ದ.ಕ.: ಆರ್‌ಟಿಇ ಕಾಯ್ದೆಯಡಿ 1,000 ಸೀಟು ಲಭ್ಯ

Update: 2016-06-30 11:37 GMT

ಮಂಗಳೂರು,ಜೂ.30: ದ.ಕ. ಜಿಲ್ಲೆಯಾದ್ಯಂತ ಶಿಕ್ಷಣ ಹಕ್ಕು ಕಾಯ್ದೆಯಡಿ ಪ್ರಸಕ್ತ ಸಾಲಿನಲ್ಲಿ 1,000 ಸೀಟುಗಳು ಲಭ್ಯವಿದ್ದು, ಈಗಾಗಲೇ ಅರ್ಜಿ ಸಲ್ಲಿಸಿ, ವಿವಿಧ ಕಾರಣಗಳಿಂದ ತಿರಸ್ಕೃತಗೊಂಡ ಅರ್ಜಿದಾರ ವಿದ್ಯಾರ್ಥಿಗಳಿಗೆ ಮರು ಅವಕಾಶಕ್ಕೆ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ನಿರ್ದೇಶನ ನೀಡಿದ್ದಾರೆ.

ದ.ಕ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಶಾಲಾ ಕಾಲೇಜುಗಳಲ್ಲಿ ಡೊನೇಶನ್ ಹಾವಳಿ ಮತ್ತು ಆರ್‌ಟಿಇ ಸೀಟು ಹಂಚಿಕೆ ಕುರಿತಂತೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಈ ನಿರ್ದೇಶನ ನೀಡಿದರು.

ಜಿಲ್ಲೆಯ ವಿವಿಧ ಖಾಸಗಿ ಶಾಲೆಗಳಲ್ಲಿ ಒಟ್ಟು 2,297 ಸೀಟುಗಳನ್ನು ಆರ್‌ಟಿಇ ಕಾಯ್ದೆಯಡಿ ಮೀಸಲಿಡಲಾಗಿತ್ತು. ಈ ಸಂಬಂಧ ಪ್ರಸಕ್ತ ಸಾಲಿನಲ್ಲಿ ಸಲ್ಲಿಕೆಯಾದ ಅರ್ಜಿಗಳಲ್ಲಿ 1,196 ವಿದ್ಯಾರ್ಥಿಗಳು ಕಾಯ್ದೆಯಡಿ ಉಚಿತ ಸೀಟುಗಳನ್ನು ಪಡೆದುಕೊಂಡು ದಾಖಲಾಗಿದ್ದಾರೆ. ಇದೀಗ ಮತ್ತೆ ಸುಮಾರು 1,000 ದಷ್ಟು ಸೀಟುಗಳು ಲಭ್ಯವಿರುವುದರಿಂದ ಈಗಾಗಲೇ ಹಲವಾರು ಕಾರಣಗಳಿಂದ ತಿರಸ್ಕೃತಗೊಂಡ ಅರ್ಜಿದಾರ ವಿದ್ಯಾರ್ಥಿಗಳ ಪೋಷಕರು ತಕ್ಷಣ ಮರು ಅರ್ಜಿ ಸಲ್ಲಿಸಿ ಮಕ್ಕಳನ್ನು ಕಾಯ್ದೆಯಡಿ ಈ ಶಾಲೆಗಳಿಗೆ ದಾಖಲಿಸಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ತಿಳಿಸಿದರು.

ಈ ಸಂಬಂಧ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಸೂಚನೆ ನೀಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ವಾಲ್ಟರ್ ಡಿಮೆಲ್ಲೋರಿಗೆ ನಿರ್ದೇಶನ ನೀಡಿದರು.

