×
Ad

ನಾನು ಕಂಡ ರಮಝಾನ್

Update: 2016-06-30 23:11 IST

ಹೃದಯವಂತಿಕೆಯನ್ನು
ತುಂಬುವ ತಿಂಗಳು ರಮಝಾನ್

ಡಾ. ಮೋಹನ್ ಆಳ್ವ,
ಅಧ್ಯಕ್ಷರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಮೂಡುಬಿದಿರೆ.


ಪವಿತ್ರ ರಮಝಾನ್ ತಿಂಗಳಲ್ಲಿ ಉಪವಾಸ ಆಚರಿಸುವುದು, ದೈಹಿಕವಾಗಿ ಮಾತ್ರವಲ್ಲ, ಮಾನಸಿಕವಾಗಿಯೂ ಕೆಡುಕುಗಳಿಂದ ದೂರ ಉಳಿಯುವಂತಹ ಪ್ರಕ್ರಿಯೆಯಾಗಿದೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಹೃದಯಕ್ಕೆ ಹೃದಯವಂತಿಕೆಯನ್ನು ತುಂಬುವ ಪವಿತ್ರ ಕಾರ್ಯ ರಮಝಾನ್ ಉಪವಾಸ. ಉಪವಾಸವೆಂಬುದು ಕೇವಲ ಹೊಟ್ಟೆಯನ್ನು ಖಾಲಿಯಾಗಿರಿಸುವುದಲ್ಲ. ಬದಲಾಗಿ ಕಣ್ಣುಗಳಿಂದ ಕೆಟ್ಟದ್ದನ್ನು ನೋಡದಿರುವುದು. ಕಿವಿಗಳಲ್ಲಿ ಕೆಟ್ಟದನ್ನು ಕೇಳದಿರುವುದು ನಾಲಗೆಯಲ್ಲಿ ಕೆಟ್ಟ ಶಬ್ದಗಳನ್ನು ಪ್ರಯೋಗಿಸಬಾರದು ಎಂಬ ನೆಲೆಯಲ್ಲಿ ಹಿರಿಯರಿಂದ ಆಚರಿಸಿಕೊಂಡು ಬಂದ ಈ ರಮಝಾನ್ ಉಪವಾಸದಲ್ಲಿ ಸ್ಪಷ್ಟವಾದ ಸಂದೇಶವಿದೆ.
ಸಮಾಜದಲ್ಲಿ ಪ್ರತಿನಿತ್ಯ ನಮ್ಮ ಹೃದಯ ಹಾಗೂ ಮನಸ್ಸಿನ ಜೊತೆಗೆ ದೈಹಿಕವಾಗಿಯೂ ಹಲವಾರು ರೀತಿಯ ಕೆಡುಕುಗಳ ದಾಳಿಗೆ ಒಳಗಾಗುತ್ತಿರುತ್ತೇವೆ. ಆಕರ್ಷಣೆಗೊಳಪಡುತ್ತೇವೆ. ಅವುಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಕೆಡುಕಿನಿಂದ ದೂರ ಉಳಿಯುವಂತೆ ನಮ್ಮನ್ನು ಪ್ರೇರೇಪಿಸುವಲ್ಲಿ ಈ ಉಪವಾಸ ಆಚರಣೆ ಜೀವನಪೂರ್ತಿ ನಮ್ಮಲ್ಲಿ ಆತ್ಮಸ್ಥೈರ್ಯವನ್ನು ತುಂಬುವಲ್ಲಿಯೂ ಸಹಕಾರಿ. ಎಲ್ಲಾ ಧರ್ಮ, ಜಾತಿ, ಮತಗಳೂ ತಮ್ಮದೇ ಆದ ಮಹತ್ವವನ್ನು ಹೊಂದಿದ್ದು, ಅವುಗಳು ನಮಗೆ ಹಿರಿಯರಿಂದ ಬಂದಿರುವ ಬಳುವಳಿ. ಅವುಗಳ ಮಹತ್ವವನ್ನು ಅರಿಯುವ ಜೊತೆಗೆ ಇತರರಿಗೂ ಅದರ ಬಗ್ಗೆ ತಿಳಿ ಹೇಳುವ ಕಾರ್ಯ ಆಗಬೇಕು.
ನಮ್ಮ ವಿದ್ಯಾ ಸಂಸ್ಥೆಯಲ್ಲಿ 1,500ರಷ್ಟು ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳಿದ್ದಾರೆ. ಅವರು ಲೌಕಿಕ ಶಿಕ್ಷಣಕ್ಕಾಗಿ ಬಂದಿದ್ದರೂ, ಅವರು ತಮ್ಮ ಧಾರ್ಮಿಕ ಶಿಕ್ಷಣದಿಂದ ದೂರವಾಗಬಾರದು, ವಂಚಿತರಾಗಬಾರದು ಎಂಬ ನೆಲೆಯಲ್ಲಿ ನಮ್ಮ ಸಂಸ್ಥೆಯಲ್ಲಿ ಅವರ ಪ್ರಾರ್ಥನೆಗೆ ಬೇಕಾದ ವ್ಯವಸ್ಥೆಯಿದೆ. ಉಪವಾಸ ಸಂದರ್ಭದಲ್ಲೂ ಇಫ್ತಾರ್ ಹಾಗೂ ಪ್ರಾರ್ಥನೆಗೆ ಅವಕಾಶವಿದೆ. ಸಂಸ್ಥೆಯಲ್ಲಿ ಶಿಕ್ಷಣ ಪಡೆಯುವ ಕ್ರೈಸ್ತ, ಹಿಂದೂ, ಜೈನ ಸೇರಿದಂತೆ ಎಲ್ಲಾ ಧರ್ಮದವರೂ ತಮ್ಮ ಧಾರ್ಮಿಕ ಆಚರಣೆಗಳನ್ನು ಆಚರಿಸಲು ಅನುವು ನೀಡಿದಾಗ ಸೌಹಾರ್ದ ಬೆಳೆಯುತ್ತದೆ. ಇದು ನಮ್ಮ ಆಶಯ. ಇದನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರತಿಪಾದಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆಗೆ ತಮ್ಮ ಧಾರ್ಮಿಕ ನೆಲೆಗಟ್ಟಿನ ಬಗ್ಗೆ ಅರಿವು ಅಗತ್ಯವಾಗಿರುತ್ತದೆ. ಆದರೆ ನಮ್ಮದು ಲೌಕಿಕ ಶಿಕ್ಷಣ ಸಂಸ್ಥೆ. ಇಲ್ಲಿ, ಆಯಾ ಧರ್ಮಕ್ಕೆ ಸಂಬಂಧಿಸಿದ ಧಾರ್ಮಿಕ ಬೋಧನೆ ಅಸಾಧ್ಯವಾಗಿದ್ದರೂ, ಪರೋಕ್ಷವಾಗಿ ಅವರವರ ಧರ್ಮಗಳ ಆಚರಣೆಗೆ ಅವಕಾಶ ಕಲ್ಪಿಸುವ ವ್ಯವಸ್ಥೆ ಮಾಡುವ ಮೂಲಕ ವಿದ್ಯಾರ್ಥಿಗಳಲ್ಲಿ ಅವರವರ ಧರ್ಮದ ಮಹತ್ವವನ್ನು ಅರಿತು ಇತರರಿಗೂ ಅದರ ಮಹತ್ವವನ್ನು ಪರಿಚಯಿಸುವ ಕೆಲಸವನ್ನು ಮಾಡುವುದು ಉತ್ತಮ.
ನಮ್ಮ ತಾಯಿಯನ್ನು ನಾವು ಯಾವ ರೀತಿಯಲ್ಲಿ ಗೌರವಿಸುತ್ತೇವೆಯೋ, ಇನ್ನೊಂದು ಮತದ ತಾಯಿಯನ್ನೂ ಅದೇ ರೀತಿ ಗೌರವಿಸುವುದು ನಮ್ಮ ಕರ್ತವ್ಯ ಹಾಗೂ ಧರ್ಮ. ರಮಝಾನ್ ಉಪವಾಸ ಈ ಸೌಹಾರ್ದ ಜೀವನದ ಸಂದೇಶವನ್ನು ನೀಡುತ್ತದೆ.

