ಅಡಿಕೆ ಬೆಳೆಗಾರರ ಸಮಸ್ಯೆಗೆ ಮುಕ್ತಿ ಒದಗಿಸಿತು ಯುವಕನ ಆವಿಷ್ಕಾರ

Update: 2016-06-30 12:00 GMT

ಬೆಳ್ತಂಗಡಿ, ಜೂ.30: ಕೃಷಿ ಕಾರ್ಮಿಕರ ಅಭಾವದಿಂದ ರೈತರು ಕೃಷಿಯಿಂದ ವಿಮುಖವಾಗುತ್ತಿರುವುದು ಅಲ್ಲಲ್ಲಿ ಕಂಡು ಬರುತ್ತಿದೆ. ಕಾರ್ಮಿಕರು ಸಿಗುತ್ತಿಲ್ಲಾ ಎಂಬ ಕಾರಣಕ್ಕಾಗಿ ಕೃಷಿ ಜಮೀನನ್ನು ಮಾರಿದವರು ಎಷ್ಟೋ ಮಂದಿ ಇದ್ದಾರೆ. ವಿಜ್ಞಾನ, ತಂತ್ರಜ್ಞಾನ ಬೃಹತ್ತಾಗಿ ಬೆಳದರೂ ಕೃಷಿಗೆ ಅದರಿಂದ ಏನೂ ಲಾಭವಾಗಿಲ್ಲ ಎಂಬ ಕೂಗೂ ಇದೆ. ಆದಾಗ್ಯೂ ಕಳೆದೊಂದು ದಶಕದಿಂದ ನಿಧಾನವಾಗಿಯಾದರೂ ತಂತ್ರಜ್ಞಾನ ಕೃಷಿಗೂ ಕಾಲಿಟ್ಟಿರುವುದು ಕಂಡು ಬರುತ್ತಿದೆ.

ಕೃಷಿಯಲ್ಲಿ ಲಾಭದಾಯಕ ಕೃಷಿಯೆಂದರೆ ಅಡಿಕೆ ಬೆಳೆಯೆಂದು ನಂಬಿರುವ ರೈತರು ಕಾರ್ಮಿಕರ ಅಭಾವದ ಬಿಸಿಯನ್ನು ಎದುರಿಸುತ್ತಿದ್ದಾರೆ. ಈ ಸಮಸ್ಯೆ ಇರುವಂತೆಯೇ ಇದೀಗ ಕೃಷಿ ಯಂತ್ರೋಪಕರಣಗಳು ಒಂದೊಂದಾಗಿ ಮಾರುಕಟ್ಟೆಗೆ ಬಂದಿಳಿಯುತ್ತಿವೆ. ಅಡಿಕೆ ಸುಲಿಯುವ ಯಂತ್ರ ಪ್ರಸಿದ್ಧವಾಗಿದ್ದು ಚಾಲ್ತಿಯಲ್ಲಿದೆ. ಅಡಿಕೆ ಕೃಷಿಯಲ್ಲಿ ಔಷಧ ಸಿಂಪಡಣೆ ಬಹು ಮುಖ್ಯವಾದದ್ದು. ಬಾಕಿ ಕೆಲಸ ಕಾರ್ಯಗಳನ್ನು ಹೇಗಾದರೂ ಸುಧಾರಿಸಿಕೊಂಡು ಹೋಗಬಹುದು. ಈ ಕೆಲಸಕ್ಕೆ ಅಡಿಕೆ ಮರ ಹತ್ತಿ ಸಿಂಪಡಿಸುವವರು ಸೀಮಿತ ಕಾರ್ಮಿಕರು ಮಾತ್ರ ಕಂಡು ಬರುತ್ತಿದ್ದಾರೆ. ಹೊಸಬರು ಮರ ಏರುವುದನ್ನೇ ಕಲಿತಿಲ್ಲ. ಹೀಗಾಗಿ ರೈತರು ಔಷಧ ಸಿಂಪಡನೆಯ ಸಮಯ ಬಂದಾಗ ತಲೆಮೇಲೆ ಕೈಯಿಟ್ಟು ಕುಳಿತುಕೊಳ್ಳುವ ಪರಿಸ್ಥಿತಿ ಇದೆ. ಬೊರ್ಡೋ ದ್ರಾವಣ ಬಿಡದಿದ್ದರೆ ರೋಗ ಗ್ಯಾರಂಟಿ. ಬೆರಳೆಣಿಕೆಯಲ್ಲಿರುವ ಮದ್ದು ಬಿಡುವವರು ಒಂದೊಂದೆ ತೋಟ ಮುಗಿಸಿ ಬಂದಾಗ ಅಡಕೆ ರೋಗ ಹರಡಲಾರಂಭಿಸಿದಾಗ ರೈತ ಇನ್ನಷ್ಟು ಕಂಗಾಲು.