‘‘ಆರ್‌ಟಿಇ ಕಾಯ್ದೆಯಡಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಕೆಲವೊಂದು ಶಾಲೆಗಳಲ್ಲಿ ಸಾಕಷ್ಟು ಸೀಟುಗಳ ಲಭ್ಯತೆ ಇಲ್ಲದ ಕಾರಣ ಅರ್ಜಿ ತಿರಸ್ಕೃತಗೊಂಡಿರಬಹುದು. ಇಂತಹ ಸಂದರ್ಭದಲ್ಲಿ ಸಮೀಪದ ಶಾಲೆಯಲ್ಲಿ ಆ ಮಗು ಅರ್ಜಿ ಸಲ್ಲಿಸಿ ತನ್ನ ಹಕ್ಕನ್ನು ಪಡೆಯಬಹುದು. ಸೀಟುಗಳು ಲಭ್ಯವಿದ್ದಾಗ್ಯೂ ತಿರಸ್ಕೃತಗೊಂಡಿರುವ ಅರ್ಜಿಗಳಿಗೆ ಸಂಬಂಧಪಟ್ಟ ಶಾಲೆಗಳು ಗಮನ ಹರಿಸಿ ಸೀಟು ವ್ಯವಸ್ಥೆ ಮಾಡಿಸಬೇಕು’’ ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ತಿಳಿಸಿದರು.

ಶಿಕ್ಷಣ ಇಲಾಖೆಯ ವೆಬ್‌ಸೈಟ್‌ಗೆ ಜಿಲ್ಲಾಧಿಕಾರಿ ಸಲಹೆ

ಶಾಲಾ ಕಾಲೇಜುಗಳಲ್ಲಿ ಡೊನೇಶನ್ ಹಾವಳಿ ಕುರಿತಂತೆ ಸರಕಾರೇತರ ಹಾಗೂ ವಿದ್ಯಾರ್ಥಿ ಸಂಘಟನೆಗಳು ದೂರು ನೀಡಿರುವ ಹಿನ್ನೆಲೆಯಲ್ಲಿ ನಡೆದ ಚರ್ಚೆಯ ವೇಳೆ, ಶಾಲೆಗಳ ಶುಲ್ಕ, ಆರ್‌ಟಿಇಗೆ ಸಂಬಂಧಿಸಿ ಮಾಹಿತಿಗಳು ಲಭ್ಯವಾಗುವ ನಿಟ್ಟಿನಲ್ಲಿ ವೆಬ್‌ಸೈಟ್ ರೂಪಿಸುವಂತೆ ಸಲಹೆ ನೀಡಿದರು.

ಖಾಸಗಿ ಹಾಗೂ ಅನುದಾನಿತ ಶಾಲೆಗಳಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಶಿಕ್ಷಕೇತರರ ಸಂಖ್ಯೆ ಹಾಗೂ ಸೌಕರ್ಯಗಳ ಆಧಾರದಲ್ಲಿ ಶುಲ್ಕವನ್ನು ನಿಗದಿಪಡಿಸಲು ಸರಕಾರದ ಸುತ್ತೋಲೆ ಇದೆ. ಇದೀಗ ಶಿಕ್ಷಕರು, ಶಿಕ್ಷಕೇತರರ ವೇತನವನ್ನು ಹೆಚ್ಚಿಸಿ ಸರಕಾರ ಸುತ್ತೋಲೆಯನ್ನು ನೀಡಿದೆ. ಇದು ಶಿಕ್ಷಣ ಸಂಸ್ಥೆಗಳಿಗೆ ಮತ್ತಷ್ಟು ಹೊರೆಯಾಗಿದೆ ಎಂದು ದಕ್ಷಿಣ ಕನ್ನಡ ಮತ್ತು ಉಡುಪಿ ಆಂಗ್ಲ ಮಾಧ್ಯಮ ಶಾಲಾ ಅಸೋಸಿಯೇಶನ್ ಅಧ್ಯಕ್ಷ, ಮುಹಮ್ಮದ್ ಬ್ಯಾರಿ ಸಭೆಯಲ್ಲಿ ತಿಳಿಸಿದರು.