ಸೃಷ್ಟಿಕರ್ತನಿಗೆ ಸಂಪೂರ್ಣ ಶರಣಾಗತಿಯ ತಿಂಗಳು ರಮಝಾನ್
ರಾಜೇಂದ್ರ ಪೈ, ಮೂಡುಬಿದಿರೆ.


 ಧರ್ಮದಲ್ಲಿ ಮುಸಲ್ಮಾನನಲ್ಲದೇ ಇದ್ದರೂ ಬಾಲ್ಯದಲ್ಲಿ ಬೇರೆ ಏನು ತಿಳಿಯದಿದ್ದರೂ ರಮಝಾನ್‌ನ ಆಗಮನ ನನಗೆ, ಮನೆಯವರಿಗೆ ತಿಳಿಯುತ್ತಿತ್ತು. ನಾವಿದ್ದ ಮನೆಯ ಸುತ್ತ ಮುಸಲ್ಮಾನರ ಮನೆಗಳಿದ್ದವು. ಉಪವಾಸದ ತಿಂಗಳು ಆರಂಭವಾದ ದಿನದಿಂದ ಕೊನೆಗೆ ಬರುವ ಹಬ್ಬದ ದಿನದವರೆಗೂ ಸೂರ್ಯೋದಯಕ್ಕೆ ಮುನ್ನ ‘ದಾಯಿರಾವಾಲೆ’ ಸುಶ್ರಾವ್ಯವಾಗಿ ಹಾಡುತ್ತಾ ನಮ್ಮ ವಠಾರವನ್ನು ಎಚ್ಚರಿಸುತ್ತಲಿದ್ದರು. ನಮಗೆ ಅರ್ಥವಾಗದಿದ್ದರೂ ಅವರ ಹಾಡುಗಳನ್ನು ಕೇಳುವುದನ್ನು ಕಡ್ಡಾಯಗೊಳಸಿದ್ದೆವು. ನನ್ನ ಬಾಲ್ಯದಲ್ಲಿ ರಮಝಾನ್ ಎಂದರೆ ಇಷ್ಟೇ ಆಗಿತ್ತು. ಆಗ ಇಂದಿನಂತೆ ಇಫ್ತ್ತಾರ್ ಕೂಟ ಸಾರ್ವಜನಿಕವಾಗಿ ಏರ್ಪಾಡಾಗುತ್ತಿರಲಿಲ್ಲ. ಹಾಗಂತ ನಮ್ಮನ್ನು ‘ಅವರು’ ಎಂದೋ ‘ಗೈರಾ’ ಎಂದಾಗಲೀ ಯಾರೂ ಹೇಳುತ್ತಿರಲಿಲ್ಲ ಎಂದು ಅನಿಸುತ್ತದೆ.
ಕಾಲೇಜು ಮುಗಿಸಿ ನಾನು ಫುಲ್‌ಟೈಮ್ ಜವಳಿ ವ್ಯಾಪಾರಿಯಾದ ನಂತರ ನೋಡಿದ ರಮಝಾನ್ ತಿಂಗಳು ಬಾಲ್ಯದ ದಿನಗಳಿಗಿಂತ ಭಿನ್ನವಾಗಿದ್ದವು. ಉಪವಾಸದ ತಿಂಗಳು ಬಂದಂತೆ ಟಿಕ್ಲಿ ಸೀರೆ, ಖಟಾವು, ಮೊಟೆಕ್ಸ್ ಸೀರೆಗಳು ... ಶರ್ಟಿಂಗ್, ವೌಲಾನ ಲುಂಗಿ ... ಹೀಗೆ ಹಬ್ಬಕ್ಕೆ ಬೇಕಾದ ವಿಶೇಷ ಸಂಗ್ರಹವನ್ನು ಸಂಗ್ರಹಿಸುವುದು ನನ್ನ ಕಾಯಕವಾಗಿತ್ತು. ಉಪವಾಸದ ಮೊದಲ ಹದಿನೈದು ದಿನಗಳಲ್ಲಿ ಅಷ್ಟಾಗಿ ವ್ಯಾಪಾರ ಬರದಿದ್ದರೂ ನಂತರದ ಹದಿನೈದು ದಿನಗಳಲ್ಲಿ ಪೂರ್ತಿ ಬಂಪರ್ ಬಿಸಿನೆಸ್. ಅಂದಿನ ದಿನಗಳಲ್ಲಿ ನಮ್ಮ ಊರಿನ ಅಂಗಡಿಗಳ ಸಂಖ್ಯೆ ಈಗಿನ ಅರ್ಧವೂ ಇರಲಿಲ್ಲ. ನಮ್ಮ ಅಂಗಡಿಯಲ್ಲೂ ಹಿಂದುಗಳ ಅಂಗಡಿ ಎಂದು ಯಾರೂ ಹೇಳುತ್ತಿರಲಿಲ್ಲ. ಜವಳಿ ಖರೀದಿಗೆ ಬಂದವರು ಉಪವಾಸ ಮುರಿಯುವ ಗಳಿಗೆ ಬಂದಾಗ ನಮ್ಮ ಅಂಗಡಿಯಲ್ಲಿ ನೀರು ಪಡೆದುಕೊಂಡು ಉಪವಾಸ ಬಿಡುತ್ತಿದ್ದರು. ಈಗ ಇದೆಲ್ಲಾ ನೆನಪು ಮಾತ್ರ. ಈಗ ರಮಝಾನ್ ಹಬ್ಬಕ್ಕೆ ಮೊದಲಿನಂತೆ ವ್ಯಾಪಾರ ಇಲ್ಲ ಎಂದು ಪ್ರತಿಯೊಬ್ಬ ವ್ಯಾಪಾರಿಯೂ ದೂರುವುದು ಸಾಮಾನ್ಯವಾಗಿದೆ.
