ಪ್ರಗತಿಯಲ್ಲಿ ಹಿಂದಿರುವ ಇಲಾಖೆ ಹಾಗೂ ಜಿಲ್ಲೆಗೆ ಹೆಚ್ಚಿನ ಆದ್ಯತೆ: ಸಿಎಂ ಸಿದ್ದರಾಮಯ್ಯ
ಬೆಂಗಳೂರು, ಜೂ.28: ಪ್ರಗತಿಯಲ್ಲಿ ಹಿಂದಿರುವ ಇಲಾಖೆ ಹಾಗೂ ಜಿಲ್ಲೆಗಳಿಗೆ ಹೆಚ್ಚಿನ ಆದ್ಯತೆ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ನಡೆದ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಾಹಣಾಧಿಕಾರಿಗಳು ಹಾಗೂ ಪ್ರಾದೇಶಿಕ ಆಯುಕ್ತರ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಎರಡು ದಿನದಲ್ಲಿ ನಡೆದ ಸಭೆಯಲ್ಲಿ ಕೆಲವು ಇಲಾಖೆಗಳು ಹಾಗೂ ಜಿಲ್ಲೆಗಳು ಅಭಿವೃದ್ಧಿಯಲ್ಲಿ ಕುಂಠಿತವಾಗಿರುವುದು ಕಂಡು ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.ನ್ನು ಮುಂದೆ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಜನಸಂಪರ್ಕ ಸಭೆ ನಡೆಯಲಿದ್ದು, ಜಿಲ್ಲಾಧಿಕಾರಿಗಳು ಸೇರಿದಂತೆ ಎಲ್ಲಾ ಅಧಿಕಾರಿಗಳು ಜನರ ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ. ಜನರ ಮೂಲಭೂತ ಸಮಸ್ಯೆಗಳನ್ನು ನಿವಾರಿಸುವುದೇ ಮುಂದಿನ ಎರಡು ವರ್ಷದ ಸರಕಾರದ ಮುಖ್ಯ ಕರ್ತವ್ಯವೆಂದು ಅವರು ಹೇಳಿದರು.ಲ್ಲ ಬಡವರಿಗೆ ಆಹಾರ ಪೂರೈಸುವುದು ಸರಕಾರದ ಕರ್ತವ್ಯ. ಜತೆಗೆ ಅರ್ಹ ಫಲಾನುಭವಿಗಳಿಗೆ ಮಾತ್ರ ಆಹಾರ ಒದಗಿಸಬೇಕಾಗಿದೆ. ಇದಕ್ಕಾಗಿ ಪಡಿತರ ಚೀಟಿಯನ್ನು ಆಧಾರ್ ಸಂಖ್ಯೆಗೆ ಸಂಪರ್ಕ ಕಲ್ಪಿಸಲಾಗುತ್ತಿದೆ. ಈ ಪ್ರಕ್ರಿಯೆ ಪೂರ್ಣಗೊಂಡರೆ ಶೇ.20 ಅನರ್ಹರನ್ನು ತೆಗೆದು ಹಾಕಬಹುದು. ಹೊಸ ಪಡಿತರ ಚೀಟಿಗಳಿಗೆ 10 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ. ಆರಂಭದಲ್ಲಿ ರಾಜ್ಯದಲ್ಲಿ 80 ಲಕ್ಷ ಪಡಿತರಚೀಟಿ ಇತ್ತು. ಈಗ 1.7ಕೋಟಿ ಪಡಿತರ ಚೀಟಿಗಳನ್ನು ವಿತರಿಸಲಾಗಿದೆ ಎಂದು ಸಿದ್ದರಾಮಯ್ಯ ವಿವರಿಸಿದರು.
