ಜುಲೈನಿಂದ ಮಂಗಳೂರು ಮನಪಾ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ನಿಷೇಧ!

Update: 2016-06-29 14:49 GMT

ಮಂಗಳೂರು, ಜೂ.29: ರಾಜ್ಯ ಸರಕಾರದ ಅಧಿಸೂಚನೆಯಂತೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿಷೇಧಿತ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲು ನಿರ್ಧರಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಶಾಲೆಗಳ ಮೂಲಕ ಒಂದು ಲಕ್ಷ ಬಟ್ಟೆ ಚೀಲಗಳನ್ನು ವಿತರಿಸಲು ನಿರ್ಧರಿಸಲಾಗಿದೆ ಎಂದು ಮೇಯರ್ ಹರಿನಾಥ್ ತಿಳಿಸಿದರು.

ಮನಪಾ ಸಾಮಾನ್ಯ ಸಭೆಯಲ್ಲಿ ಇಂದು ಪ್ಲಾಸ್ಟಿಕ್ ನಿಷೇಧದ ಹಿನ್ನೆಲೆಯಲ್ಲಿ ಸಾರ್ವಜನಿಕರ ಬಳಕೆಗೆ ಉಪಯೋಗವಾಗುವಂತೆ ಉಚಿತವಾಗಿ ವಿತರಿಸಲಾಗುವ ಬಟ್ಟೆ ಚೀಲಗಳನ್ನು ಅನಾವರಣಗೊಳಿಸಿ, ಅದನ್ನು ಉಪ ಮೇಯರ್, ಹಿರಿಯ ಸದಸ್ಯರು, ವಿಪಕ್ಷ ನಾಯಕರಿಗೆ ವಿತರಿಸಿದರು.

ಪ್ರಥಮ ಹಂತದಲ್ಲಿ ಸಾರ್ವಜನಿಕರಿಗಾಗಿ 15,000 ಬಟ್ಟೆ ಚೀಲಗಳನ್ನು ವಿತರಿಸಲು ಟೆಂಡರ್ ಮೂಲಕ ಖರೀದಿಸಲಾಗಿದೆ. ನಗರದ ನಾಲ್ಕು ಶಾಲೆಗಳ ಮೂಲಕ ಮಕ್ಕಳಿಂದ ಮನೆಗಳಿಗೆ ಈ ಚೀಲಗಳನ್ನು ತಲುಪಿಸುವ ವ್ಯವಸ್ಥೆ ಮಾಡಲಾಗುವುದು. ನಗರದಲ್ಲಿ ಒಟ್ಟು 1 ಲಕ್ಷ ಚೀಲಗಳನ್ನು ಉಚಿತವಾಗಿ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರು ನಗರದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ತ್ಯಜಿಸುವ ಮೂಲಕ ಸ್ವಚ್ಛ ಮಂಗಳೂರಿಗೆ ಸಹಕರಿಸಬೇಕು ಎಂದು ಮೇಯರ್ ಈ ಸಂದರ್ಭ ಮನವಿ ಮಾಡಿದರು.

ಪ್ಲಾಸ್ಟಿಕ್ ನಿಷೇಧ ಹೋರ್ಡಿಂಗ್ ಹಾಗೂ ಫ್ಲೆಕ್ಸ್‌ಗಳಿಗೆ ಅನ್ವಯವಾಗುವುದಿಲ್ಲವೇ ಎಂದು ಸದಸ್ಯರಾದ ಸುಧೀರ್ ಶೆಟ್ಟಿ, ನವೀನ್ ಡಿಸೋಜ ಸೇರಿದಂತೆ ಸದಸ್ಯರನೇಕರು ಸಭೆಯಲ್ಲಿ ಪ್ರಶ್ನಿಸಿದರು. ಇದಕ್ಕುತ್ತರಿಸಿದ ಮೇಯರ್ ಹರಿನಾಥ್, ಪ್ಲಾಸ್ಟಿಕ್ ಬ್ಯಾನರ್ ಹಾಗೂ ಫ್ಲೆಕ್ಸ್‌ಗಳ ಬಗ್ಗೆ ಹೈಕೋರ್ಟ್‌ನಿಂದ ಶೀಘ್ರದಲ್ಲೇ ಆದೇಶ ಹೊರಬೀಳಲಿದೆ ಎಂದರು.

ವೃತ್ತಗಳಲ್ಲಿ ಸ್ವಯಂಘೋಷಿತ ನಾಮಫಲಕ ತೆರವಿಗೆ ಆಗ್ರಹ

ನಗರ ಪಾಲಿಕೆಯ ಕೆಲವು ವೃತ್ತಗಳಿಗೆ ಖಾಸಗಿ ನಾಮಫಲಕಗಳನ್ನು ಅಳವಡಿಸುವ ಕಾರ್ಯ ನಡೆಯುತ್ತಿದೆ. ಮನಪಾ ಅಧಿಕಾರಿಗಳು ವೌನವಾಗಿದ್ದಾರೆ ಎಂದು ಸಭೆಯಲ್ಲಿ ಸದಸ್ಯರನೇಕರು ಆಕ್ಷೇಪಿಸಿದರು.