 ರಮಝಾನ್ ತಿಂಗಳ ಉಪವಾಸವು ಅರ್ಥಪೂರ್ಣವೆಂದು ನನಗೆ ಅನಿಸಲು ಒಂದು ಕಾರಣ ಹೀಗಿದೆ:
ಉಪವಾಸ ಆಚರಿಸುತ್ತಿರುವ ವ್ಯಕ್ತಿಗೆ ಹಸಿವೆಯುಂಟು. ಅವನ ಅಡಿಗೆ ಮನೆಯಲ್ಲಿ ಮೃಷ್ಟಾನ್ನ ಭೋಜನವೂ ಲಭ್ಯ. ಆದರೆ ದೇವರು ಆದೇಶಿಸಿದ್ದಾನೆ ಎನ್ನುವ ಏಕೈಕ ಕಾರಣಕ್ಕೆ ಒಂದು ತಿಂಗಳು ಪೂರ್ತಿ ಸೂರ್ಯೋದಯಕ್ಕೆ ಮೊದಲೇ ಬೆಳಗ್ಗಿನ ಜಾವದಿಂದ ಸೂರ್ಯಾಸ್ತದವರೆಗೆ ಗುಟುಕು ನೀರನ್ನ್ನೂ ಸೇವಿಸದೆ ಇರುವುದು. ಇದು ನನ್ನ ಮಟ್ಟಿಗೆ ಸೃಷ್ಟಿಕರ್ತನಿಗೆ ಸಂಪೂರ್ಣ ಶರಣಾಗತಿ. ದಾಸರು ಇದನ್ನೇ ‘ಇಟ್ಟಾಂಗೇ ಇರುವೆನೋ ಹರಿಯೇ ಎನ್ನ ದೊರೆಯೇ..’ ಎಂದಿದ್ದಾರೆ. ಆಹಾರ ಸೇವಿಸಲು ನಾಲಿಗೆಗೆ ರುಚಿಯಿಲ್ಲದೇ ಉಪವಾಸ ಆಚರಿಸುವುದಲ್ಲ. ಉಣ್ಣಲು ಗತಿಯಿಲ್ಲದ ಬಡತನದ ಉಪವಾಸವಲ್ಲ. ಸಾಲದೆಂಬಂತೆ ...... ತಿಂಗಳು ಉಳ್ಳವರು ಮಾಡುವ ದಾನಧರ್ಮದಿಂದಾಗಿ ಅದೆಷ್ಟೋ ಬಡವರು ಈ ತಿಂಗಳ ನಿರೀಕ್ಷೆಯಲ್ಲಿ ಇರಬಹುದು ಅಲ್ಲವೇ ?
  ರಮಝಾನ್ ತಿಂಗಳಿನ ಮಹತ್ವದ ಬಗ್ಗೆ ಇಷ್ಟೆಲ್ಲ ಅರಿವು ಇದ್ದ ಹಾಗೆಯೇ ಕೆಲವು ವಿಪರ್ಯಾಸಗಳಿಂದ ನನಗೆ ಆಶ್ಚರ್ಯವೂ ಆಗುತ್ತದೆ. ಉಪವಾಸ ಇರುವ ಸತ್ಯ ವಿಶ್ವಾಸಿಗಳು ಸುಳ್ಳು ಹೇಳುವುದು, ವ್ಯವಹಾರದಲ್ಲಿ ಮೋಸ ಮಾಡುವುದು, ಲಂಚಕ್ಕಾಗಿ ಕಾಟ ಕೊಡುವುದು, ಉಪವಾಸ ಇದ್ದು ಹಸಿದ ಪರಿಣಾಮವಾಗಿ ಕಂಡವರ ಮೇಲೆ ರೇಗುವುದು ಹೀಗೆ ವಿವಿಧ ರೂಪದಲ್ಲಿ ನಡೆಸುವ ಆತ್ಮ ವಂಚನೆ ಗಮನಿಸುವಾಗ, ನೀವು ಮಾಡುತ್ತಿರುವುದು ೞಊಅಖಐಘೆಎೞಅಲ್ಲ ... ಅದು ಕೇವಲ ’ಖಅ್ಕ್ಖಅಐಘೆೞಇದು ಧರ್ಮ ಅಲ್ಲ ... ಎಂದು ಚೀರಿ ಹೇಳಬೇಕು ಎಂದು ಅನಿಸುತ್ತದೆ.


