ಬ್ರಿಟನ್‌ನಲ್ಲಿ ‘ಸೇಫ್ಟಿ ಪಿನ್’ ಅಭಿಯಾನ
ಲಂಡನ್, ಜೂ. 30: ಐರೋಪ್ಯ ಒಕ್ಕೂಟದಿಂದ ಹೊರಬರುವ ನಿರ್ಧಾರವನ್ನು (ಬ್ರೆಕ್ಸಿಟ್) ಬ್ರಿಟನ್ ತೆಗೆದುಕೊಂಡ ಬಳಿಕ, ಬ್ರಿಟನ್‌ನಲ್ಲಿ ಮಾತಿನ ಹಾಗೂ ದೈಹಿಕ ನಿಂದನೆಗಳು ಹೆಚ್ಚಾಗಿವೆ. ಇದರಿಂದ ಆಘಾತಗೊಂಡಿರುವ ಓರ್ವ ಬ್ರಿಟನಿಗ ಈ ವಾರ ಟ್ವಿಟರ್‌ನಲ್ಲಿ ‘ಸೇಫ್ಟಿ ಪಿನ್ ಅಭಿಯಾನ’ವನ್ನು ಆರಂಭಿಸಿದ್ದು, ಅದು ಜನಪ್ರಿಯವಾಗಿದೆ.
ವಿದೇಶೀಯರು ಎಂಬುದಾಗಿ ಕೆಲವು ಬ್ರಿಟಿಶರು ಭಾವಿಸುವ ಜನರ ವಿರುದ್ಧ ದ್ವೇಷಾಪರಾಧಗಳು ಕಳೆದ ವಾರ ಹೆಚ್ಚಾಗಿವೆ. ‘‘ಬ್ರೆಕ್ಸಿಟ್ ಮತದಾನದ ಬಳಿಕ ಕಳೆದ ವಾರದ ಗುರುವಾರ ಮತ್ತು ರವಿವಾರಗಳ ನಾಲ್ಕು ದಿನಗಳ ಅವಧಿಯಲ್ಲಿ ಜನಾಂಗೀಯ ನಿಂದನೆಗಳ ಪ್ರಮಾಣ ನಾಲ್ಕು ವಾರಗಳ ಹಿಂದೆ ಇಷ್ಟೇ ಅವಧಿಯಲ್ಲಿ ನಡೆದ ಅಪರಾಧಗಳಿಗಿಂತ ಸುಮಾರು 57 ಶೇಕಡದಷ್ಟು ಹೆಚ್ಚಾಗಿದೆ’’ ಎಂದು ಬ್ರಿಟನ್‌ನ ರಾಷ್ಟ್ರೀಯ ಪೊಲೀಸ್ ಮುಖ್ಯಸ್ಥರ ಮಂಡಳಿ ತಿಳಿಸಿದೆ.
ಈ ಬೆಳವಣಿಗೆಯಿಂದ ಆಘಾತಗೊಂಡ ಬ್ರಿಟಿಶ್ ಮಹಿಳೆಯೊಬ್ಬರು ಇದರ ವಿರುದ್ಧ ಟ್ವಿಟರ್‌ನಲ್ಲಿ ಅಭಿಯಾನವೊಂದನ್ನು ನಡೆಸಲು ತೀರ್ಮಾನಿಸಿದರು.
ಜನಾಂಗವಾದ ಮತ್ತು ವಿದೇಶೀಯರ ಭಯದ ವಿರುದ್ಧ ಏಕತೆ ಸೂಚಿಸುವುದಕ್ಕಾಗಿ ಬ್ಯಾಜ್ ಧರಿಸುವ ಮಾದರಿಯಲ್ಲಿ ಸೇಫ್ಟಿ ಪಿನ್ ಧರಿಸುವಂತೆ ‘ಸೇಫ್ಟಿ ಪಿನ್ ಅಭಿಯಾನ’ ಬ್ರಿಟಿಶರಿಗೆ ಕರೆ ನೀಡುತ್ತದೆ.
‘‘ಬ್ರೆಕ್ಸಿಟ್ ಜನಮತಗಣನೆಯ ಪರಿಣಾಮವೆಂಬಂತೆ ಜನರು ಜನಾಂಗೀಯ ನಿಂದನೆಗೆ ಗುರಿಯಾದಾಗ ಅವರಿಗೆ ಸಹಾಯ ಮಾಡಲು ‘ರೈಡ್ ವಿದ್ ಮೀ’ ಅಭಿಯಾನದ ಮಾದರಿಯ ಕಲ್ಪನೆಯೊಂದು ನನ್ನ ಬಳಿ ಇದೆ. ಆದರೆ, ಅದಕ್ಕೆ ನನಗೆ ನಿಮ್ಮ ಸಹಾಯ ಬೇಕು’’ ಎಂದು ‘ಚೀಯಸ್’ ಟ್ವೀಟ್ ಮಾಡಿದರು.
ಅವರು ಉಲ್ಲೇಖಿಸಿರುವ ‘ರೈಡ್ ವಿದ್ ಮೀ’ ಅಭಿಯಾನವು, ಸಿಡ್ನಿಯ ಕ್ಲಬ್ಬೊಂದರ ಮೇಲೆ ಭಯೋತ್ಪಾದಕ ದಾಳಿ ನಡೆದಾಗ ಆಸ್ಟ್ರೇಲಿಯದಲ್ಲಿ ಆರಂಭವಾಯಿತು. ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಜನರ ಪ್ರತೀಕಾರದ ಭಯದಲ್ಲಿದ್ದ ಮುಸ್ಲಿಮ್ ವಲಸಿಗರನ್ನು ಆಸ್ಟ್ರೇಲಿಯನ್ನರು ತಮ್ಮ ವಾಹನಗಳಲ್ಲಿ ಕರೆದುಕೊಂಡು ಹೋಗುವ ಅಭಿಯಾನ ಅದಾಗಿತ್ತು.
‘‘ಬ್ರಿಟನ್‌ನಲ್ಲಿರುವ ಐರೋಪ್ಯ ಒಕ್ಕೂಟ ಪ್ರಜೆಗಳು ಮತ್ತು ವಲಸಿಗರಿಗೆ ಬೆಂಬಲ ನೀಡಲು ಖಾಲಿ ಸೇಫ್ಟಿ ಪಿನ್ ಧರಿಸಿ’’ ಎಂಬುದಾಗಿ ಅವರು ಮನವಿ ಮಾಡಿದರು.
ಚಿಯಾಸ್ ತನ್ನ ಕಲ್ಪನೆಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡ ಬಳಿಕ ‘ಸೇಫ್ಟಿ ಪಿನ್ಸ್’ ಅಭಿಯಾನಕ್ಕೆ ಚಾನೆ ದೊರೆತಿದೆ. ನೂರಾರು ಮಂದಿ ಅದನ್ನು ರೀಟ್ವೀಟ್ ಮಾಡಿದ್ದಾರೆ ಹಾಗೂ ಟ್ವಿಟರ್‌ನಲ್ಲಿ ಚರ್ಚೆಯಲ್ಲಿ ಭಾಗವಹಿಸಿದ್ದಾರೆ.