ಈ ಎಲ್ಲಾ ಸ್ಥಿತಿಗತಿಗಳಿಗೆ ಮಂಗಲಹಾಡಬೇಕೆಂದು ನಿರ್ಧರಿಸಿದ ಬಳೆಂಜ ಗ್ರಾಮದ ಕೋಡಿಮನೆಯ ರಾಕೇಶ್ ಹೆಗ್ಡೆ ಎಂಬವರು ಅಡಿಕೆ ಮರಕ್ಕೆ ಔಷಧಿ ಸಿಂಪಡಣೆಗಾಗಿ ಸುಲಭ ಸಾಧನವನ್ನು ಆವಿಷ್ಕರಿಸಿ ಮಾರುಕಟ್ಟೆಗೆ ತಂದಿದ್ದಾರೆ. ಇದರಿಂದ ನೆಲದಲ್ಲೇ ನಿಂತು ಸುಮಾರು 75 ಅಡಿ ಎತ್ತರದ ತನಕ ಔಷಧಿ ಹೊಡೆಯಬಹುದು. 5 ಎಚ್‌ಪಿ ಪೆಟ್ರೋಲ್ ಇಂಜಿನ್‌ಗೆ 300 ಅಡಿ ಉದ್ದದ ಪೈಪ್ ವಯರ್ ಇದ್ದು ಇದರ ಗನ್ 24 ಅಡಿ ಉದ್ದವಿದೆ. ಅದನ್ನು 14 ಅಡಿಗೂ ಇಳಿಸಬಹುದಾಗಿದೆ. ಗನ್ ಅತ್ಯಂತ ಹಗುರ ಲೋಹದಿಂದ ಮಾಡಲಾಗಿದ್ದು ಭಾರದ ಒತ್ತಡವಿಲ್ಲದೆ ದಿನದಲ್ಲಿ 3,000 ಅಡಿಕೆ ಗಿಡಗಳಿಗೆ ಆರಾಮವಾಗಿ ಬೋರ್ಡೋ ದ್ರಾವಣ ಸಿಂಪಡಿಸಬಹುದಾಗಿದೆ. ವಯಸ್ಕರು ಯಾರೂ ಇದನ್ನು ಬಳಕೆ ಮಾಡಬಹುದು.

ಸೊಂಟದ ಬಳಿ ಗನ್ ಇಟ್ಟುಕೊಳ್ಳಲು ಅನುಕೂಲಕರವಾದ ಪೌಚ್‌ಕೂಡ ಒಳಗೊಂಡಿದೆ. ಈ ಯಂತ್ರವನ್ನು ನಿಯಂತ್ರಿಸಲು ಸುಲಭ. ಯಾವುದೇ ಅಪಾಯ ಇಲ್ಲ. ಮರ ಹತ್ತಬೇಕಾಗಿಲ್ಲ. ಮಾಮೂಲು ಕೆಲಸಗಾರರನ್ನು ಕಾಯಬೇಕಾಗಿಲ್ಲ. ಗಾಳಿ ಹಾಕುವವರ ಅಗತ್ಯವಿಲ್ಲ. ಮನೆಯವರೇ ಇದನ್ನು ಬಳಸಬಹುದು. ತರುಣ ರಾಕೇಶ್ ಹೆಗ್ಡೆ ಡಿಪ್ಲೊಮಾ ಅಧ್ಯಯನ ಮಾಡಿದವರಾಗಿದ್ದು ಅಡಿಕೆ ಕೃಷಿಯಲ್ಲೂ ಮುಂದಿದ್ದು ಬೆಳ್ತಂಗಡಿಯಲ್ಲಿ ಇಕೋ ಫೆಶ್ ಎಂಟರ್‌ಪ್ರೈಸಸ್‌ನ ಮೂಲಕ ಹೈಟೆಕ್ ಕೃಷಿ ಯಂತ್ರೋಪಕರಣಗಳು ಮತ್ತು ಪವರ್ ಟೂಲ್ಸ್‌ಗಳ ಸೇವೆ ಮತ್ತು ಮಾರಾಟ ಮಳಿಗೆಯನ್ನು ಹೊಂದಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9964553455 ಮೂಲಕ ಅವರನ್ನು ಸಂಪರ್ಕಿಸಬಹುದಾಗಿದೆ.
 
