ಇಡೀ ದೇಶ ನಡುಗಿಸುವ ಯಾವ ಸತ್ಯ ಮುಚ್ಚಿಟ್ಟಿದ್ದಾರೆ ಬಿಜೆಪಿ ನಾಯಕ ಏಕ್‌ನಾಥ್ ಖಡ್ಸೆ
ಆರೋಪಗಳ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿರುವ ಮಹಾರಾಷ್ಟ್ರದ ಮಾಜಿ ಸಚಿವ ಹಾಗೂ ಬಿಜೆಪಿ ದಿಗ್ಗಜ ಏಕನಾಥ್ ಖಡ್ಸೆ ತಿಂಗಳ ಬಳಿಕ ನೀಡಿರುವ ಹೇಳಿಕೆ ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ತಾನು ಬಚ್ಚಿಟ್ಟಿರುವ ಸತ್ಯವನ್ನು ಹೊರ ಹಾಕಿದಲ್ಲಿ ಇಡೀ ದೇಶವೇ ಅಲುಗಾಡಲಿದೆ ಎಂದು ತಮ್ಮ ಜಾಲಗಾಂವ್ ಕ್ಷೇತ್ರದಲ್ಲಿ ಬೆಂಬಲಿಗರನ್ನುದ್ದೇಶಿಸಿ ಮಾತನಾಡುತ್ತಾ ಖಡ್ಸೆ ಹೇಳಿದ್ದಾರೆ.
ನನ್ನ ವಿರುದ್ಧ ಆರೋಪಗಳ ಹಿನ್ನೆಲೆಯಲ್ಲಿ ನಾನು ರಾಜೀನಾಮೆ ನೀಡಿದ್ದೇನಾದರೂ, ನಾನು ಬಾಯಿ ತೆರೆದರೆ ಇಡೀ ದೇಶವೇ ಅಲುಗಾಡಲಿದೆ ಎಂದು ಅವರು ಹೇಳಿದ್ದಾರೆ. ಅವರು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ವಿರುದ್ಧ ಈ ಸಂದರ್ಭದಲ್ಲಿ ಕಿಡಿ ಕಾರಿದ್ದಾರೆ. ರಾಜ್ಯದಲ್ಲಿ ಶಿವಸೇನೆ ಜೊತೆಗೆ ಮಾತುಕತೆ ಮೂಲಕ ಬಿಜೆಪಿ ಕೇಸರಿ ಮೈತ್ರಿಕೂಟ ರಚಿಸಲು ತಾನೇ ಕಾರಣ ಎಂದು ಖಡ್ಸೆ ಹೇಳಿದ್ದಾರೆ. ಬಿಜೆಪಿ ಮತ್ತು ಶಿವಸೇನೆ ನಡುವೆ ಮೈತ್ರಿಯನ್ನು ವಿಧಾನಸಭೆ ಚುನಾವಣೆಗೆ ಮೊದಲೇ ಮಾಡಿರದೆ ಇರುತ್ತಿದ್ದಲ್ಲಿ ಮಹಾರಾಷ್ಟ್ರದಲ್ಲಿ ಶಿವಸೇನೆಯ ಮುಖ್ಯಮಂತ್ರಿ ಇರುತ್ತಿದ್ದರು. ನಾನು ಮೈತ್ರಿಯಲ್ಲಿ ಮುಖ್ಯ ಪಾತ್ರ ವಹಿಸಿದ ಕಾರಣದಿಂದಲೇ ಈಗ ಬಿಜೆಪಿಯ ಮುಖ್ಯಮಂತ್ರಿ ಇದ್ದಾರೆ ಎಂದು ಖಡ್ಸೆ ಹೇಳಿದ್ದಾರೆ.
