×
Ad

ಮಕ್ಕಳ ಸಾವಿನಲ್ಲೂ ಧರ್ಮ ಹುಡುಕುವ ಭಯೋತ್ಪಾದಕರು!

Update: 2016-06-27 23:30 IST

ಮಾನ್ಯರೆ,

ಕಾಗೆಯೊಂದು ಸತ್ತು ಹೋದರೆ ಒಂದಷ್ಟು ಕಾಗೆಗಳು ರೋದಿಸುವುದನ್ನು ನಾವು ನೋಡದೇ ಇರಲು ಅಸಾಧ್ಯ.. ಆದರೆ ಕಾಗೆಯಷ್ಟೂ ಮಾನವೀಯತೆ ನಮ್ಮಲ್ಲಿ ಬಾರದೆ ಇರಲು ಕಾರಣವೇನು..? ಕುಂದಾಪುರದ ತ್ರಾಸಿಯಲ್ಲಿ ಮೊನ್ನೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಎಂಟು ಮಕ್ಕಳು ಇಹಲೋಕ ತ್ಯಜಿಸಿ, ಈ ಮನುಷ್ಯತ್ವ ಮರೆತ ಭೂಲೋಕಕ್ಕೆ ಗುಡ್ ಬೈ ಹೇಳಿ ಸ್ವರ್ಗದ ಕುಸುಮಗಳಾದವು.. ವಿಕೃತ ಧರ್ಮಾಂಧ ಮನುಷ್ಯನ ಮನುಷ್ಯತ್ವ ಮತ್ತೊಮ್ಮೆ ಅನಾವರಣವಾಯಿತು ನೋಡಿ.. ನಮ್ಮ ಮನೆ ಮಗು ಅಂದುಕೊಳ್ಳುವ ಸೌಜನ್ಯವೂ ನಮ್ಮ ನಡುವೆ, ಮನುಷ್ಯ ಮುಖವಾಡ ಹೊತ್ತುಕೊಂಡ ಸಹೋದರ ಶಂಕರ್ ಪ್ರಸಾದ್ ನಂತಹವರಿಗೆ ಬರದೇ ಇರೋದು ಬೇಸರದ ಸಂಗತಿ.. ಅದು ಶಂಕರ್ ಪ್ರಸಾದ್ ಇರಬಹುದು, ಅಬ್ದುಲ್ ರಹಿಮಾನ್ ಇರಬಹುದು ಇಲ್ಲವೇ ಜೋಸೆಫ್ ಇರಬಹುದು ಪರಸ್ಪರ ಅನ್ಯ ಧರ್ಮೀಯರ ವ್ಯಕ್ತಿಗಳು ಮೃತಪಟ್ಟಾಗ ಸಂಭ್ರಮಿಸುವುದೆಂದರೆ ಅದು ಯಾವ ರೀತಿಯ ಸಂಸ್ಕೃತಿ?

ಸಾಹಿತಿ ಡಾ.ಯು.ಆರ್. ಅನಂತಮೂರ್ತಿ ನಿಧನರಾದಾಗ ಪಟಾಕಿ ಹಚ್ಚಿ ಸಂಭ್ರಮಿಸುವವರು, ಮಕ್ಕಾದ ಮಸೀದಿಯ ಕಟ್ಟಡ ಕುಸಿದಾಗ ಫೇಸ್‌ಬುಕ್‌ನಲ್ಲಿ ಖುಷಿ ಹಂಚಿಕೊಳ್ಳುವವರು, ದೇವಸ್ಥಾನಕ್ಕೆ ಕಲ್ಲು ಹೊಡೆದು ತೃಪ್ತಿ ಪಟ್ಟುಕೊಳ್ಳುವವರಿಗೆಲ್ಲ ಧರ್ಮದ ಅಗತ್ಯವಾದರೂ ಏನು ಅನ್ನೋ ಪ್ರಶ್ನೆ ಮತ್ತೆ ಮತ್ತೆ ನಮ್ಮನ್ನೇ ನಾವು ಕೇಳಬೇಕಿದೆ. ಮಕ್ಕಳಲ್ಲಿ ಧರ್ಮ ಹುಡುಕಿ ಅವರ ಸಾವಲ್ಲೂ ಕ್ರೈಸ್ತರ ಜನ ಸಂಖ್ಯೆ ಕಡಿಮೆಯಾಯಿತು ಅಂದುಕೊಳ್ಳುವ ವಿಕೃತಿ ಮನಸ್ಸು ಮತ್ತು ಆತನಿಗೆ ಬೆಂಬಲ ನೀಡುವ ಧರ್ಮಾಂಧರ ಮನಸ್ಸಿಗೆ ಚಿಕಿತ್ಸೆ ಕೊಡಬೇಕಾದ ಅಗತ್ಯ ವಿದೆ.