ಮಾಜಿ ಮೇಯರ್ ಮಹಾಬಲ ಮಾರ್ಲ ಮಾತನಾಡಿ, ನಂತೂರು ವೃತ್ತಕ್ಕೆ ನಗರ ಪಾಲಿಕೆ ವತಿಯಿಂದ ಫೀಲ್ಡ್ ಮಾರ್ಶಲ್ ಜನರಲ್ ಕಾರ್ಯಪ್ಪ ಅವರ ಹೆಸರನ್ನು ಅಧಿಕೃತವಾಗಿ ಇಡಲಾಗಿದೆ. ಆದರೆ ಕೆಲವು ಸಂಘಟನೆಯವರು ಕಯ್ಯಾರ ಕಿಂಞಣ್ಣ ರೈ ವೃತ್ತ ಎಂದು ಅಲ್ಲಿ ಬೋರ್ಡ್ ಹಾಕಿದ್ದರು. ಆ ಬೋರ್ಡ್ ಬಿದ್ದ ಬಳಿಕ ನಗರ ಪಾಲಿಕೆಗೆ ಸಾಧಕರ ಬಗ್ಗೆ ಗೌರವವಿಲ್ಲ ಎಂದು ಆರೋಪಿಸಲಾಗಿದೆ. ಒಂದು ವೃತ್ತಕ್ಕೆ ಈಗಾಗಲೇ ಹೆಸರು ಇರುವಾಗ ಇನ್ನೊಬ್ಬರ ಹೆಸರಿನ ಬೋರ್ಡ್ ಹಾಕುವುದು ಅಗೌರವ. ಕೆಪಿಟಿ ವೃತ್ತ ಸಹಿತ ಕೆಲವು ವೃತ್ತಗಳಿಗೆ ಈ ರೀತಿ ಅನಧಿಕೃತ ಬೋರ್ಡ್ ಹಾಕಲಾಗಿದೆ. ನಗರ ಪಾಲಿಕೆಗೆ ಎಲ್ಲ ಸಾಧಕರ ಬಗ್ಗೆ ಗೌರವವಿದೆ. ಆದರೆ ರಸ್ತೆ ಮತ್ತು ವೃತ್ತಗಳಿಗೆ ನಾಮಕರಣಕ್ಕಿರುವ ನಿಯಮಾವಳಿಗಳು ಪಾಲನೆಯಾಗಬೇಕು ಎಂದು ಆಗ್ರಹಿಸಿದರು.

ಸಿಪಿಎಂ ಸದಸ್ಯ ದಯಾನಂದ ಶೆಟ್ಟಿ ಮಾತನಾಡಿ, ಕ್ಲಾಕ್ ಟವರ್ ವೃತ್ತಕ್ಕೆ ‘ವಿವೇಕಾನಂದ ವೃತ್ತ’ ಎಂದು ನಾಮಕರಣ ಮಾಡಲಾಗಿದೆ. ಆದರೆ ಬೋರ್ಡ್ ಹಾಕಿಲ್ಲ. ಆದರೆ ಈಗ ಅಲ್ಲಿ ಯಾರೋ ಕೆ.ಎನ್.ಟೇಲರ್ ವೃತ್ತ ಎಂಬ ಬೋರ್ಡ್ ಅಳವಡಿಸಿದ್ದಾರೆ. ಪಾಲಿಕೆ ಅಧಿಕಾರಿಗಳು ಈ ದಾರಿಯಲ್ಲಿ ನಡೆದಾಡುವುದಿಲ್ಲವೇ? ಇದು ಅವರ ಗಮನಕ್ಕೆ ಬಂದಿಲ್ಲವೇ ಎಂದು ಪ್ರಶ್ನಿಸಿದರು.

ಸ್ವಯಂ ಘೋಷಿತವಾಗಿ ಹಾಕಲಾದ ಫಲಕಗಳನ್ನು ತೆರವುಗೊಳಿಸಬೇಕೆಂದು ಅಧಿಕಾರಿಗಳಿಗೆ ಸಭೆಯಲ್ಲಿ ಆದೇಶಿಸಿದ ಮೇಯರ್ ಹರಿನಾಥ್, ಯಾವ ಸರ್ಕಲ್‌ಗೆ ಯಾವ ಹೆಸರನ್ನು ಸರಕಾರ ನೀಡಿದೆ ಎಂಬುದನ್ನು ಮುಂದಿನ ಸಭೆಯಲ್ಲಿ ಮಂಡಿಸಬೇಕೆಂದು ನಿರ್ದೇಶಿಸಿದರು.