ಇನ್ನೊಬ್ಬರ ಹಸಿವು ಅರಿಯುವ ವಿಶಿಷ್ಟ
ಚಿಂತನೆ ರಮಝಾನ್
ಕಾವು ಹೇಮನಾಥ ಶೆಟ್ಟಿ
ಮಾಜಿ ಆಡಳಿತ ಮೊಕ್ತೇಸರರು, ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನ.


ರಮಝಾನ್ ಎನ್ನುವುದು ಮುಸ್ಲಿಂ ಧರ್ಮದ ಪವಿತ್ರ ತಿಂಗಳು. ಈ ತಿಂಗಳ 30 ದಿನಗಳಲ್ಲಿ ಮುಸ್ಲಿಂ ಬಂಧುಗಳು ತಮ್ಮ ದೇಹವನ್ನು ದಂಡಿಸಿ, ಹಗಲು ಹೊತ್ತಿನಲ್ಲಿ ಸಂಪೂರ್ಣ ಆಹಾರ ತ್ಯಜಿಸಿ ಉಪವಾಸ ವ್ರತ ಕೈಗೊಂಡು ದೇವರ ಸ್ಮರಣೆ ಮಾಡುವುದು. ದಾನ ಧರ್ಮಗಳನ್ನು ಮಾಡುತ್ತಾ ಇನ್ನೊಬ್ಬರ ನೋವು, ಸಂಕಷ್ಟ, ದುಖ, ದುಮ್ಮಾನಗಳಿಗೆ ಧ್ವನಿಯಾಗುವುದನ್ನು ಇತರ ಯಾವುದೇ ಧರ್ಮಗಳಲ್ಲಿ ಕಾಣಲು ಸಾಧ್ಯವಿಲ್ಲ. ನಾನು ಕಂಡಂತೆ ಈ ಪವಿತ್ರವಾದ ದಿನಗಳಲ್ಲಿ ಉಪವಾಸ ವ್ರತ ಆಚರಿಸುವವರು ಧರ್ಮದ ಬಗ್ಗೆ ಅಪಾರವಾದ ಭಕ್ತಿಯನ್ನು ಹೊಂದಿರುತ್ತಾರೆ. ಅಲ್ಲದೆ, ಇತರ ಬಡವರಿಗೆ, ಅಶಕ್ತರಿಗೆ ದಾನ ಧರ್ಮ ಮಾಡುವ ಮೂಲಕ ದೇವರ ಕೃಪೆಗೆ ಪಾತ್ರರಾಗುವ ಮಹತ್ವಾಕಾಂಕ್ಷೆಯನ್ನು ಹೊಂದಿರುತ್ತಾರೆ. ಮಹಿಳೆ, ಪುರುಷರು, ಅಬಾಲ ವೃದ್ಧರಾದಿಯಾಗಿ ಎಲ್ಲರೂ ಅನ್ನಾಹಾರ ತ್ಯಜಿಸಿ ದೇವರ ಪ್ರಾರ್ಥನೆ ಮಾಡುತ್ತಿರುವುದು ಸ್ವ ಹಸಿವನ್ನು ಅನುಭವಿಸುತ್ತಾ ಇನ್ನೊಬ್ಬರ ಹಸಿವನ್ನು ಗಮನಿಸುವ ವಿಶಿಷ್ಟ ಚಿಂತನೆಯಾಗಿದೆ ರಮಝಾನ್ ಉಪವಾಸ.

 ರಮಝಾನ್ ಉಪವಾಸ ತೊರೆಯುವ ಇಫ್ತಾರ್ ಕೂಟಗಳು ಅಲ್ಲಲ್ಲಿ ನಡೆಯುತ್ತಿದೆ. ನನ್ನನ್ನು ಹಲವು ಗೆಳೆಯರು ಇಫ್ತಾರ್ ಕೂಟಕ್ಕೆ ಆಹ್ವಾನಿಸುತ್ತಾರೆ. ಅವರೊಂದಿಗೆ ಬೆರೆತು ಇಫ್ತಾರ್‌ನ ಖುಷಿಯನ್ನು ನಾನು ಅನುಭವಿಸಿದ್ದೇನೆ. ನಾನು ಕಂಡಂತೆ ಉಪವಾಸ ಎನ್ನುವುದು ಕೇವಲ ಹಸಿದುಕೊಂಡು ಪ್ರಾರ್ಥನೆ ಮಾಡುವುದಕ್ಕೆ ಸೀಮಿತವಲ್ಲ. ಅದರೊಂದಿಗೆ ಇನ್ನೊಬ್ಬರ ಹಸಿವಿನ ಬೆಲೆಯನ್ನು ತಿಳಿಯುವುದು, ಶ್ರೀಮಂತ ಬಡವ ಎಂಬ ತಾರತಮ್ಯ ತೊರೆದು ಎಲ್ಲರೂ ದೇವರ ಮುಂದೆ ಒಂದೇ ಎಂಬ ಸಮಾನತೆಯನ್ನು ಸಾರುವುದು. ಮನುಷ್ಯ ಜೀವದ ಬೆಲೆಯನ್ನು ತಿಳಿಯುವ ಮಹತ್ತರವಾದ ಕಾರ್ಯವಾಗಿದೆ. ಇದೊಂದು ಸಮಾನತೆಯ ಸಂಕೇತವಾಗಿದೆ. ದೇವರು ಎಲ್ಲರಿಗೂ ಒಂದೇ. ಜಾತಿ, ಧರ್ಮಗಳು ನಾವು ಮಾಡಿಕೊಂಡಿರುವ ವ್ಯವಸ್ಥೆಗಳು, ಒಳ್ಳೆಯವರು, ಕೆಟ್ಟವರು ಎಲ್ಲರಲ್ಲೂ ಇದ್ದಾರೆ. ನಾವು ಮಾಡಿರುವ ಒಳ್ಳೆಯ ಕೆಲಸಗಳು ಎಂದೂ ನಮ್ಮನ್ನು ಕಾಪಾಡುತ್ತದೆ ಎಂಬ ದೃಢ ನಂಬಿಕೆಯಿರುವ ನಾನು ಕಳೆದ 20 ವರ್ಷಗಳಿಂದ ಸ್ವತಃ ಇಫ್ತ್ತಾರ್ ಕೂಟ ನಡೆಸಿಕೊಂಡು ಬರುತ್ತಿದ್ದೇನೆ. ಈ ಕೂಟದಲ್ಲಿ ಹಿಂದೂ, ಮುಸ್ಲಿಂ ಸೇರಿದಂತೆ ಹಲವಾರು ಮಂದಿ ಜಾತಿ ಧರ್ಮಗಳ ಮಿತ್ರರು ಭೇದವಿಲ್ಲದೆ ಭಾಗವಹಿಸುತ್ತಾರೆ. ಈ ಕೆಲಸವನ್ನು ಪವಿತ್ರ ಮತ್ತು ಶ್ರೇಷ್ಠ ಎಂದು ನಂಬಿದವನು ನಾನು. ಇದೊಂದು ಪುಣ್ಯದ ಕೆಲಸವಾಗಿದ್ದು ಇದರ ಬಗ್ಗೆ ನನಗೆ ಅಪಾರವಾದ ಗೌರವ ಮತ್ತು ಶ್ರದ್ಧೆಯಿದೆ.
ನಾನೋರ್ವ ಹಿಂದುವಾಗಿದ್ದರೂ ಮುಸ್ಲಿಂ, ಕ್ರಿಶ್ಚಿಯನ್ ಮತ್ತು ಇತರ ಎಲ್ಲ ಧರ್ಮದವರೊಂದಿಗೆ ಗೌರವ ಮತ್ತು ಭಕ್ತಿ ಹೊಂದಿದವನಾಗಿದ್ದೇನೆ. ಆದ ಕಾರಣ ರಮಝಾನ್ ನನಗೆ ಮುಸ್ಲಿಮರಂತೆ ಪರಮ ಪವಿತ್ರ ಮತ್ತು ಭಕ್ತಿಯ ತಿಂಗಳಾಗಿದೆ. ಪವಿತ್ರ ರಮಝಾನ್ ಜಗತ್ತಿಗೆ ಶಾಂತಿ ಮತ್ತು ನೆಮ್ಮದಿಯನ್ನು ನೀಡಲಿ.

