ಹಣಕ್ಕಾಗಿ ಬೇಡುವುದನ್ನು ನಿಲ್ಲಿಸಿ : ಟ್ರಂಪ್ ಗೆ ವಿದೇಶಿ ನಾಯಕರ ಕರೆ
ವಾಶಿಂಗ್ಟನ್, ಜೂ. 30: ತನ್ನ ಚುನಾವಣಾ ಪ್ರಚಾರ ನಿಧಿಗೆ ದೇಣಿಗೆ ನೀಡುವಂತೆ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕ್ ಪಕ್ಷದ ಸಂಭಾವ್ಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಮಾಡಿರುವ ಮನವಿಯನ್ನು ಬ್ರಿಟಿಶ್ ಪಾರ್ಲಿಮೆಂಟ್‌ನ ಸದಸ್ಯರು ಮತ್ತು ಇತರ ವಿದೇಶಿ ರಾಜಕಾರಣಿಗಳು ತಿರಸ್ಕರಿಸಿದ್ದಾರೆ.
‘‘ಭಿಕ್ಷೆ ಬೇಡುವ ಪತ್ರಗಳನ್ನು ಸಂಸದರಿಗೆ ಕಳುಹಿಸುವುದನ್ನು ದಯವಿಟ್ಟು ನಿಲ್ಲಿಸಿ’’ ಎಂದು ಬ್ರಿಟಿಶ್ ಸಂಸತ್ತಿನ ಸದಸ್ಯ ಸ್ಟುವರ್ಟ್ ಮೆಕ್‌ಡೊನಾಲ್ಡ್ ಟ್ವೀಟ್ ಮಾಡಿದ್ದಾರೆ. ‘‘ಇದು ಕರುಣಾಜನಕವಾಗಿದೆ’’ ಎಂದಿದ್ದಾರೆ.
ಈ ಅಭ್ಯಾಸ ಕಿರಿಕಿರಿಯುಂಟು ಮಾಡುವುದು ಮಾತ್ರವಲ್ಲ, ಅಕ್ರಮ ಕೂಡ ಎಂಬುದಾಗಿ ಎರಡು ನಿಗಾ ಗುಂಪುಗಳು ಹೇಳಿವೆ.
‘‘ಇದು ಡೊನಾಲ್ಡ್ ಟ್ರಂಪ್‌ಗೆ ತಿಳಿದಿರಬೇಕಾಗಿತ್ತು’’ ಎಂದು ಕ್ಯಾಂಪೇನ್ ಲೀಗಲ್ ಸೆಂಟರ್‌ನ ಪೌಲ್ ಎಸ್. ರಯಾನ್ ಹೇಳುತ್ತಾರೆ. ಈ ಸಂಸ್ಥೆಯು ಇನ್ನೊಂದು ಕಾವಲು ಸಂಸ್ಥೆ ‘ಡೆಮಾಕ್ರಸಿ 21’ ಜೊತೆಗೆ ಸೇರಿಕೊಂಡು ಫೆಡರಲ್ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲು ನಿರ್ಧರಿಸಿದೆ.
ಅಮೆರಿಕದ ರಾಜಕೀಯ ಪ್ರಚಾರದಲ್ಲಿ ವಿದೇಶಿ ಹಣವನ್ನು ದೂರವಿರಿಸಬೇಕೆಂದು ಫೆಡರಲ್ ಚುನಾವಣಾ ಕಾನೂನು ಹೇಳುತ್ತದೆ. ನಿರ್ದಿಷ್ಟ ಅವಧಿಯಲ್ಲಿ ಡೆಮಾಕ್ರಟಿಕ್ ಅಭ್ಯರ್ಥಿ ಹಿಲರಿ ಕ್ಲಿಂಟನ್ ಸಂಗ್ರಹಿಸಿದ ದೇಣಿಗೆಯ 10ನೆ ಒಂದು ಭಾಗದಷ್ಟು ಹಣವನ್ನು ಟ್ರಂಪ್ ಸಂಗ್ರಹಿಸಿದ್ದಾರೆ ಎಂದು ಗೊತ್ತಾದ ಬಳಿಕ, ತನ್ನ ನಿಧಿ ಸಂಗ್ರಹ ಅಭಿಯಾನದ ವೇಗವನ್ನು ಟ್ರಂಪ್ ಹೆಚ್ಚಿಸಿದ್ದಾರೆ ಎನ್ನಲಾಗಿದೆ.
ಇದರ ಭಾಗವಾಗಿ ಟ್ರಂಪ್ ಲಕ್ಷಾಂತರ ಅಮೆರಿಕನ್ನರಿಗೆ ದೇಣಿಗೆ ಕೋರಿ ಇಮೇಲ್ ಮನವಿಗಳನ್ನು ಕಳುಹಿಸುತ್ತಿದ್ದಾರೆ. ನಿಧಿ ಸಂಗ್ರಹ ಮನವಿಗಳನ್ನು ಟ್ರಂಪ್ ವಿದೇಶಿ ರಾಜಕಾರಣಿಗಳಿಗೂ ಕಳುಹಿಸಿದ್ದಾರೆ. ಐಸ್‌ಲ್ಯಾಂಡ್, ಆಸ್ಟ್ರೇಲಿಯ, ಬ್ರಿಟನ್ ಮತ್ತು ಸ್ಕಾಟ್‌ಲ್ಯಾಂಡ್‌ನ ರಾಜಕಾರಣಿಗಳಿಗೂ ಇಂಥ ಇಮೇಲ್‌ಗಳನ್ನು ರವಾನಿಸಲಾಗಿದೆ ಎನ್ನಲಾಗಿದೆ.
ಟ್ರಂಪ್‌ರ ಪ್ರಚಾರ ಮನವಿಗಳನ್ನು ತಡೆಹಿಡಿಯುವಂತೆ ಸರ್ ರೋಜರ್ ಗೇಲ್ ಮಂಗಳವಾರ ಬ್ರಿಟಿಶ್ ಹೌಸ್ ಆಫ್ ಕಾಮನ್ಸ್‌ನ ಸ್ಪೀಕರ್‌ಗೆ ಮನವಿ ಮಾಡಿದರು.
‘‘ಡೊನಾಲ್ಡ್ ಟ್ರಂಪ್ ಎಂಬ ವ್ಯಕ್ತಿಯ ಪರವಾಗಿ ಟೀಮ್ ಟ್ರಂಪ್‌ನಿಂದ ಸಂಸತ್ ಸದಸ್ಯರಿಗೆ ಇಮೇಲ್‌ಗಳ ಸುರಿಮಳೆಯಾಗುತ್ತಿದೆ’’ ಎಂದು ಗೇಲ್ ಸ್ಪೀಕರ್ ಜಾನ್ ಬರ್ಕೋ ಬಳಿ ದೂರಿದರು.
‘‘ನಾನು ವಾಕ್ ಸ್ವಾತಂತ್ರದ ಪರವಾಗಿ ಇದ್ದೇನೆ. ಆದರೆ, ಸದನದ ಸದಸ್ಯರು ಈ ತಲೆನೋವಿಗೆ ಯಾಕೆ ಒಳಪಡಬೇಕು’’ ಎಂದು ಅವರು ಪ್ರಶ್ನಿಸಿದರು.