ಪರ್ತ್: ಮಸೀದಿ ಮೇಲೆ ಪೆಟ್ರೋಲ್ ಬಾಂಬ್ ದಾಳಿ

Update: 2016-06-29 11:27 GMT

ಪರ್ತ್, ಜೂ. 29: ಆಸ್ಟ್ರೇಲಿಯದ ಪರ್ತ್‌ನಲ್ಲಿರುವ ಮಸೀದಿಯೊಂದರಲ್ಲಿ ಮಂಗಳವಾರ ರಾತ್ರಿ ನೂರಾರು ಮಂದಿ ಪ್ರಾರ್ಥನೆಯಲ್ಲಿ ತೊಡಗಿದ್ದಾಗ ಶಂಕಿತ ಪೆಟ್ರೋಲ್ ಬಾಂಬೊಂದನ್ನು ಎಸೆಯಲಾಗಿದೆ.

ಪೆಟ್ರೋಲ್ ಬಾಂಬ್‌ನಿಂದಾಗಿ ತೋರ್ನಿಲ್ ಮಸೀದಿಯ ಹೊರಗೆ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲವಾದರೂ, ನಾಲ್ಕು ವಾಹನಗಳಿಗೆ ಹಾನಿಯಾಗಿದೆ. ಒಂದು ವಾಹನವಂತೂ ಸಂಪೂರ್ಣವಾಗಿ ಸುಟ್ಟು ಹೋಗಿದೆ ಎಂದು ಪೊಲೀಸರು ತಿಳಿಸಿದರು.

 ಬಳಿಕ, ಈ ಮಸೀದಿಗೆ ಸಂಬಂಧಿಸಿದ ಇಸ್ಲಾಮಿಕ್ ಕಾಲೇಜೊಂದರ ಗೋಡೆಯಲ್ಲಿ ಇಸ್ಲಾಮಿಕ್ ವಿರೋಧಿ ಬರಹಗಳನ್ನು ಸ್ಪ್ರೇಪೇಂಟ್ ಮೂಲಕ ಬರೆದಿದ್ದು ಪತ್ತೆಯಾಯಿತು.

ಈ ಘಟನೆಯನ್ನು ಖಂಡಿಸಿರುವ ಪ್ರಧಾನಿ ಮಾಲ್ಕಮ್ ಟರ್ನ್‌ಬುಲ್, ಆಸ್ಟ್ರೇಲಿಯದಲ್ಲಿ ಪರಸ್ಪರರನ್ನು ಗೌರವಿಸುವ ಸಂಪ್ರದಾಯ ಹಾಸುಹೊಕ್ಕಾಗಿದೆ ಎಂದು ಹೇಳಿದ್ದಾರೆ.

‘‘ಪರ್ತ್ ಮುಸ್ಲಿಂ ಸಮುದಾಯಕ್ಕೆ ಇಂದು ಸಂಜೆ ದ್ವೇಷದ ದರ್ಶನವಾಯಿತು’’ ಎಂದು ಇಸ್ಲಾಮಿಕ್ ಕಾಲೇಜ್‌ನಲ್ಲಿನ ಶಿಕ್ಷಕ ಯಾಹ್ಯ ಆದಿಲ್ ಇಬ್ರಾಹೀಂ ‘ಫೇಸ್‌ಬುಕ್’ನಲ್ಲಿ ಬರೆದಿದ್ದಾರೆ.

‘‘ಇದು ನಿಸ್ಸಂಶಯವಾಗಿ ಕ್ರಿಮಿನಲ್ ದ್ವೇಷ ಕೃತ್ಯವಾಗಿದೆ. ಆದರೆ, ಇದು ಓರ್ವ ವ್ಯಕ್ತಿ ಅಥವಾ ಒಂದು ಗುಂಪು ಮಾಡಿದ ಕೃತ್ಯವೇ ಹೊರತು ಸಮುದಾಯವಲ್ಲ’’ ಎಂದರು.

ಸ್ಫೋಟದ ಹೊರತಾಗಿಯೂ ಪ್ರಾರ್ಥನಾನಿರತರು ಪ್ರಾರ್ಥನೆ ಮುಗಿದ ಬಳಿಕವೇ ತೆರಳಿದರು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News