ರಾಕೇಶ್ ಹೆಗ್ಡೆ ಒಂದು ವರ್ಷದ ಹಿಂದೆ ಆವಿಷ್ಕರಿಸಿದ ಈ ನೂತನ ಯಂತ್ರವು ಅಡಿಕೆ ಬೆಳೆಗಾರರಿಗೆ ವರದಾನವಾಗುವುದರಲ್ಲಿ ಸಂದೇಹವಿಲ್ಲ. ಯಂತ್ರಕ್ಕೆ ರೂ. 46,000 ನಿಗದಿ ಮಾಡಿದ್ದಾರೆ. ಬೆಲೆ ಹೆಚ್ಚೆಂದು ಕಂಡು ಬಂದಲ್ಲಿ ರೈತರು ಗುಂಪಾಗಿ ಸ್ವಸಹಾಯ ಪದ್ಧತಿಯಲ್ಲಿ ಖರೀದಿಸಿ ಉಪಯೋಗಿಸಿಕೊಳ್ಳಬಹುದಾಗಿದೆ. ಬಾಡಿಗೆಗೂ ನೀಡಬಹುದಾಗಿದೆ. ಈ ಯಂತ್ರದ ಉಪಯೋಗದಿಂದ ಮಾಮೂಲಿ ಅಡಿಕೆ ಸಿಂಪಡಣೆ ಮಾಡುವವರ ಮರ್ಜಿಗೆ ಒಳಗಾಗಬೇಕಾದ ಅವಶ್ಯಕತೆ ಇಲ್ಲ ಎನ್ನುವುದು ಸ್ಪಷ್ಟ.

ಮೇಕ್ ಇನ್ ಇಂಡಿಯಾ ಯೋಜನೆಯನ್ನು ಬಳಂಜದ ರಾಕೇಶ್ ಹೆಗ್ಡೆ ಸಾಕಾರಗೊಳಿಸಿದ್ದಾರೆ. ನೂತನ ಅವಿಷ್ಕಾರ ಯುವಕರನ್ನು ಸೆಳೆಯುವುದಲ್ಲಿ ಸಫಲವಾದರೆ ಕೃಷಿ ಉಳಿಯಲು ಸಾಧ್ಯ.

-ಪಿ.ಕೆ.ಚಂದ್ರಶೇಖರ್, ಕೃಷಿಕ, ಬಳೆಂಜ ಗ್ರಾ.ಪಂ.ಸದಸ್ಯ

 ಕೃಷಿಕರ ಕೊರತೆ ಇದೆ ಎಂದು ಯುವಕರು ಕೃಷಿಯಿಂದ ವಿಮುಖವಾಗಬಾರದು ಎಂಬ ಉದ್ದೇಶದಿಂದ ಅತ್ಯಂತ ಪ್ರಮುಖವಾಗಿರುವ ಔಷಧಿ ಸಿಂಪಡಣೆ ಯಂತ್ರವನ್ನು ಒಂದು ವರ್ಷದ ನಿರಂತರ ಪರಿಶ್ರಮದಿಂದ ಆವಿಷ್ಕರಿಸಿದ್ದೇನೆ. ಇನ್ನು ಕೃಷಿಕರು ಔಷಧ ಸಿಂಪಡಣೆಗೆ ತಲೆಬಿಸಿ ಮಾಡಬೇಕಾಗಿಲ್ಲ. ಈಗಾಲೇ 100 ಕ್ಕೂ ಹೆಚ್ಚು ರೈತರು ಇದನ್ನು ಕೊಂಡುಕೊಂಡಿದ್ದಾರೆ.

- ರಾಕೇಶ್ ಹೆಗ್ಡೆ, ನೂತನ ಯಂತ್ರದ ವಿನ್ಯಾಸಕಾರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News