ದೇಹ, ಮನಸ್ಸುಗಳ ಆರೋಗ್ಯಕ್ಕೆ ಉತ್ತಮ ಪಥ್ಯವಾಗಿದೆ ರಮಝಾನ್ ಉಪವಾಸ 

ಡಾ. ಕೃಷ್ಣ ಶಾಸ್ತ್ರಿ,ಪುತ್ತೂರು


ರಮಝಾನ್ ಮುಸ್ಲಿಮರ ಪವಿತ್ರವಾದ ತಿಂಗಳಾಗಿದೆ. ದೈಹಿಕವಾಗಿ, ಮಾನಸಿಕವಾಗಿ, ಸಾಮಾಜಿಕವಾಗಿ ಮತ್ತು ಧಾರ್ಮಿಕವಾಗಿ ಸಂಬಂಧವನ್ನು ವೃದ್ಧಿಸುತ್ತದೆ. ಉಪವಾಸವು ಕೇವಲ ಧಾರ್ಮಿಕವಾಗಿ ಮಾತ್ರವಲ್ಲದೆ ಆರೋಗ್ಯಕ್ಕೂ ಔಷಧವಾಗಿದೆ. ಉಪವಾಸವು ಮನುಷ್ಯನಲ್ಲಿರುವ ಶಕ್ತಿಯನ್ನು ಹೆಚ್ಚಿಸುತ್ತದೆ. ಆಹಾರ ಅನಗತ್ಯವಾಗಿ ದೇಹದಲ್ಲಿ ಉಳಿಯದೆ ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ. ವಿಶೇಷವೆಂದರೆ ಹೊಟ್ಟೆಗೆ, ಕರುಳಿಗೆ ಸಂಬಂಧಪಟ್ಟ ಕಾಯಿಲೆಗಳು ಒಂದು ತಿಂಗಳು ಉಪವಾಸ ಆಚರಿಸುವವನಿಗೆ ಬರುವುದು ವಿರಳ. ಅದೇ ರೀತಿ ದೇಹದಲ್ಲಿರುವ ಅನಗತ್ಯವಾದ ಕೊಬ್ಬು ನಿವಾರಣೆಗೊಳ್ಳುತ್ತದೆ. ನರ ಸಂಬಂಧಿ, ರಕ್ತ ಸಂಬಂಧಿ ಕಾಯಿಲೆಗಳು ಅಪರೂಪವಾಗಿ ಕಾಣುತ್ತದೆ. ಉಪವಾಸ ಹಿಡಿಯುವವನ ಹೃದಯವು ಶಾಂತಗೊಂಡು, ಹೃದಯ ಸಂಬಂಧಿ ಕಾಯಿಲೆಗಳು ಇಲ್ಲವಾಗುತ್ತದೆ. ಉಪವಾಸಿಗನು ಖಾಲಿ ಹೊಟ್ಟೆಯಲ್ಲಿದ್ದರೂ ಗ್ಯಾಸ್ಟಿಕ್ ಸಮಸ್ಯೆ ಇಲ್ಲದಿರುವುದು ವಿಶೇಷ.
ರಮಝಾನ್ ಎಂಬುದು ಬಡವನ ಮತ್ತು ಊಟಕ್ಕಿಲ್ಲದವನ ಕಷ್ಟವನ್ನು ಉಪವಾಸದ ಮೂಲಕ ತಿಳಿಸಿ ಕೊಡುತ್ತದೆ. ಹಸಿವು ತಡೆದುಕೊಳ್ಳುವ ಶಕ್ತಿಯನ್ನು ಉಪವಾಸಿಗನಲ್ಲಿ ಉತ್ಪಾದಿಸುತ್ತದೆ. ಈ ಒಂದು ತಿಂಗಳು ಮುಸ್ಲಿಮರನ್ನು ಹೆಚ್ಚು ಆರಾಧನೆ ಮತ್ತು ದೇವರ ಕಡೆಗೆ ಕರೆದೊಯ್ಯುತ್ತದೆ. ಸುಖ ನಿದ್ರೆ ಮತ್ತು ನೆಮ್ಮದಿ ಉಪವಾಸಿಗನ ಪ್ರಮುಖ ಲಕ್ಷಣ. ಕೇವಲ ಮುಸಲ್ಮಾನರಲ್ಲಿ ಮಾತ್ರವಲ್ಲ ಹಿಂದೂ, ಕ್ರೈಸ್ತ ಇತರ ಧರ್ಮದವರಲ್ಲೂ ಬಾಂಧವ್ಯವನ್ನು ಹೆಚ್ಚಿಸುತ್ತದೆ.
ರಮಝಾನ್ ಸಮಯದಲ್ಲಿ ನನ್ನ ಕ್ಲಿನಿಕ್‌ಗೆ ಮುಸ್ಲಿಮರು ಬರುವುದು ಕಡಿಮೆ. ಏಕೆಂದರೆ ಅವರಿಗೆ ಉಪವಾಸ ಸಮಯದಲ್ಲಿ ರೋಗ ಬರುವುದು ಅಪರೂಪ. ಇನ್ನು ರೋಗ ಬಂತೆಂದರೂ ಪಥ್ಯ ಹೇಳುವ ಆವಶ್ಯಕತೆಯೇ ಇಲ್ಲ. ಏಕೆಂದರೆ ಉಪವಾಸವೇ ಅವರಿಗಿರುವ ಪಥ್ಯ. ಆದ್ದರಿಂದ ಮದ್ದು ಕೊಡುವುದು ಬಹಳ ಸುಲಭ. ಉಪವಾಸಿಗನು ಶಾರೀರಿಕವಾಗಿ, ಮಾನಸಿಕವಾಗಿಯೂ ಉಲ್ಲಾಸದಿಂದ ಕೂಡಿರುತ್ತಾರೆ. ಅದೇ ರೀತಿ ಮಧುಮೇಹ ಮತ್ತು ದೀರ್ಘ ಕಾಯಿಲೆ ಇರುವವರು ರಮಝಾನ್‌ನಲ್ಲಿ ಸಮತೋಲನಗೊಳ್ಳುವುದು ಅಸಾಮಾನ್ಯ ವಿಷಯ.
ರಮಝಾನ್ ತಿಂಗಳಲ್ಲಿ ಮುಸಲ್ಮಾನರು ದಾನ ಧರ್ಮಗಳು ಜಾಸ್ತಿ ಮಾಡುತ್ತಾರೆ. ಬಡವರಿಗೆ ಸಂಪತ್ತನ್ನು ಹಂಚುವುದು ಪುಣ್ಯದ ಕೆಲಸವಾಗಿದೆ. ಇದೊಂದು ದೇವರು ಮೆಚ್ಚುವಂತಹ ಹಬ್ಬ. ಹಿಂದೂ ಧರ್ಮದಲ್ಲಿ ಶಿವರಾತ್ರಿ, ಷಷ್ಠಿ ಇತ್ಯಾದಿ ದಿವಸಗಳಲ್ಲಿ ಒಂದೊಂದು ದಿನ ಉಪವಾಸ ಆಚರಿಸಿದರೆ ಮುಸಲ್ಮಾನರು ರಮಝಾನ್ ಒಂದು ತಿಂಗಳು ತಪ್ಪದೆ ಉಪವಾಸ ಆಚರಿಸುವುದು ಬಹುದೊಡ್ಡ ತ್ಯಾಗದ ಆರಾಧನೆಯಾಗಿದೆ.
ಎಲ್ಲಾ ಮುಸ್ಲಿಮ್ ಬಾಂಧವರಿಗೆ ರಮಝಾನ್ ಹಬ್ಬದ ಶುಭಾಶಯಗಳು.