ಮೊನ್ನೆ ಕೇರಳದ ಕೊಲ್ಲಂ ನಲ್ಲಿ ಬೆಂಕಿ ಅವಘಡವಾದಾಗ ಅದೆಷ್ಟೋ ಹೃದಯಗಳು ಮೃತ ವ್ಯಕ್ತಿಗಳಿಗಾಗಿ ಮಿಡಿದಿತ್ತು. ಮಂಗಳೂರು ಕೆಂಜಾರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ದುರಂತ ನಡೆದಾಗ ಹೆಗಲಿಗೆ ಹೆಗಲು ಕೊಟ್ಟ ಮಂದಿಯೂ ಕರಾವಳಿಯಲ್ಲಿ ಇದ್ದಾರೆ.. ಭೀಕರ ರಸ್ತೆ ಅಪಫಾತಗಳಾದಾಗ ಉಪವಾಸಿ ಮುಸ್ಲಿಮನು ವ್ರತ ತೊರೆಯೋ ಸಮಯ ಮೀರಿಯೂ ಯಾವುದೋ ಜಾತಿಯವನ ಪ್ರಾಣ ಉಳಿಸಲು ಪಣ ತೊಟ್ಟ ಪ್ರಸಂಗಗಳೂ ಇವೆ.. ಶಬರಿಮಲೆ ತೆರಳೋ ಮುನ್ನಾ ಊರಿನ ಮದ್ರಸ ಮಕ್ಕಳಿಗೆ ಸಿಹಿಯುಣಿಸಿ ಹೊರಡೋ ಯಾತ್ರಿಕರಿದ್ದಾರೆ.. ರಾತ್ರಿ ವೇಳೆ ಶಬರಿಮಲೆಯಿಂದ ಹಿಂದಿರುಗುವ ಮಂದಿಗೆ ಮಸೀದಿಯಲ್ಲಿ ತಂಗಲು ಅವಕಾಶ ನೀಡುವ ಕರಾವಳಿಯಲ್ಲಿದೆ ಸೌಹಾರ್ದ ಮನಸ್ಸುಗಳು.

ಇಷ್ಟೆಲ್ಲಾ ಇದ್ದರೂ ಕೂಡಾ ಅಲ್ಲೊಂದು, ಇಲ್ಲೊಂದು ವಿಕೃತಿ ಬಯಸೋ ಮನಸ್ಸುಗಳನ್ನು ಕಂಡಾಗ ನಿಜಕ್ಕೂ ಬೇಸರವೆನಿಸುತ್ತದೆ. ಮಕ್ಕಳ ಧರ್ಮ ನೋಡಿ ಸಾವಲ್ಲೂ ಸಂಭ್ರಮಿಸೋ ವಿಚಿತ್ರ ಜೀವಿಗಳು ಭಯೋತ್ಪಾದಕರಿಗೆ ಯಾವುದೇ ರೀತಿಯಲ್ಲೂ ಕಡಿಮೆಯಲ್ಲದ ವ್ಯಕ್ತಿಗಳಾಗಿದ್ದಾರೆ.
 

Writer - ಇರ್ಷಾದ್, ಕಿನ್ನಿಗೋಳಿ

contributor

Editor - ಇರ್ಷಾದ್, ಕಿನ್ನಿಗೋಳಿ

contributor

Similar News