×
Ad

ಮಲೇರ್ಕೋಟ್ಲಾ ಕುರ್‌ಆನ್‌ಗೆ ಬೆಂಕಿ ಪ್ರಕರಣ: ಒಬ್ಬ ಆರೋಪಿ ವಿಹಿಂಪ ಪಂಜಾಬ್ ಕಾರ್ಯದರ್ಶಿ

Update: 2016-06-30 13:41 IST

ಪಟಿಯಾಲ, ಜೂ.30: ಜೂನ್ 24 ರಂದು ಹಿಂಸೆಗೆ ಕಾರಣವಾದ ಮಲೇರ್ಕೋಟ್ಲಾದಲ್ಲಿ ಕುರ್‌ಆನ್‌ಗೆ ಬೆಂಕಿಯಿಕ್ಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿದ್ದ ಮೂರು ಮಂದಿಯಲ್ಲಿ ಒಬ್ಬ ವಿಶ್ವ ಹಿಂದೂ ಪರಿಷತ್ ಸಂಘಟನೆಯ ಪಂಜಾಬ್ ಘಟಕದ ಕಾರ್ಯದರ್ಶಿಯಾಗಿದ್ದು ಆತನ ವಿರುದ್ಧ ಸುಳ್ಳು ಕೇಸ್ ದಾಖಲಿಸಲಾಗಿದೆಯೆಂದು ಸಂಘಟನೆ ಆರೋಪಿಸಿದೆ.

ಆದರೆ ಬಂಧಿತ ಮೂವರು ಯಾವುದೇ ಸಂಘಟನೆಗಳಿಗೆ ಸೇರಿದವರಲ್ಲವೆಂದು ಹಾಗೂ ಮುಸ್ಲಿಮರ ಹಾಗೂ ಪಾಕಿಸ್ತಾನದ ವಿರುದ್ಧದ ದ್ವೇಷದಿಂದ ಪಂಜಾಬಿನ ಒಂದೇ ಒಂದು ಮುಸ್ಲಿಮ್ ಬಾಹುಳ್ಯದ ಪಟ್ಟಣದಲ್ಲಿ ಹಿಂಸೆ ನಡೆಸುವ ಉದ್ದೇಶ ಹೊಂದಿದ್ದರೆಂದು ಪೊಲೀಸರು ಹೇಳಿದ್ದಾರೆ.

ಬಂಧಿತ ನಂದ್ ಕಿಶೋರ್ ಗೋಲ್ಡಿ ವಿಹಿಂಪ ಪದಾಧಿಕಾರಿಯೆಂದು ಹೇಳಲಾಗಿದೆ. ಆತನ ಪುತ್ರ ಗೌರವ್ ಹಾಗೂ ದಿಲ್ಲಿಯ ಉದ್ಯಮಿ ಮತ್ತು ಈ ಪ್ರಕರಣದ ಪ್ರಮುಖ ರೂವಾರಿ ವಿಜಯ್ ಕುಮಾರ್‌ರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.

ವಿಹಿಂಪದ ರಾಜ್ಯ ಉಪಾಧ್ಯಕ್ಷ ದೇವೀಂದರ್ ಕುಮಾರ್ ಮತ್ತಿತರ ಪದಾಧಿಕಾರಿಗಳು ಹೇಳುವಂತೆ ಗೋಲ್ಡಿ ಯಾವುದೇ ತಪ್ಪು ಮಾಡಿಲ್ಲ. ಪೊಲೀಸರು ಆತನನ್ನು ಪಠಾಣ್ ಕೋಟ್‌ನಲ್ಲಿರುವ ಬೆಗೋವಾಲ ಗ್ರಾಮದ ಆತನ ನಿವಾಸದಿಂದ ಬಂಧಿಸಿದ್ದರೂ ಆತನನ್ನು ಪಟಯಾಲಾ ಸನೌರ್‌ನಲ್ಲಿ ಬಂಧಿಸಿದ್ದಾರೆಂದು ಹೇಳಿರುವುದು ಸುಳ್ಳು. ಆತ ಮಲೇರ್ಕೋಟ್ಲಾಗೆ ಭೇಟಿ ನೀಡಿರಲೇ ಇಲ್ಲವೆಂದು ಕುಮಾರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News