ಪಡೀಲ್- ಬಜಾಲ್ ರೈಲ್ವೇ ರಸ್ತೆ: 3 ದಿನಗಳೊಳಗೆ ನಡೆದಾಡಲು ವ್ಯವಸ್ಥೆ!

ಪಡೀಲ್-ಬಜಾಲ್ ರೈಲ್ವೇ ಅಂಡರ್‌ಪಾಸ್ ಕಾಮಗಾರಿಯಿಂದಾಗಿ ಸಂಚಾರ ವ್ಯವಸ್ಥೆ ತೀವ್ರ ಹದಗೆಟ್ಟಿದೆ. ಕನಿಷ್ಠ ಅಲ್ಲಿ ಜನರು ನಡೆದಾಡಲಾದರೂ ವ್ಯವಸ್ಥೆ ಮಾಡಿ ಎಂದು ಸದಸ್ಯ ವಿಜಯ ಕುಮಾರ್ ಶೆಟ್ಟಿ ಸಭೆಯಲ್ಲಿ ಆಗ್ರಹಿಸಿದರು.

ಸುಧೀರ್ ಶೆಟ್ಟಿ ಮಾತನಾಡಿ, ಆ ವ್ಯಾಪ್ತಿಯಲ್ಲಿ ಸಂಚಾರ ವ್ಯವಸ್ಥೆಗೆ ಬಹುದೊಡ್ಡ ಕಂಟಕವಾಗಿ ಪರಿಣಮಿಸಿದ ಈ ಅಂಡರ್‌ಪಾಸ್ ಕಾಮಗಾರಿಯಿಂದ ಸಾರ್ವಜನಿಕರು ಜನಪ್ರತಿನಿಧಿಗಳನ್ನು ತರಾಟೆಗೈಯ್ಯುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಅಬ್ದುಲ್ ರವೂಫ್ ಮಾತನಾಡಿ, ಇದು ಗಂಭೀರ ವಿಷಯ. ಇದು ಹಲವಾರು ಪ್ರತಿಭಟನೆಗೂ ಕಾರಣವಾಗುತ್ತಿದೆ. ನಾವೇನೂ ಲಿಫ್ಟ್‌ನಲ್ಲಿ ಹೋಗಬೇಕಾ? ಅಥವಾ ಏರೋಪ್ಲೇನ್‌ನಲ್ಲಿ ಹೋಗಬೇಕಾ? ಎಂದು ಪ್ರಶ್ನಿಸಿದರು.

ಅಧಿಕಾರಿ ಲಿಂಗೇಗೌಡ ಮಾತನಾಡಿ, 2 ವಾರದಿಂದ ಭಾರೀ ಮಳೆಯಾಗುತ್ತಿರುವುದರಿಂದ ಕಾಂಕ್ರೀಟ್ ಕೆಲಸಕ್ಕೆ ಅಡ್ಡಿಯಾಗಿದೆ. ಗುತ್ತಿಗೆ ವಹಿಸಿದ್ದ ಲ್ಯಾಂಡ್ ಆರ್ಮಿಯವರು ಕೆಲಸ ಮಾಡಲು ಆಗುವುದಿಲ್ಲ ಎಂದು ಬಿಟ್ಟು ಹೋಗಿದ್ದಾರೆ. ಅವರ ಬದಲಾಗಿ ಇದೀಗ ಕಾಮಗಾರಿ ನಡೆಸಲಾಗುತ್ತಿದೆ. ಮುಂದಿನ ಮೂರು ದಿನಗಳಲ್ಲಿ ಇಲ್ಲಿ ಒಂದು ಭಾಗದಲ್ಲಿ ನಡೆದಾಡಲು ವ್ಯವಸ್ಥೆ ಮಾಡಲಾಗುವುದು ಎಂದರು.

ಹೆದ್ದಾರಿ ಕಾಮಗಾರಿ: ಹದಗೆಟ್ಟಿವೆ ಒಳರಸ್ತೆಗಳು!

ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದಾಗಿ ಪಂಪ್‌ವೆಲ್‌ನಿಂದ ಗೋರಿಗುಡ್ಡೆವರೆಗಿನ ಒಳರಸ್ತೆಗಳು ತೀರಾ ಹದಗೆಟ್ಟಿವೆ. ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಅಸಮರ್ಪಕ ಕಾಮಗಾರಿಯಿಂದ ಚರಂಡಿಗಳು ಬಂದ್ ಆಗಿವೆ. ಹೆದ್ದಾರಿ ಅಧಿಕಾರಿಗಳು ಮನಪಾ ಅಧಿಕಾರಿಗಳತ್ತ ಕೈತೋರಿಸಿದರೆ, ಮನಪಾದವರು ಹೆದ್ದಾರಿ ಅಧಿಕಾರಿಗಳನ್ನು ಬೆಟ್ಟು ಮಾಡುತ್ತಿದ್ದಾರೆ. ಇದಕ್ಕೆ ಸಮಸ್ಯೆ ನೀಡುವವರು ಯಾರು ಎಂದು ಸದಸ್ಯೆ ಆಶಾ ಡಿಸಿಲ್ವಾ ಅಸಮಾಧಾನ ವ್ಯಕ್ತಪಡಿಸಿದರು.

ಮೇಯರ್ ಮಾತನಾಡಿ, ಶೀಘ್ರದಲ್ಲಿ ಸಂಸದರ ಜತೆಗೆ ಚರ್ಚಿಸಿ, ರಾ.ಹೆ. ಪ್ರಾಧಿಕಾರದ ಅಧಿಕಾರಿಗಳು ಹಾಗೂ ಪಾಲಿಕೆ ಅಧಿಕಾರಿಗಳ ಸಭೆ ನಡೆಸುವುದಾಗಿ ಹೇಳಿದರು.

ಮತ್ತೆ ಕಾಡಿದ ನೆಹರು ಪ್ರತಿಮೆ ವಿವಾದ!

ಕಳೆದ ಸಭೆಯಲ್ಲಿ ತೀವ್ರ ಚರ್ಚೆ ಹಾಗೂ ವಿಪಕ್ಷದ ಸಭಾತ್ಯಾಗಕ್ಕೆ ಕಾರಣವಾಗಿದ್ದ ನೆಹರೂ ಪ್ರತಿಮೆ ಸ್ಥಾಪನೆ ವಿವಾದ ಮತ್ತೆ ಇಂದು ಸಭೆಯ ಆರಂಭದಲ್ಲೇ ಕೆಲ ಹೊತ್ತು ಚರ್ಚೆಗೆ ಗ್ರಾಸವಾಯಿತು.

ಮನಪಾ ಪ್ರತಿಪಕ್ಷ ನಾಯಕಿ ರೂಪಾ ಡಿ. ಬಂಗೇರ ಮಾತನಾಡಿ, ನೆಹರೂ ಮೈದಾನಿನಲ್ಲಿ ನೆಹರೂ ಪ್ರತಿಮೆ ರಚನೆಗೆ ನಮ್ಮ ವಿರೋಧವಿಲ್ಲ. ಆದರೆ, ನೆಹರೂ ಅವರ 2 ಪ್ರತಿಮೆ ಕೆಲವೇ ಮೀಟರ್ ಅಂತರದಲ್ಲಿ ಇರುವುದರಿಂದ ಪ್ರತಿಮೆಗೆ ಸ್ಥಳ ಬದಲಾಯಿಸಬೇಕು. ಜೊತೆಯಲ್ಲೇ ಕ್ಲಾಕ್ ಟವರ್‌ನಲ್ಲಿ ಸ್ವಾಮಿ ವಿವೇಕಾನಂದರ ಪ್ರತಿಮೆ ಹಾಗೂ ಜ್ಯೋತಿಯ ಅಂಬೇಡ್ಕರ್ ಸರ್ಕಲ್‌ನಲ್ಲಿ ಅಂಬೇಡ್ಕರ್ ಪ್ರತಿಮೆಗೆ ಅನುಮೋದನೆ ಆಗಿರುವುದನ್ನು ಕಾರ್ಯಗತಗೊಳಿಸಬೇಕೆಂದು ಆಗ್ರಹಿಸಿದರು. ಈ ಬಗ್ಗೆ ಸಭೆಯಲ್ಲಿ ಕೆಲಹೊತ್ತು ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.

ಬಳಿಕ ಉತ್ತರಿಸಿದ ಮೇಯರ್ ಹರಿನಾಥ್, ನೆಹರೂ ಪ್ರತಿಮೆ ನಿರ್ಮಾಣಕ್ಕೆ ಪಾಲಿಕೆಯ ಈ ಹಿಂದಿನ ಸಭೆಯಲ್ಲಿ ಸರ್ವಾನುಮತದ ಒಪ್ಪಿಗೆ ದೊರಕಿದೆ. ಹೀಗಾಗಿ ಅದರ ನಿರ್ಮಾಣದ ವಿಷಯದ ಚರ್ಚೆ ಮುಗಿದ ಅಧ್ಯಾಯ. ಉಳಿದೆರಡು ಪ್ರತಿಮೆಗಳ ಕುರಿತಂತೆ ಮುಂದೆ ಚರ್ಚಿಸಲು ಅವಕಾಶ ನೀಡುವುದಾಗಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News