಬಂಧಿಕರ ಮನೆಗಳಲ್ಲಿದ್ದು, ಆ ಬಳಿಕ ಹಿಂದಿರುಗಿದ್ದೇವೆಂದು ಮನ್ಸೂರಿ ಜ್ಞಾಪಿಸಿಕೊಂಡಿದ್ದಾರೆ.
ಅವರ ಇಬ್ಬರು ಅಣ್ಣಂದಿರು ಶಾಲೆಯನ್ನು ಬಿಡಬೇಕಾಯಿತು. ಅವರು ಕುಟುಂಬಕ್ಕಾಗಿ ಸಂಪಾದನೆ ಮಾಡಬೇಕಾಯಿತು. ತಾವು ಕಳೆದುಕೊಂಡುದನ್ನು ಪುನಃ ಸಂಪಾದಿಸಲು ತಮಗೆ ಹಲವು ವರ್ಷಗಳೇ ಬೇಕಾದವು. ದಂಗೆ ನಡೆಯದಿದ್ದರೆ, ಅವರೂ ಕಲಿತು ಒಳ್ಳೆಯ ಉದ್ಯೋಗ ಪಡೆಯುತ್ತಿದ್ದರು. ಈಗವರು ನಿರ್ಮಾಣ ನಿವೇಶನವೊಂದರಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆಂದು ಮನ್ಸೂರಿ ಹೇಳಿದ್ದಾರೆ.
ಪರಿಸ್ಥಿತಿಯನ್ನು ದಾರಿಗೆ ತರಲು ಕಾನೂನಿನಲ್ಲಿ ಪದವಿ ಪಡೆಯಲು ಮನ್ಸೂರಿ ಯೋಚಿಸಿದ್ದಾರೆ. ನಡೆದುದರ ಬಗ್ಗೆ ಚಿಂತಿಸುವುದರಲ್ಲಿ ಅರ್ಥವಿಲ್ಲ. ಅದು ಆಗಿ ಹೋಯಿತು. ತಾನು ಶ್ರಮಪಟ್ಟು ಕೆಲಸ ಮಾಡಿ ಕುಟುಂಬಕ್ಕೆ ಸಹಾಯ ಮಾಡಲು ಇಚ್ಛಿಸುತ್ತಿದ್ದೇನೆಂದು ಆತ ತಿಳಿಸಿದ್ದಾರೆ.
ಪದವಿ ಮುಗಿಸಿ ಸಮಾಧಾನಕರ ಸಂಪಾದನೆ ಮಾಡುತ್ತೇನೆ ಹಾಗೂ ತನ್ನ ಸಮುದಾಯದ ಹಕ್ಕುಗಳಿಗಾಗಿ ಹೋರಾಡುತ್ತೇನೆಂದು ಮನ್ಸೂರಿ ಹೇಳಿದ್ದಾನೆ.
ನರೋಡಾ ಪಾಟಿಯಾದ 20ರ ಹರೆಯದ ಕಾಲೇಜು ವಿದ್ಯಾರ್ಥಿನಿ ಯಮ್ರಾನ್ ಕುರೇಶಿ ಎಂಬಾಕೆ ಹಿಂಸಾಚಾರದ ಬಗ್ಗೆ ಚರ್ಚಿಸಲೇ ಇಚ್ಛಿಸುವುದಿಲ್ಲ. ಕಳೆದುದು ತಮ್ಮ ಹಿಂದೆ ಹೋಯಿತು. ಈಗ ಮುಂದೆ ಸಾಗುವ ಸಮಯ ಬಂದಿದೆಯೆಂದು ಆಕೆ ತಿಳಿಸಿದ್ದಾಳೆ. ಆದರೂ ಆಕೆಯ ಮಾತುಗಳಲ್ಲಿ ಭೂತಕಾಲದ ಗುರುತುಗಳಿದ್ದವು.