ರಾಜ್ಯದ 64 ಸಾವಿರ ಅಂಗನವಾಡಿಗಳಲ್ಲಿ ಕೇವಲ 44 ಸಾವಿರ ಅಂಗನವಾಡಿಗಳು ಸ್ವಂತ ಕಟ್ಟಡ ಹೊಂದಿವೆ. 19 ಸಾವಿರ ಅಂಗನವಾಡಿಗಳಿಗೆ ಸ್ವಂತ ಕಟ್ಟಡವಿಲ್ಲ, ಜಾಗವಿಲ್ಲ. ಮೂರು ತಿಂಗಳಲ್ಲಿ ಸ್ವಂತ ಜಾಗವನ್ನು ಕಲ್ಪಿಸಿಕೊಡಬೇಕೆಂದು ಸೂಚಿಸಿದ್ದು, ಮುಂದಿನ ಮಾರ್ಚ್ ಒಳಗೆ ಕಟ್ಟಡ ಕಾಮಗಾರಿ ಪೂರ್ಣವಾಗಿರಬೇಕೆಂದು ಆದೇಶಿಸಲಾಗಿದೆ. ಎಸ್‌ಸಿ, ಎಸ್‌ಟಿ, ಅಲ್ಪಸಂಖ್ಯಾತರ ವಸತಿ ನಿಲಯಗಳು ಅಂಗನವಾಡಿ, ವಸತಿಶಾಲೆಗಳಿಗೆ ಗ್ರಾಮೀಣ ಪ್ರದೇಶಗಳಲ್ಲಿ ಸರಕಾರಿ ಜಾಗ, ನಗರದಲ್ಲಿ ಸಿಎ ನಿವೇಶನ ನೀಡಬೇಕು. 100 ಎಕರೆ ವರೆಗೆ ನೇರ ಖರೀದಿ ಮಾಡಲು ಇತ್ತೀಚೆಗೆ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಅವಕಾಶ ಬಳಸಿಕೊಂಡು ಜಾಗ ಪಡೆಯಬಹುದು ಎಂದು ಅವರು ಹೇಳಿದರು.
ಸರಕಾರವು ಪ್ರತೀ ವರ್ಷ ಮೂರು ಲಕ್ಷ ಮನೆಗಳನ್ನು ನಿರ್ಮಿಸುವ ಗುರಿ ಹೊಂದಿದೆ. ಈ 3 ವರ್ಷಗಳಲ್ಲಿ 8.40 ಲಕ್ಷ ಮನೆಗಳನ್ನು ನಿರ್ಮಿಸಲಾಗಿದೆ. ಮುಂದೆಯೂ ನಿಗದಿ ಪಡಿಸಿದ ಗುರಿಯನ್ನು ಮುಟ್ಟಲು ಸೂಚಿಸಲಾಗಿದೆ. ಗ್ರಾಮಸಭೆಗಳಲ್ಲಿ ತೀರ್ಮಾನವಾಗದ ಅರ್ಜಿಗಳನ್ನು ಸಂಪುಟದ ಮುಂದೆ ಇಡುವಂತೆ ತಿಳಿಸಲಾಗಿದೆ. ಸಾರ್ವಜನಿಕ ಆಸ್ಪತ್ರೆ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಹಾಸಿಗೆ ಕೊರತೆ ಕಂಡು ಬಂದಿದೆ. ಇದರ ಜತೆಗೆ ವೈದ್ಯರ ಕೊರತೆಯೂ ಇದೆ. ವೈದ್ಯರ ನೇಮಕಕ್ಕೆ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಲಾಗಿದೆ. ರಾಜ್ಯದಲ್ಲಿ ಶಿಶು ಮರಣ ಮತ್ತು ತಾಯಿ ಮರಣ ಪ್ರಮಾಣ ಹೆಚ್ಚಾಗುತ್ತಿದೆ. ಇದನ್ನು ತಡೆಯಬೇಕೆಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ಹೇಳಿದರು.
ಉಪಸಮಿತಿ ಸಭೆ: ಅರಣ್ಯ ಪ್ರದೇಶಗಳಲ್ಲಿ ವಾಸಿಸುವವರಿಗೆ ಹಕ್ಕುಪತ್ರ ನೀಡಲು ವಿಶೇಷ ಅಭಿಯಾನ ನಡೆಸಲು ರಾಜ್ಯ ಸರಕಾರ ತೀರ್ಮಾನಿಸಿದೆ. ಈ ಬಗ್ಗೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ನೇತೃತ್ವದಲ್ಲಿ ಉಪಸಮಿತಿ ಸಭೆ ನಡೆಯಲಿದ್ದು, ಶೀಘ್ರದಲ್ಲಿ ಹಕ್ಕುಪತ್ರ ವಿತರಿಸಲು ನಿರ್ಧಾರ ಕೈಗೊಳ್ಳಲಾಗುವುದು. ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿರುವವರ ಜಂಟಿ ಸರ್ವೇ ಈಗಾಗಲೇ ನಡೆದಿದೆ. ಶಿವಮೊಗ್ಗ, ಉತ್ತರಕನ್ನಡ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಹೆಚ್ಚು ಹಕ್ಕುಪತ್ರ ನೀಡಬೇಕಿದೆ. ಸರಕಾರಿ, ಖಾಸಗಿ ಹಾಗೂ ಅರಣ್ಯ ಇಲಾಖೆಯ ಜಮೀನು ಗಳಲ್ಲಿ ಮನೆ ನಿರ್ಮಿಸಿಕೊಂಡಿದ್ದರೆ ಸಕ್ರಮ ಮಾಡಿಕೊಡ ಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.