ಈ ನಡುವೆ ಪ್ರತಿಕ್ರಿಯಿಸಿದ ಎಸ್‌ಎಫ್‌ಐ (ಸ್ಟೂಡೆಂಟ್ ಫೆಡರೇಶನ್ ಆಫ್ ಇಂಡಿಯಾ) ಪ್ರತಿನಿಧಿಗಳು, ಶಾಲೆಗಳು ತಮ್ಮ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳಿಗೆ ನೀಡುವ ವೇತನ ಹಾಗೂ ಇತರ ಮಾಹಿತಿಗಳನ್ನು ಶಿಕ್ಷಣ ಇಲಾಖೆಗೆ ನೀಡಿದ್ದಾರೆಯೇ, ಶಾಲೆಗಳ ಕುರಿತಂತೆ ಸಮರ್ಪಕ ಮಾಹಿತಿ ಶಿಕ್ಷಣ ಇಲಾಖೆಯಲ್ಲಿ ಲಭ್ಯವಿದೆಯೇ ಎಂದು ಪ್ರಶ್ನಿಸಿದರು. ಮಾತ್ರವಲ್ಲದೆ, ಸಭೆಯ ಬಗ್ಗೆ ಸಮರ್ಪಕ ಮಾಹಿತಿ ಲಭ್ಯವಾಗಿಲ್ಲ. ಜಿಲ್ಲೆಯ ಇತರ ವಿದ್ಯಾರ್ಥಿ ಸಂಘಟನೆಗಳಿಗೆ ಮಾಹಿತಿ ನೀಡಲಾಗಿಲ್ಲ ಎಂದು ಆಕ್ಷೇಪಿಸಿದರು.

ಜಿಲ್ಲೆಯಲ್ಲಿ 500ಕ್ಕೂ ಅಧಿಕ ಶಾಲಾ ಕಾಲೇಜುಗಳಿದ್ದರೂ, ಭಾಗವಹಿಸಿರುವುದು ಬೆರಳೆಣಿಕೆಯ ಶಾಲಾ ಪ್ರತಿನಿಧಿಗಳು ಮಾತ್ರ. ಇದು ಸರಿಯಲ್ಲ. ಸಭೆಯ ಬಗ್ಗೆ ಎಲ್ಲಾ ಶಾಲೆಗಳಿಗೂ ಮಾಹಿತಿ ನೀಡಬೇಕು. ಸಭೆಯ ಕಾರ್ಯಸೂಚಿಯನ್ನೂ ಒದಗಿಸಬೇಕು ಎಂದು ಶಿಕ್ಷಣ ಸಂಸ್ಥೆಯ ಪ್ರತಿನಿಧಿಯೊಬ್ಬರು ಆಗ್ರಹಿಸಿದರು. ಇದಕ್ಕೆ ಸಮ್ಮತಿಸಿದ ಜಿಲ್ಲಾಧಿಕಾರಿ ಒಂದು ತಿಂಗಳೊಳಗೆ ಶಾಲೆಗಳಲ್ಲಿನ ಶುಲ್ಕದ ಬಗ್ಗೆ ಸಮಗ್ರ ಮಾಹಿತಿಯನ್ನು ಕ್ರೋಢೀಕರಿಸಿಕೊಂಡು ಸಂಬಂಧಪಟ್ಟ ಶಾಲೆಗಳ ಮುಖ್ಯಸ್ಥರು, ಸರಕಾರೇತರ ಸಂಘಟನೆಗಳು, ವಿದ್ಯಾರ್ಥಿ ಸಂಘಟನೆಗಳಿಗೆ ಮಾಹಿತಿ ನೀಡಿ ಸಭೆ ನಡೆಸುವುದಾಗಿ ತಿಳಿಸಿದರು. ಸಭೆಯಲ್ಲಿ ಪಡಿ ಸಂಸ್ಥೆಯ ರೆನ್ನಿಡಿಸೋಜಾ ಉಪಸ್ಥಿತರಿದ್ದರು.

