ಅಹ್ಮದಾಬಾದ್: ಚಿಟ್‌ಫಂಡ್ ಮಾಲಕನಿಂದ 50 ಕೋಟಿ ರೂ. ಪಂಗನಾಮ

Update: 2016-06-28 03:18 GMT

ಅಹ್ಮದಾಬಾದ್, ಜೂ.28: ಬಹುಕೋಟಿ ಹಗರಣವೊಂದು ಇಲ್ಲಿ ಬೆಳಕಿಗೆ ಬಂದಿದ್ದು, ಅಹ್ಮದಾಬಾದ್ ಮೂಲದ ಚಿಟ್‌ಫಂಡ್ ಕಂಪೆನಿಯೊಂದು ಗ್ರಾಹಕರಿಗೆ ಕೋಟ್ಯಂತರ ರೂಪಾಯಿಗಳನ್ನು ವಂಚಿಸಿದೆ. ಹಲವು ಮಂದಿ ಹಿರಿಯ ನಾಗರಿಕರು ಹಾಗೂ ವಿಧವೆಯರ ಜೀವಮಾನದ ಉಳಿತಾಯವನ್ನು ಕಂಪೆನಿ ಕೊಳ್ಳೆ ಹೊಡೆದಿದೆ ಎಂದು ಪೊಲೀಸರು ಹೇಳಿದ್ದಾರೆ. ಈಗಾಗಲೇ 10 ಕೋಟಿ ರೂಪಾಯಿ ವಂಚನೆ ಮಾಡಿರುವುದು ಖಚಿತವಾಗಿದೆ. ಆದರೆ ಈ ವಂಚನೆ ಪ್ರಮಾಣ 50 ಕೋಟಿ ಮೀರುವ ಸಾಧ್ಯತೆ ಇದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಹಲವು ದಾಳಿಗಳ ಹೊರತಾಗಿಯೂ ಮುಖ್ಯ ಆರೋಪಿ ಭರತ್ ದವೆ ತಲೆಮರೆಸಿಕೊಂಡಿದ್ದಾನೆ.

ಖಾಸಗಿ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದು ನಿವೃತ್ತರಾದ ವಿನೋದ್ ಪಟೇಲ್ ಎಂಬ 73ರ ವೃದ್ಧರೊಬ್ಬರು ನಿವೃತ್ತಿ ವೇಳೆ ಬಂದ ಎಲ್ಲ ಹಣವನ್ನು ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಠೇವಣಿ ಇಟ್ಟಿದ್ದರು. ಆದರೆ ಕೆಲ ವರ್ಷಗಳ ಹಿಂದೆ ರುದ್ರಾಕ್ಷ್ ಎಂಬಾತ ಇವರನ್ನು ಸಂಪರ್ಕಿಸಿ, ಹಿರಿಯ ನಾಗರಿಕರು ಹಾಗೂ ವಿಧವೆಯರಿಗೆ ಮಾಸಿಕ ಶೇ.2ರಷ್ಟು ಪ್ರತಿಫಲ ನೀಡುವ ಭರವಸೆ ನೀಡಿದ್ದ.

ಪಟೇಲ್ ತಮ್ಮ ಎಲ್ಲ ಹಣವನ್ನು ಅಲ್ಲಿ ಹೂಡಿದರು. ಆದರೆ ಕೆಲ ದಿನಗಳ ಹಿಂದೆ ಪತ್ನಿಯ ವೈದ್ಯಕೀಯ ವೆಚ್ಚಕ್ಕಾಗಿ ಹಣ ವಾಪಸು ಪಡೆಯಲು ಹೋದಾಗ, ಟ್ರಸ್ಟ್‌ನ ಅಧ್ಯಕ್ಷ ಭರತ್ ದವೆ ತಲೆ ಮರೆಸಿಕೊಂಡಿರುವುದು ಗಮಕ್ಕೆ ಬಂತು. ನನಗೆ ಯಾವ ವೈದ್ಯಕೀಯ ವಿಮೆಯೂ ಇಲ್ಲ. ತುರ್ತು ಸಂದರ್ಭಕ್ಕಾಗಿ ಈ ಹಣ ಇಟ್ಟುಕೊಂಡಿದ್ದೆ. ಇದೀಗ ಏನೂ ಇಲ್ಲದಾಗಿದೆ ಎಂದು ಅವರು ಹೇಳಿದರು.

ಹೀಗೆ ಹಣ ಕಳೆದುಕೊಂಡ ನೂರಾರು ಮಂದಿ ಹಿರಿಯ ನಾಗರಿಕರು ಹಾಗೂ ವಿಧವೆಯರು ಪೊಲೀಸರಿಗೆ ದೂರು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News