ನರಸಿಂಹ ರಾವ್ ಮಾಡಿದ ಹಾನಿಗೆ ಇಂದಿಗೂ ಭಾರತ ಬೆಲೆ ತೆರುತ್ತಿದೆ: ಉಪರಾಷ್ಟ್ರಪತಿ ಹಾಮಿದ್ ಅನ್ಸಾರಿ

Update: 2016-06-28 03:13 GMT

ಹೊಸದಿಲ್ಲಿ, ಜೂ.28: ಮಾಜಿ ಪ್ರಧಾನಿ ಪಿ.ವಿ.ನರಸಿಂಹ ರಾವ್ ಅವರು ಮಾಡಿದ ಒಳ್ಳೆಯ ಕೆಲಸಗಳನ್ನು ಇಡೀ ರಾಷ್ಟ್ರ ಇಂದಿಗೂ ನೆನೆಸಿಕೊಳ್ಳುತ್ತಿರುವ ಜೊತೆಜೊತೆಗೇ, ಅವರ ಅವಧಿಯಲ್ಲಿ ದೇಶಕ್ಕೆ ಆಗಿರುವ ಹಾನಿಗೆ ಇಂದಿಗೂ ದೇಶ ಬೆಲೆ ತೆರುತ್ತಿದೆ ಎಂದು ಉಪರಾಷ್ಟ್ರಪತಿ ಹಾಮಿದ್ ಅನ್ಸಾರಿ ಹೇಳಿದ್ದಾರೆ. ಅಧಿಕ ಸುಂಕ ಸಂಗ್ರಹ, ಬಾಬ್ರಿ ಮಸೀದಿ ಧ್ವಂಸದಂಥ ಪ್ರಕರಣಗಳು ಇದಕ್ಕೆ ನಿದರ್ಶನ ಎಂದು ಹೇಳಿದ್ದಾರೆ.

ನರಸಿಂಹ ರಾವ್ ಕುರಿತು ವಿನಯ್ ಸೀತಾಪತಿ ಬರೆದ ಹಾಪ್ ಲಯನ್ ಎಂಬ ಕೃತಿ ಬಿಡುಗಡೆ ಸಮಾರಂಭದಲ್ಲಿ ಅನ್ಸಾರಿ ಈ ಅಭಿಪ್ರಾಯ ವ್ಯಕ್ತಪಡಿಸಿದರು. ಆ ಅವಧಿಯಲ್ಲಿ ರಾವ್ ನಿರ್ವಹಿಸಿದ ಪಾತ್ರವನ್ನು ಕೃತಿ ಸಮರ್ಥಿಸಿಕೊಂಡಿದೆ ಮತ್ತು ಬಾಬ್ರಿ ಮಸೀದಿ ಧ್ವಂಸವನ್ನು ಉದ್ದೇಶಪೂರ್ವಕವಾಗಿ ರಾವ್ ತಡೆಯಲಿಲ್ಲ ಎಂಬ ಪ್ರತಿಪಾದನೆಗಳನ್ನು ಕೃತಿಯಲ್ಲಿ ಅಲ್ಲಗಳೆಯಲಾಗಿದೆ.

ಕಾಂಗ್ರೆಸ್ ಪಕ್ಷ ರಾವ್ ಅವರ ಬಗ್ಗೆ ನಿರ್ದಯ ಮನೋಭಾವ ಹೊಂದಿದೆ. ಮುಸ್ಲಿಂ ಮತಗಳನ್ನು ಸೆಳೆಯುವ ಸಲುವಾಗಿ ಅವರ ಮೇಲೆ ಗೂಬೆ ಕೂರಿಸಿದೆ ಎಂದು ಕೃತಿ ಪ್ರತಿಪಾದಿಸಿದೆ.

ಬಾಬ್ರಿ ಮಸೀದಿ ಧ್ವಂಸಕ್ಕೆ ಸಂಬಂಧಿಸಿದಂತೆ ಕೃತಿಯನ್ನು ಅನ್ಸಾರಿ ಉಲ್ಲೇಖಿಸಿದರು. ‘‘ರಾವ್ ಮಸೀದಿ ರಕ್ಷಿಸುವ ಉದ್ದೇಶ ಹೊಂದಿದ್ದರು. ಜೊತೆಜೊತೆಗೇ ಹಿಂದೂ ಭಾವನೆಗಳನ್ನು ಹಾಗೂ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಬಯಸಿದ್ದರು. ಪರಿಣಾಮವಾಗಿ ಮಸೀದಿ ಧ್ವಂಸವಾಯಿತು. ಆದರೆ ಹಿಂದೂಗಳನ್ನು ಕಾಂಗ್ರೆಸ್ ಸೆಳೆಯಲಾಗಲಿಲ್ಲ ಹಾಗೂ ಅವರ ಘನತೆಗೂ ಧಕ್ಕೆಯಾಯಿತು.’’ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News