ರಮಝಾನ್ ಉಪವಾಸ
ಕೆಡುಕುಗಳ ವಿರುದ್ಧದ ಹೋರಾಟ
ನವೀನ್,ಆರೂಡಿ, ದೊಡ್ಡಬಳ್ಳಾಪುರ.


ಎಲ್ಲಾ ಮತ ಧರ್ಮಗಳಲ್ಲಿ ಧಾರ್ಮಿಕ ಆಚರಣೆಗಳು ಪೀಳಿಗೆಯಿಂದ ಪೀಳಿಗೆಗೆ ಎರವಲಾಗಿ ಬಂದಿವೆ. ಆದರೆ, ಪವಿತ್ರ ರಮಝಾನ್ ಮಾಸದಲ್ಲಿ ಮುಸ್ಲಿಮರು ಆಚರಣೆ ಮಾಡುವ ಕಠಿಣ ಉಪವಾಸ ವ್ರತವು ನಮ್ಮ ಆಧುನಿಕ ಜೀವನ ಶೈಲಿಯಲ್ಲಿ ದೇಹ ಹಾಗೂ ಮನಸ್ಸಿನ ಆರೋಗ್ಯವನ್ನು ಕಾಪಾಡುವಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸುತ್ತದೆ.
ನಮ್ಮಲ್ಲಿರುವ ಕೆಡುಕುಗಳ ವಿರುದ್ಧ ಹೋರಾಟ ಮಾಡಲು ಉಪವಾಸ ವ್ರತವು ಅತ್ಯಂತ ಪ್ರಭಾವಶಾಲಿಯಾದ ಮಾರ್ಗ. ಆದುದರಿಂದ, ಉಪವಾಸದ ಆಚರಣೆಯನ್ನು ಧರ್ಮ ಭೇದ ಮರೆತು ಪ್ರತಿಯೊಬ್ಬರೂ ಆಚರಿಸುವಂತಾಗಬೇಕು. ಉಪವಾಸ ಎನ್ನುವುದು ಕೇವಲ ಹಸಿವಿಗೆ ಸಂಬಂಧಿಸಿದ್ದಲ್ಲ, ನಮ್ಮ ಮನಸ್ಸನ್ನೂ ನಿಯಂತ್ರಿಸುತ್ತದೆ.
ನಮ್ಮ ಸ್ನೇಹಿತರು ರಮಝಾನ್ ಮಾಸದಲ್ಲಿ ಆಚರಿಸುವ ಉಪವಾಸವನ್ನು ನೋಡಿದ್ದೇನೆ. ತಮ್ಮ ದಿನನಿತ್ಯದ ಜೀವನಶೈಲಿಯಿಂದ ವಿಭಿನ್ನವಾಗಿರುತ್ತಾರೆ. ರಮಝಾನ್ ಮಾಸ ಬಂದರೆ ಸಾಕು ಅವರ ಜೀವನವೇ ಬದಲಾಗಿರುತ್ತದೆ. ಪ್ರತಿನಿತ್ಯ ಪ್ರಾರ್ಥನೆಯಲ್ಲಿ ತೊಡಗಿರುತ್ತಾರೆ. ಅನಗತ್ಯ ವಿಚಾರಗಳ ಬಗ್ಗೆ ಚರ್ಚೆ ಮಾಡಲು ಬಯಸುವುದಿಲ್ಲ. ಸಮಾಜದಲ್ಲಿನ ಕೆಡುಕುಗಳನ್ನು ತಮ್ಮ ಬಳಿ ಸುಳಿಯಲು ಅವರು ಬಿಡುವುದಿಲ್ಲ. ದುಶ್ಚಟಗಳನ್ನು ಸಂಪೂರ್ಣವಾಗಿ ತ್ಯಜಿಸುತ್ತಾರೆ. ಮಾತಿನ ಧಾಟಿಯಲ್ಲಿ ಬದಲಾವಣೆಯಾಗಿರುತ್ತದೆ.
ಪ್ರತಿಯೊಬ್ಬರೂ ಒಬ್ಬರಿಗೊಬ್ಬರು ಗೌರವ ಸೂಚಿಸುವುದು, ಬಡವರಿಗೆ, ದೀನ ದಲಿತರಿಗೆ ಅಗತ್ಯವಾದ ನೆರವು ನೀಡುವುದು ಸರ್ವೇ ಸಾಮಾನ್ಯವಾಗಿ ಗೋಚರಿಸುತ್ತದೆ. ಮಾರುಕಟ್ಟೆಗಳಲ್ಲಿ ವ್ಯಾಪಾರ ವಹಿವಾಟುಗಳು ಏಕಾಏಕಿ ಹೆಚ್ಚಾಗುತ್ತದೆ. ರಮಝಾನ್ ಮಾಸದ ಮೂವತ್ತು ದಿನಗಳು ಒಂಥರ ಆಕರ್ಷಣೀಯವಾಗಿರುತ್ತದೆ.