ಅವಕಾಶ ಬಳಸಿಕೊಳ್ಳಿ: ಜಿಲ್ಲಾಧಿಕಾರಿ

ಆರ್‌ಟಿಇ ಕಾಯ್ದೆಯಡಿ ತಮ್ಮ ಆಯ್ಕೆಯ ಶಾಲೆಯಲ್ಲಿ ಸೀಟು ಲಭ್ಯವಾಗದೆ ತಿರಸ್ಕೃತಗೊಂಡ ಹಿನ್ನೆಲೆಯಲ್ಲಿ ಪೋಷಕರು ಈಗಾಗಲೇ ಮಕ್ಕಳನ್ನು ಬೇರೆ ಶಾಲೆಯಲ್ಲಿ ಶುಲ್ಕ ತೆತ್ತು ದಾಖಲಾತಿ ಮಾಡಿರಬಹುದು. ಅಂತಹ ಸಂದರ್ಭದಲ್ಲಿ ನೀಡಲಾಗಿರುವ ಶುಲ್ಕವನ್ನು ಹಿಂಪಡೆಯಲು ಅವಕಾಶವಿದೆಯೇ ಎಂದು ಸಭೆಯಲ್ಲಿ ವ್ಯಕ್ತವಾದ ಪ್ರಶ್ನೆಗೆ, ಅರ್ಜಿಯಲ್ಲಿ ಆಯ್ಕೆ ಮಾಡಿದ ಶಾಲೆಯಲ್ಲೇ ಶುಲ್ಕ ತೆತ್ತು ದಾಖಲಾತಿಗೊಂಡಿದ್ದಲ್ಲಿ ಅಂತಹ ವಿದ್ಯಾರ್ಥಿಗಳಿಗೆ ಶುಲ್ಕವನ್ನು ಮರು ಪಾವತಿಸಲಾಗುತ್ತದೆ. ಬೇರೆ ಶಾಲೆಗಳಲ್ಲಿ ದಾಖಲಾಗಿದ್ದಲ್ಲಿ ಶುಲ್ಕ ಮರು ಪಾವತಿಸುವ ಅವಕಾಶ ಇಲ್ಲ ಎಂದು ಡಿಡಿಪಿಐ ವಾಲ್ಟರ್ ಡಿಮೆಲ್ಲೋ ಹೇಳಿದರು.

ಈ ಬಗ್ಗೆ ಜಿಲ್ಲಾಧಿಕಾರಿಯನ್ನು ಪತ್ರಕರ್ತರು ಪ್ರಶ್ನಿಸಿದಾಗ, ‘‘ಗೊಂದಲದಿಂದಾಗಿ ಈ ಬಾರಿ ಆರ್‌ಟಿಇ ಕಾಯ್ದೆಯಡಿ ಸೀಟುಗಳು ಭರ್ತಿಯಾಗಿಲ್ಲ. ಇದೀಗ ಅರ್ಜಿ ಸಲ್ಲಿಸಿದ ಬಡ ಮಕ್ಕಳಿಗೆ ಇದೊಂದು ಅವಕಾಶ ಲಭಿಸಿದೆ. ಈಗಾಗಲೇ ಅರ್ಜಿ ಸಲ್ಲಿಸಿ ತಿರಸ್ಕೃತಗೊಂಡಿದ್ದ ಹಿನ್ನೆಲೆಯಲ್ಲಿ ಬೇರೆ ಶಾಲೆಗಳಲ್ಲಿ ದಾಖಲಾತಿ ಪಡೆದಿರುವ ಅರ್ಜಿದಾರರು ಮತ್ತೆ ಉಚಿತ ಸೀಟುಗಳಿಗೆ ಅರ್ಜಿ ಸಲ್ಲಿಸಬಹುದು. ಬೇರೆ ಶಾಲೆಯಲ್ಲಿ ಈಗಾಗಲೇ ಶುಲ್ಕ ತೆತ್ತು ದಾಖಲಾತಿ ಪಡೆದಿರುವ ಅರ್ಜಿ ತಿರಸ್ಕೃತಗೊಂಡ ವಿದ್ಯಾರ್ಥಿಗಳ ಪೋಷಕರಿಗೆ ಈ ವರ್ಷದ ಶುಲ್ಕ ನಷ್ಟವಾದರೂ ಮುಂದೆ ಶಿಕ್ಷಣ ಉಚಿತವಾಗಿರುತ್ತದೆ. ಈ ಬಗ್ಗೆ ಆಲೋಚನೆ ಮಾಡುವುದು ಸೂಕ್ತ ಎಂದು ಪ್ರತಿಕ್ರಿಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News