×
Ad

ಸಲಿಂಗಿಗಳು ತೃತೀಯಲಿಂಗಿಗಳಲ್ಲ: ಸುಪ್ರೀಂ ಸ್ಪಷ್ಟನೆ

Update: 2016-07-01 00:04 IST

  ಹೊಸದಿಲ್ಲಿ,ಜೂ.30: ಲಿಂಗಾಂತರಿಗಳು ಅಥವಾ ಹಿಜಡಾಗಳ ಬಗ್ಗೆ 2014ರಲ್ಲಿ ತಾನು ನೀಡಿದ್ದ ಆದೇಶದಲ್ಲಿ ಬದಲಾವಣೆಗಳನ್ನು ಮಾಡಲು ನಿರಾಕರಿಸಿರುವ ಸುಪ್ರೀಂಕೋರ್ಟ್, ಸಲಿಂಗಕಾಮಿಗಳು ಹಾಗೂ ಉಭಯಲಿಂಗ ಕಾಮಿಗಳನ್ನು ತೃತೀಯ ಲಿಂಗಿಗಳೆಂದು ಪರಿಗಣಿಸಲು ಸಾಧ್ಯವಿಲ್ಲವೆಂದು ಸ್ಪಷ್ಟಪಡಿಸಿದೆ.

ನ್ಯಾಯಮೂರ್ತಿಗಳಾದ ಎ.ಕೆ.ಸಿಕ್ರಿ ಹಾಗೂ ಎನ್.ವಿ.ರಾಮಣ್ಣ ಅವರನ್ನೊಳಗೊಂಡ ನ್ಯಾಯಪೀಠವು ಸಲಿಂಗಿಗಳು ಅಥವಾ ಉಭಯಲಿಂಗಿಗಳು ನಪುಂಸಕರಲ್ಲವೆಂದು ತಾನು 2014ರ ಎಪ್ರಿಲ್ 15ರಂದು ನೀಡಿರುವ ತೀರ್ಪಿನಿಂದ ಸ್ಪಷ್ಟವಾಗಿದೆಯೆಂದು ನ್ಯಾಯಮೂರ್ತಿಗಳಾದ ಎ.ಕೆ.ಸಿಕ್ರಿ ಹಾಗೂ ಎನ್.ವಿ.ರಾಮಣ್ಣ ಅವರನ್ನೊಳಗೊಂಡ ನ್ಯಾಯಪೀಠ ತಿಳಿಸಿದೆ.
 ಸಲಿಂಗಕಾಮಿಗಳು ಹಾಗೂ ಉಭಯಲಿಂಗಿಗಳನ್ನು ಹಿಜಡಾಗಳಲ್ಲವೆಂಬುದನ್ನು ಸುಪ್ರೀಂಕೋರ್ಟ್ ಈ ಹಿಂದೆ ನೀಡಿದ ತೀರ್ಪಿನಲ್ಲಿ ಸ್ಪಷ್ಟವಾಗಿ ತಿಳಿಸಿಲ್ಲವೆಂದು ವಾದಿಸಿ ಕೇಂದ್ರ ಸರಕಾರದ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಮಣೀಂದರ್ ಸಿಂಗ್ ಸುಪ್ರೀಂಕೋರ್ಟ್ ಮೆಟ್ಟಲೇರಿದ್ದರು. ಈ ಬಗ್ಗೆ ನ್ಯಾಯಾಲಯದಿಂದ ಸ್ಪಷ್ಟೀಕರಣವನ್ನು ಅವರು ಕೋರಿದ್ದರು.
ಕೆಲವು ಲಿಂಗಾಂತರಿ ಕಾರ್ಯಕರ್ತರ ಪರವಾಗಿ ನ್ಯಾಯಾಲಯದಲ್ಲಿ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಆನಂದ್ ಗ್ರೋವರ್ ಅವರು,ಸುಪ್ರೀಂಕೋರ್ಟ್‌ನ ಆದೇಶವನ್ನು ಕೇಂದ್ರ ಸರಕಾರವು ಕಳೆದ ಎರಡು ವರ್ಷಗಳಿಂದ ಅನುಷ್ಠಾನಗೊಳಿಸಿಲ್ಲವೆಂದು ದೂರಿದರು.
ಆದರೆ ತನ್ನ ಹಿಂದಿನ ತೀರ್ಪಿಗೆ ಯಾವುದೇ ಸ್ಪಷ್ಟೀಕರಣ ನೀಡುವ ಆಗತ್ಯವಿಲ್ಲದ ಕಾರಣ ಅರ್ಜಿಯನ್ನು ವಜಾಗೊಳಿಸುವುದಾಗಿ ನ್ಯಾಯಪೀಠವು, ಅಟಾರ್ನಿ ಜನರಲ್‌ಗೆ ತಿಳಿಸಿತು. 2014ರ ಎಪ್ರಿಲ್ 15ರಂದು ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿ, ಲಿಂಗಾಂತರಿಗಳು ಅಥವಾ ಹಿಜಡಾಗಳನ್ನು ತೃತೀಯ ಲಿಂಗಿಗಳು ಎಂದು ಘೋಷಿಸಿ ಅವರಿಗೆ ಕಾನೂನಿನ ಮಾನ್ಯತೆಯನ್ನು ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News