ಮಾರಕ ಪಿಡುಗುಗಳನ್ನು ಕೂಡಲೇ ನಿಯಂತ್ರಿಸಬೇಕಾಗಿದೆ
ಮಾನ್ಯರೆ,
ಮಳೆಗಾಲ ಕಾಲಿಡುತ್ತಿದ್ದಂತೆ ರಾಜ್ಯಾದ್ಯಂತ ಡೆಂಗ್, ಮಲೇರಿಯಾ, ಇಲಿಜ್ವರಗಳಂತಹ ಪಿಡುಗುಗಳ ಹಾವಳಿ ತೀವ್ರವಾಗಿದೆ. ಕಳೆದೊಂದು ತಿಂಗಳಲ್ಲೇ ಡೆಂಗ್ ಜ್ವರವೊಂದಕ್ಕೇ ಕರಾವಳಿಯ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಸುಮಾರು 12 ಜನರು ಜೀವ ತೆತ್ತಿರುವುದು ಮಾಧ್ಯಮಗಳಿಂದ ವರದಿಯಾಗಿದೆ. ಆರೋಗ್ಯ ಇಲಾಖೆ ಸಾಕಷ್ಟು ನಿಯಂತ್ರಣ ಕ್ರಮಗಳನ್ನು ಕೈಗೊಂಡಿದೆಯೆಂದು ಹೇಳುತ್ತಿದ್ದರೂ ಪರಿಸ್ಥಿತಿ ಇನ್ನೂ ನಿಯಂತ್ರಣಕ್ಕೆ ಬಾರದಿರುವುದು ಉಭಯ ಜಿಲ್ಲೆಗಳ ಜನರ ನಿದ್ದೆಗೆಡಿಸಿದೆ.
ಪ್ರತೀ ವರ್ಷ ಮಳೆಗಾಲದ ಸಮಯದಲ್ಲಿ ಇಂತಹ ಮಾರಕ ರೋಗಗಳ ಹಾವಳಿ ಸಾಮಾನ್ಯವಾದರೂ ಈ ವರ್ಷ ಆರಂಭದಲ್ಲೇ ಮಾರಕವಾಗತೊಡಗಿದೆ ಈ ಪಿಡುಗು. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಬಂಟ್ವಾಳ, ಪುತ್ತೂರು ತಾಲೂಕುಗಳಲ್ಲಿ ಹೆಚ್ಚಿಗೆ ಕಂಡುಬಂದಿದೆಯಲ್ಲದೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲೂ ಇದರ ಹಾವಳಿ ತೀವ್ರವಾಗಿದೆ.
ಈ ಪ್ರದೇಶಗಳಲ್ಲಿ ಮಾರಕ ರೋಗಗಳ ಹಾವಳಿ ಹೆಚ್ಚಿಗೆ ಕಂಡು ಬರಲು ಕಾರಣ ಅಡಿಕೆ ತೋಟಗಳಲ್ಲಿ ಕೆಳಕ್ಕೆ ಬಿದ್ದ ಗರಿಯ ಹಾಳೆಗಳಲ್ಲಿ, ರಬ್ಬರ್ ತೋಟಗಳಲ್ಲಿ ರಬ್ಬರ್ ಸಂಗ್ರಹಿಸಲು ಇಡುವ ಗೆರಟೆಗಳಲ್ಲಿ ನೀರು ನಿಲ್ಲುವುದರ ಮೂಲಕ ಸೊಳ್ಳೆಗಳು ಉತ್ಪತ್ತಿಯಾಗಿ ಮಾರಕ ರೋಗಗಳು ಹರಡಿರುವುದಾಗಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಕರಾವಳಿ ಜಿಲ್ಲೆಗಳಲ್ಲಿ ಡೆಂಗ್ ಹಾವಳಿಗೆ ಹೆಚ್ಚು ಬಲಿಯಾದದ್ದು ಹೊರಜಿಲ್ಲೆಗಳಿಂದ ಬಂದ ಕಾರ್ಮಿಕರಾಗಿದ್ದಾರೆ.
ಇಂತಹ ಸಮಸ್ಯೆಗಳ ಬಗ್ಗೆ ಸಂಬಂಧಿತ ಅಧಿಕಾರಿಗಳು ಮಳೆಗಾಲಕ್ಕೆ ಮೊದಲೇ ಸ್ಥಳೀಯ ಜನತೆಯಲ್ಲಿ ಜಾಗೃತಿ ಮೂಡಿಸಿ, ಮುಂಜಾಗ್ರತೆ ಕ್ರಮ ತೆಗೆದುಕೊಂಡಿದ್ದರೆ ಈ ಹಾವಳಿ ಈಗಿನಷ್ಟು ತೀವ್ರತೆ ಪಡೆಯುತ್ತಿರಲಿಲ್ಲ. ಇನ್ನಾದರೂ ಸಂಬಂಧಿತ ಇಲಾಖೆ ಸಮರೋಪಾದಿಯಲ್ಲಿ ಪಿಡುಗಿನ ನಿಯಂತ್ರಣ ಮಾಡುವಲ್ಲಿ ಶ್ರಮಿಸಬೇಕಾಗಿದೆ. ಡೆಂಗ್‌ನಂತಹ ಅಪಾಯಕಾರಿ ಪಿಡುಗಿಗೆ ತುತ್ತಾಗಿರುವ ರೋಗಿಗಳನ್ನು ಆರಂಭದ ಹಂತದಲ್ಲೇ ಗುರುತಿಸಿ ಅವರಿಗೆ ತುರ್ತಾಗಿ ಚಿಕಿತ್ಸೆ ಒದಗಿಸುವ ಮೂಲಕ ಇನ್ನಷ್ಟು ಜೀವಹಾನಿ ತಪ್ಪಿಸಬೇಕಾಗಿದೆ.