ಎನ್‌ಎಸ್‌ಜಿಯಲ್ಲಿ ಚೀನಾ ಪರ ಬೆಂಬಲ ಕ್ರೋಢೀಕರಣಕ್ಕೆ ವಿಫಲ : ಮುಖ್ಯ ಸಂಧಾನಕಾರನಿಗೆ ತರಾಟೆ
ಹಾಂಕಾಂಗ್, ಜೂ. 30: ಪರಮಾಣು ಪೂರೈಕೆದಾರರ ಗುಂಪಿ (ಎನ್‌ಎಸ್‌ಜಿ)ಗೆ ಭಾರತದ ಪ್ರವೇಶವನ್ನು ತಡೆಯುವ ಚೀನಾದ ನಿಲುವಿಗೆ ಸಿಯೋಲ್‌ನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಜಾಗತಿಕ ಬೆಂಬಲವನ್ನು ಪಡೆಯುವಲ್ಲಿ ವಿಫಲರಾಗಿರುವುದಕ್ಕಾಗಿ ಪ್ರಮುಖ ಸಂಧಾನಕಾರ ಹಾಗೂ ವಿದೇಶ ಸಚಿವಾಲಯದಲ್ಲಿ ಶಸ್ತ್ರಾಸ್ತ್ರ ನಿಯಂತ್ರಣ ವಿಭಾಗದ ಮಹಾನಿರ್ದೇಶಕರಾಗಿರುವ ವಾಂಗ್ ಕುನ್‌ರನ್ನು ಚೀನಾ ನಾಯಕತ್ವ ತರಾಟೆಗೆ ತೆಗೆದುಕೊಂಡಿದೆ.
ಚೀನಾದ ನಿಲುವಿಗೆ ಎನ್‌ಎಸ್‌ಜಿಯ ಕನಿಷ್ಠ ಮೂರನೆ ಒಂದು ಭಾಗದಷ್ಟು ಸದಸ್ಯರಾದರೂ ಬೆಂಬಲ ನೀಡುತ್ತಾರೆ ಎಂಬುದಾಗಿ ವಾಂಗ್ ಕುನ್ ತನ್ನ ನಾಯಕರಿಗೆ ಹೇಳಿದ್ದರು ಎಂದು ಉನ್ನತ ಮಟ್ಟದ ಪಾಶ್ಚಿಮಾತ್ಯ ಮತ್ತು ಚೀನೀ ಮೂಲಗಳು ತಿಳಿಸಿವೆ.
ಆದರೆ, ಸಿಯೋಲ್ ಶೃಂಗ ಸಮ್ಮೇಳನದಲ್ಲಿ ಚೀನಾದ ನಿರೀಕ್ಷೆ ತಲೆಕೆಳಗಾಯಿತು. 44 ದೇಶಗಳು ಭಾರತವನ್ನು ಬೆಂಬಲಿಸಿದವು ಹಾಗೂ ಚೀನಾದ ಬೆನ್ನಿಗೆ ನಿಂತದ್ದು ಕೇವಲ ನಾಲ್ಕು ದೇಶಗಳು ಮಾತ್ರ.
ಈ ಹಿನ್ನೆಲೆಯಲ್ಲಿ, ದ ಹೇಗ್‌ನಲ್ಲಿ ಫಿಲಿಪ್ಪೀನ್ಸ್ ತನ್ನ ವಿರುದ್ಧ ಹೂಡಿರುವ ಭೂವಿವಾದ ಮೊಕದ್ದಮೆಯ ಸ್ಥಿತಿ ಏನಾಗಬಹುದು ಎಂಬುದಾಗಿ ಈಗ ಚೀನಾ ಭಯಪಡುತ್ತಿದೆ. ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ನಡೆಸುತ್ತಿರುವ ಭೂಸ್ವಾಧೀನ ಚಟುವಟಿಕೆಗಳನ್ನು ಫಿಲಿಪ್ಪೀನ್ಸ್ ದ ಹೇಗ್‌ನಲ್ಲಿರುವ ಖಾಯಂ ಪಂಚಾಯಿತಿ ನ್ಯಾಯಾಲಯದಲ್ಲಿ ಪ್ರಶ್ನಿಸಿದೆ.
ಈಗಿನ ಮಟ್ಟಿಗೆ ಹೇಳುವುದಾದರೆ, ಚೀನಾದ ನಿಲುವು ವಿಶ್ವಸಂಸ್ಥೆಯ ಸಮುದ್ರ ಕಾನೂನು ಸನ್ನದು (ಯುಎನ್‌ಸಿಎಲ್‌ಒಎಸ್)ಗೆ ವಿರುದ್ಧವಾಗಿದೆ. ಈ ಸನ್ನದಿಗೆ ಚೀನಾ ಸಹಿ ಹಾಕಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಈಗ ಚೀನಾದ ದೊಡ್ಡ ಹೆದರಿಕೆಯೇನೆಂದರೆ, ತಾನು ಸಿಯೋಲ್‌ನಲ್ಲಿ ಬಳಸಿದ ತಂತ್ರಗಾರಿಕೆಯನ್ನೇ ಭಾರತವೂ ಬಳಸಿ ಹೇಗ್ ನ್ಯಾಯಾಲಯದ ತೀರ್ಪನ್ನು ಬೆಂಬಲಿಸಬಹುದಾಗಿದೆ. ತೀರ್ಪು ಚೀನಾಕ್ಕೆ ವಿರುದ್ಧವಾಗುವ ಸಾಧ್ಯತೆಯಿದೆ.
ಎನ್‌ಎಸ್‌ಜಿ ಸಭೆಯಲ್ಲಿ ತನ್ನ ನಿಲುವಿಗೆ ದೊರೆತ ಜಾಗತಿಕ ಬೆಂಬಲವನ್ನು ಭಾರತ ಸರಿಯಾಗಿ ಬಳಸಿಕೊಂಡು, ಹೇಗ್ ತೀರ್ಪಿನ ಜಾರಿಗೆ ಬೆಂಬಲ ನೀಡಬಹುದಾಗಿದೆ ಎಂದು ಉನ್ನತ ಮಟ್ಟದ ಮೂಲಗಳು ಹೇಳಿವೆ. ಇಂಥ ಪರಿಸ್ಥಿತಿಯೊಂದು ಏರ್ಪಟ್ಟರೆ ಅದು ಚೀನಾವನ್ನು ಮೂಲೆಗುಂಪಾಗಿಸುತ್ತದೆ ಹಾಗೂ ಯುಎನ್‌ಸಿಎಲ್‌ಒಎಸ್‌ದಿಂದ ಚೀನಾದ ನಿರ್ಗಮನಕ್ಕೂ ಕಾರಣವಾಗಬಹುದಾಗಿದೆ.