ರಮಝಾನ್ ಎಂದರೆ ಸಮಾನತೆ
ಪ್ರದೀಪ್ ಕುಮಾರ್ ರೈ ಪಾಂಬಾರು,
ಅಧ್ಯಕ್ಷರು, ಸೌಹಾರ್ದ ಸಮಿತಿ ಕೊಳ್ತಿಗೆ, ಪುತ್ತೂರು


ನಾನು ಕಂಡಂತೆ ಇನ್ನೊಬ್ಬರ ಹಸಿವು ಅರಿಯುವ ವಿಶಿಷ್ಟ ಚಿಂತನೆ ರಮಝಾನ್. ಮುಸ್ಲಿಂ ಧರ್ಮದ ಪವಿತ್ರ ತಿಂಗಳಾದ ರಮಝಾನ್‌ನಲ್ಲಿ 30 ದಿನಗಳ ಕಾಲ ಮುಸ್ಲಿಂ ಬಂಧುಗಳು ದೇಹವನ್ನು ದಂಡಿಸಿ, ಹಗಲು ಹೊತ್ತಿನಲ್ಲಿ ಸಂಪೂರ್ಣ ಆಹಾರ ತ್ಯಜಿಸಿ ಉಪವಾಸ ವ್ರತವನ್ನು ಕೈಗೊಂಡು ದೇವರ ಸ್ಮರಣೆ ಮಾಡುವುದು. ದಾನ ಧರ್ಮ ಮಾಡುತ್ತಾ ಇನ್ನೊಬ್ಬರ ದುಃಖ, ದುಮ್ಮಾನ, ಸಂಕಷ್ಟಗಳಲ್ಲಿ ಭಾಗಿಯಾಗಿ ಅದನ್ನು ಪರಿಹರಿಸುವಲ್ಲಿ ಧ್ವನಿಯಾಗುವುದು.
ರಮಝಾನ್ ಎಂಬುದು ಕೇವಲ ಹಸಿದುಕೊಂಡು ಪ್ರಾರ್ಥನೆ ಮಾಡುವುದಕ್ಕೆ ಸೀಮಿತವಲ್ಲ. ಅದರೊಂದಿಗೆ ಇನ್ನೊಬ್ಬರ ಹಸಿವಿನ ಬೆಲೆಯನ್ನು ತಿಳಿಯುವುದು, ಶ್ರೀಮಂತ, ಬಡವ ಎಂಬ ತಾರತಮ್ಯ ತೊರೆದು ಎಲ್ಲರೂ ದೇವರ ಮುಂದೆ ಒಂದೇ ಎಂಬ ಸಮಾನತೆ ಸಾರುವುದು. ಮನುಷ್ಯ ಜೀವದ ಬೆಲೆಯನ್ನು ತಿಳಿಯುವ ಮಹತ್ತರವಾದ ಕಾರ್ಯವಾಗಿದೆ. ಇದೊಂದು ಸಮಾನತೆಯ ಸಂಕೇತವಾಗಿದೆ. ದೇವರು ಎಲ್ಲರಿಗೂ ಒಂದೇ. ಜಾತಿ ಧರ್ಮಗಳು ನಾವು ಮಾಡಿಕೊಂಡಿರುವ ವ್ಯವಸ್ಥೆಗಳು. ಒಳ್ಳೆಯವರು ಕೆಟ್ಟವರು ಎಲ್ಲಾ ಧರ್ಮಗಳಲ್ಲಿಯೂ ಇದ್ದಾರೆ. ನಾವು ಮಾಡಿರುವ ಒಳ್ಳೆಯ ಕೆಲಸಗಳು ಎಂದೂ ನಮ್ಮನ್ನು ಕಾಪಾಡುತ್ತವೆ.
ಸೌಹಾರ್ದ ಸಮಿತಿ ಕೊಳ್ತಿಗೆ ಇದರ ವತಿಯಿಂದ ಪ್ರತಿವರ್ಷ ರಮಝಾನ್‌ನಲ್ಲಿ ಸೌಹಾರ್ದ ಇಫ್ತಾರ್ ಕೂಟ ನಡೆಸಲಾಗುತ್ತಿದೆ. ಈ ಕೂಟದಲ್ಲಿ ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ಸೇರಿದಂತೆ ಹಲವಾರು ಮಂದಿ ಜಾತಿ ಭೇದಗಳಿಲ್ಲದೆ ಭಾಗವಹಿಸುತ್ತಾರೆ. ಈ ಕೆಲಸವನ್ನು ಪವಿತ್ರ ಮತ್ತು ಶ್ರೇಷ್ಠ ಎಂದು ನಂಬಿರುವ ನಮಗೆ ಇದೊಂದು ಪುಣ್ಯದ ಕಾರ್ಯವಾಗಿದ್ದು ಇದರ ಬಗ್ಗೆ ನಮಗೆ ಅಪಾರವಾದ ಗೌರವ ಮತ್ತು ಶ್ರದ್ಧೆಯಿದೆ. ಸರ್ವರಲ್ಲಿ ಶಾಂತಿ, ನೆಮ್ಮದಿ, ಸೌಹಾರ್ದತೆಯನ್ನು ಕಾಪಾಡುವುದು ಸೌಹಾರ್ದ ಇಫ್ತಾರ್ ಕೂಟದ ಮುಖ್ಯ ಉದ್ದೇಶವಾಗಿದೆ.
ಇತ್ತೀಚೆಗೆ ದಿಲ್ಲಿಯಲ್ಲಿ ಆರೆಸ್ಸೆಸ್ ನಾಯಕರೂ ಇಫ್ತಾರ್ ಕೂಟವನ್ನು ನಡೆಸಿರುವುದು ಸಮಾಜಕ್ಕೆ ಉತ್ತಮ ಮಾದರಿ ಯಾಗಿದೆ. ಯಾವುದೇ ಭೇದ ಭಾವವಿಲ್ಲದೆ ಇಂತಹ ಒಳ್ಳೆಯ ಕೆಲಸ ಮಾಡುವ ಮನೋಭಾವ ಹೊಂದಿರುವುದಕ್ಕೆ ಅವರನ್ನು ಅಭಿನಂದಿಸುತ್ತೇನೆ. ಪವಿತ್ರ ರಮಝಾನ್ ಜಗತ್ತಿಗೆ ಶಾಂತಿ ಮತ್ತು ನೆಮ್ಮದಿಯನ್ನು ನೀಡಲಿ.