ಕಂದಾಯ ಸೇರಿದಂತೆ ಹಲವು ಪ್ರಮುಖ ಖಾತೆಗಳನ್ನು ಸಚಿವ ಸಂಪುಟದಲ್ಲಿ ಹೊಂದಿದ್ದ ಖಡ್ಸೆ ಜೂನ್ ಆರಂಭದಲ್ಲಿ ರಾಜೀನಾಮೆ ನೀಡಿದ್ದರು. ಅವರ ವಿರುದ್ಧ ಭೂ ಅಕ್ರಮದ ಆರೋಪಗಳು ಬಂದಿವೆ ಮತ್ತು ಭೂಗತ ದೊರೆ ದಾವೂದ್ ಇಬ್ರಾಹೀಂ ಪಾಕಿಸ್ತಾನದಿಂದ ಮಾಡಿದ ಕರೆಗಳು ಅವರ ಮೊಬೈಲಿಗೆ ಬಂದಿರುವ ಆರೋಪವೂ ಇವೆ. ಫಡ್ನವೀಸ್ ಸರಕಾರವು ಈ ಆರೋಪಗಳ ಮೇಲೆ ನ್ಯಾಯಾಂಗ ತನಿಖೆಯನ್ನು ಆದೇಶಿಸಿದೆ. ಖಡ್ಸೆ ತಮ್ಮ ವಿರುದ್ಧದ ಆರೋಪಗಳನ್ನು ನಿರಾಕರಿಸಿದ್ದಾರೆ. ಬಿಜೆಪಿಯ ಹಿಂದುಳಿದ ವರ್ಗದ ಮುಖ ಎಂದೇ ತಿಳಿಯಲಾಗಿರುವ ಖಡ್ಸೆಯ ಮಾತುಗಳಿಗೆ ಕಾಂಗ್ರೆಸ್ ಮತ್ತು ಎನ್‌ಸಿಪಿಯಿಂದ ತೀವ್ರ ಪ್ರತಿಕ್ರಿಯೆಗಳು ಬಂದಿವೆ. ಖಡ್ಸೆಗೆ ದಾವೂದ್ ಇಬ್ರಾಹೀಂ ಜೊತೆಗೆ ಸಂಬಂಧವಿದೆ ಎನ್ನುವ ಆರೋಪಗಳು ಬಹಳ ಹಿಂದಿನಿಂದಲೇ ಕೇಳಿ ಬಂದಿವೆ. ಈಗ ಅವರೇ ದೇಶವನ್ನೇ ನಡುಗಿಸಬಲ್ಲ ಮಾಹಿತಿ ತಮ್ಮ ಬಳಿ ಇದೆ ಎಂದು ಹೇಳಿದ್ದಾರೆ. ಅವರಿಗೆ ದಾವೂದ್ ಬಗ್ಗೆ ಅಥವಾ ತಮ್ಮ ಜೊತೆಗೆ ಸಂಬಂಧವಿರುವ ಇತರ ಭಯೋತ್ಪಾದನಾ ಸಂಘಟನೆಗಳ ಬಗ್ಗೆ ಮಾಹಿತಿಯಿದೆ. ಎಟಿಎಸ್ ತಕ್ಷಣವೇ ಅವರನ್ನು ವಶಕ್ಕೆ ತೆಗೆದುಕೊಂಡು ಮಾಹಿತಿ ಪಡೆದುಕೊಳ್ಳಬೇಕು ಎಂದು ಕಾಂಗ್ರೆಸ್ ವಕ್ತಾರ ಅಲ್ ನಾಸೆರ್ ಝಕಾರಿಯ ಹೇಳಿದ್ದಾರೆ. ಖಡ್ಸೆ ಸೂಕ್ತ ಸಾಕ್ಷ್ಯವಿಲ್ಲದೆ ಮಾತನಾಡುವುದಿಲ್ಲ ಎಂದು ಯಾವಾಗಲೂ ಹೇಳುತ್ತಿದ್ದರು. ಇಂದು ಅವರ ಬಳಿ ಮಾಹಿತಿ ಇದೆ ಎಂದು ಹೇಳುತ್ತಿದ್ದಾರಾದರೂ ಅವರ ಬಳಿ ಯಾವುದೋ ಗಂಭೀರ ಸಾಕ್ಷ್ಯಗಳಿವೆ ಎನ್ನುವುದನ್ನು ನಂಬದೆ ಇರಲು ಸಾಧ್ಯವಿಲ್ಲ. ದಾವೂದ್ ಜೊತೆಗೆ ಸಂಭಾಷಣೆ ಅಥವಾ ಇನ್ಯಾವುದೋ ರೀತಿಯ ಸಂಪರ್ಕದಿಂದ ಅವರ ಬಳಿ ಮಾಹಿತಿ ಇದೆ ಎಂದು ಎನ್‌ಸಿಪಿ ವಕ್ತಾರ ನವಾಬ್ ಮಲಿಕ್ ಹೇಳಿದ್ದಾರೆ.