ಯಮ್ರಾನ್‌ಳ ಕುಟುಂಬ ದಂಗೆಯಲ್ಲಿ ಮನೆಯನ್ನು ಕಳೆದುಕೊಂಡಿತ್ತು. ಮುದ್ರಕನಾಗಿದ್ದ ಆಕೆಯ ತಂದೆ ಅವರ ಕುಟುಂಬವನ್ನು ಇನ್ನೊಂದು ಪ್ರದೇಶದಲ್ಲಿ ನೆಲೆ ನಿಲ್ಲಿಸಲು ಹಾಗೂ ಮಕ್ಕಳಿಗೆ ವಿದ್ಯಾಭ್ಯಾಸ ಒದಗಿಸಲು ಅವಧಿ ಮೀರಿ ಕೆಲಸ ಮಾಡಿದ್ದಾರೆ.
ತನ್ನ ಹಾಗೂ ತನ್ನ ಸೋದರನ ವಿದ್ಯಾಭ್ಯಾಸಕ್ಕಾಗಿ ಹಣ ಉಳಿಸಲು ತಾವು ಅನೇಕ ವರ್ಷಗಳಿಂದ ಈದ್‌ನ ವೇಳೆ ಹೊಸ ಬಟ್ಟೆಗಳನ್ನೇ ಖರೀದಿಸಿರಲಿಲ್ಲ. ತಾನು ಪದವಿ ಪಡೆದ ಬಳಿಕ ಉಪೇಕ್ಷಿತ ಮಕ್ಕಳಿಗೆ ಕಲಿಸಲು ಬಯಸುತ್ತಿದ್ದೇನೆ. ತಮ್ಮಂತೆ ಯಾರೂ ಶಿಕ್ಷಣಕ್ಕಾಗಿ ಒದ್ದಾಡುವುದನ್ನು ತಾನು ಇಚ್ಛಿಸುವುದಿಲ್ಲವೆಂದು ಅವರು ಹೇಳಿದ್ದಾರೆ.
ಶಿಕ್ಷಣಕ್ಕಾಗಿ ಒದ್ದಾಟವೆಂದರೆ ಕೆಲಸಕ್ಕಾಗಿ ಒದ್ದಾಟ. ಇದಕ್ಕೆ ಸರಕಾರ ಸಹಾಯ ಮಾಡಬಹುದೆಂದು ಕೆಲವರು ಅಭಿಪ್ರಾಯಿಸುತ್ತಿದ್ದಾರೆ.
ತನ್ನ ಗಂಡ ಚಿಲ್ಲರೆ ವ್ಯಾಪಾರ ಮಾಡಿ ಕೇವಲ ರೂ. 8 ಸಾವಿರ ಸಂಪಾದಿಸುತ್ತಿದ್ದಾರೆ. ಎರಡು ವರ್ಷಗಳ ಬಳಿಕ ತನ್ನ ಮಾವ ರಾಜ್ಯ ಸಾರಿಗೆ ಸಂಸ್ಥೆಯ ತಾತ್ಕಾಲಿಕ ಕೆಲಸದಿಂದ ನಿವೃತ್ತರಾಗಲಿದ್ದಾರೆ. ಆ ಬಳಿಕ ತಾವು ಖರ್ಚನ್ನು ಹೇಗೆ ನಿಭಾಯಿಸುವುದೆಂದು ನರೋಡಾ ಗ್ರಾಮದ 23ರ ಹರೆಯದ ಫರ್ಹೀನ್ ಮಲಿಕ್ ಎಂಬಾಕೆ ಪ್ರಶ್ನಿಸುತ್ತಾರೆ.

ದಂಗೆಯ ಬಳಿಕ ಅನೇಕ ಮಕ್ಕಳು ಶಾಲೆ ತೊರೆದಿದ್ದಾರೆ ಹಾಗೂ ಒಂದು ಅಥವಾ ಹೆಚ್ಚು ವರ್ಷಗಳನ್ನು ಕಳೆದುಕೊಂಡಿದ್ದಾರೆ. ಅನೇಕ ಮಂದಿ ಹೆತ್ತವರು ಮಕ್ಕಳನ್ನು ಶಾಲೆಗೆ ಕಳುಹಿಸಲೇ ಭಯಪಡುತ್ತಿದ್ದರೆ, ಇನ್ನು ಕೆಲವರಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸಲು ಸಂಪನ್ಮೂಲವೇ ಉಳಿದಿಲ್ಲ. ಈ ಕುಟುಂಬಗಳಿಗೆ ಮಕ್ಕಳ ಮಾನಸಿಕ ಸ್ವಾಸ್ಥದ ಬಗ್ಗೆಯೂ ಯೋಚಿಸಲು ಸಮಯವಿಲ್ಲ. ಅನೇಕರು ಆ ಕಾಲದ ಆಘಾತಕ್ಕೆ ಪರಿಹಾರವನ್ನೇ ಮಾಡಿಲ್ಲವೆಂದು ಅಮಾನ್ ಬಿರಾದ್ರಿ ಎಂಬ ಸರಕಾರೇತರ ಸಂಘಟನೆಯ ಕ್ಷೇತ್ರಾಧಿಕಾರಿ ಉಸ್ಮಾನ್ ಶೇಕ್ ಎಂಬವರು ವರ್ಣಿಸಿದ್ದಾರೆ.
ಮುಸ್ಲಿಮರು ಹಿಂದೂಗಳಿಂದ ತೊಂದರೆಗೊಳಗಾಗಿದ್ದರೆ, ಹಿಂದೂಗಳೂ ತೊಂದರೆಗೊಳಗಾಗಿದ್ದಾರೆ. ತನ್ನ ತಾಯಿ ಪೊಲೀಸರ ಥಳಿತಕ್ಕೊಳಗಾಗಿದ್ದರು. ತಮಗೆ ಸರಕಾರಿ ಯಂತ್ರಾಂಗದಲ್ಲಿ ವಿಶ್ವಾಸವಿಲ್ಲ. ಆದರೆ ಮುಸ್ಲಿಮರು ಹಾಗೂ ತಾವು ಪುನಃ ಸ್ನೇಹಿತರಾದೇವೆಂಬ ಸಂತೋಷ ತನಗಿದೆಯೆಂದು ಬಹ್ರಾಂಪುರದ ನಿವಾಸಿ 20ರ ಹರೆಯದ ರಿತುದೇವಿ ಚೌಹಾಣ್ ಎಂಬಾಕೆ ಹೇಳಿದ್ದಾರೆ.
ಕೃಪೆ: ಹಿಂದೂಸ್ಥಾನ್ ಟೈಮ್ಸ್

Writer - ರಿದ್ಧಿ ದೋಶಿ

contributor

Editor - ರಿದ್ಧಿ ದೋಶಿ

contributor

Similar News