ರಮಝಾನ್ ಏಕತೆಯ ಸಂಕೇತ
ರೆ. ವಿಜಯ ಹಾರ್ವಿನ್ , ಧರ್ಮಗುರುಗಳು, 

ಸುದಾನ ದೇವಾಲಯ ಪುತ್ತೂರು ಮತ್ತು ಸಂಚಾಲಕರು, ಸುದಾನ ಶಾಲೆ

ಮುಸ್ಲಿಮರು ಬಹಳ ಪ್ರಾಶಸ್ತ್ಯ ಕೊಡುವಂತಹ ಒಂದು ಹಬ್ಬವಾಗಿದೆ ರಮಝಾನ್. ಇವತ್ತಿನ ಆಧುನಿಕ ಮತ್ತು ತಂತ್ರಜ್ಞಾನ ಯುಗದಲ್ಲಿ ಧಾರ್ಮಿಕ ಆಚರಣೆ ಅಥವಾ ಸಂಪ್ರದಾಯವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿರುವುದು ಬಹುದೊಡ್ಡ ವಿಷಯ. ಅದಲ್ಲದೆ, ಒಂದು ತಿಂಗಳ ಉಪವಾಸವನ್ನು ಮಕ್ಕಳು, ಯುವಕರು, ವಯಸ್ಸಿಗರು ಎಂಬ ಭೇದವಿಲ್ಲದೆ, ಎಲ್ಲರೂ ಒಂದೇ ರೀತಿಯಲ್ಲಿ ಆಚರಿಸುವುದು ಗಂಭೀರತೆಯನ್ನು ಸೂಚಿಸುತ್ತದೆ. ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಕಲಿಯುವ ಮಕ್ಕಳು ಕೂಡಾ ಪಾವಿತ್ರತೆ ಮತ್ತು ಭಕ್ತಿ ಭಾವದ ಮೂಲಕ ರಮಝಾನಿನ ಶಿಸ್ತನ್ನು ಸೂಚಿಸುತ್ತಾರೆ. ಸಣ್ಣಂದಿನಲ್ಲೇ ಅವರಿಗೆ ಉಪವಾಸ ಆಚರಣೆಯ ಮಹತ್ವವನ್ನು ಹೆತ್ತವರು ತಿಳಿಸಿರುವುದು ಕಂಡುಬರುತ್ತದೆ.
ಧಾರ್ಮಿಕವಾಗಿ ತುಂಬಾ ಮಹತ್ವದೊಂದಿಗೆ ಆರೋಗ್ಯ ದೃಷ್ಟಿಯಿಂದ ಉಪವಾಸ ಪ್ರಮುಖ ಪಾತ್ರ ವಹಿಸುತ್ತದೆ. ಬೆಳಗ್ಗೆ ಬೇಗ ಎದ್ದು ಪ್ರಾರ್ಥನೆ ಮಾಡಿದ ನಂತರ ಸಂಜೆಯವರೆಗೆ ಉಪವಾಸ ತೊರೆಯುವುದಕ್ಕೆ ಕಾಯುವುದು ಒಬ್ಬ ಮನುಷ್ಯನ ತಾಳ್ಮೆಯನ್ನು ತೋರಿಸುತ್ತದೆ. ಸೂರ್ಯ ಉದಯಿಸುವುದಕ್ಕಿಂತ ಮೊದಲೇ ಬೆಳಗ್ಗಿನ ಜಾವದಿಂದ ಹಿಡಿದು ಸೂರ್ಯ ಮುಳುಗುವವರೆಗೆ ಯಾವುದೇ ರೀತಿಯ ಆಹಾರವನ್ನು ಸೇವಿಸದೆ ಹಸಿವನ್ನು �

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News