ಕೇವಲ 5ನೆ ತರಗತಿಯವರೆಗೆ ಅನುತ್ತೀರ್ಣವಿಲ್ಲ
ಹೊಸದಿಲ್ಲಿ, ಜೂ.30: ಐದನೆ ತರಗತಿಯ ವರೆಗೆ ಅನುತ್ತೀರ್ಣತೆಯಿಲ್ಲ. ಜ್ಞಾನದ ಹೊಸ ವಲಯಗಳ ಗುರುತಿಸುವಿಕೆಗಾಗಿ ಶಿಕ್ಷಣ ಆಯೋಗ, ಜಿಡಿಪಿಯ ಕನಿಷ್ಠ ಶೇ.6ರಷ್ಟು ಬಂಡವಾಳ ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚಳ ಹಾಗೂ ಅಗ್ರ ವಿದೇಶಿ ವಿಶ್ವವಿದ್ಯಾನಿಲಯಗಳು ಭಾರತಕ್ಕೆ ಬರುವಂತೆ ಪ್ರೋತ್ಸಾಹ ನೀಡುವುದು. ಇವು ಮಾನವ ಸಂಪನ್ಮೂಲ ಸಚಿವಾಲಯವು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಕ್ಕಾಗಿ ಮುಂದಿಟ್ಟಿರುವ ಹೊಸ ಶಿಕ್ಷಣ ನೀತಿಯ(ಎನ್‌ಇಪಿ) ಕರಡಿನ ಮುಖ್ಯಾಂಶಗಳಲ್ಲಿ ಸೇರಿವೆ.
‘ಕರಡು ರಾಷ್ಟ್ರೀಯ ಶಿಕ್ಷಣ ನೀತಿ-2016ರ ‘ಕೆಲವು ಮಾಹಿತಿಗಳು’- ಸಚಿವಾಲಯದಿಂದ ಅಭಿಪ್ರಾಯ ಸಂಗ್ರಹಕ್ಕಾಗಿ ವೆಬ್‌ಸೈಟ್‌ಗೆ ಹಾಕಲ್ಪಟ್ಟಿದೆ. ಅದು, ‘ಆರ್ಥಿಕವಾಗಿ ದುರ್ಬಲ ವರ್ಗಗಳ ವಿಶಾಲ ರಾಷ್ಟ್ರೀಯ ಹಿತಾಸಕ್ತಿ’ ಯ ದೃಷ್ಟಿಯಿಂದ ಸರಕಾರಿ-ಅನುದಾನಿತ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳಿಗೆ(ಮತೀಯ ಹಾಗೂ ಭಾಷಾ) ಆರ್‌ಟಿಇ ಕಾಯ್ದೆಯ ಪರಿಚ್ಛೇದ 12(1) (ಸಿ)ಯನ್ನು ವಿಸ್ತರಿಸುವ ಕುರಿತು ಪರಿಶೀಲಿಸುತ್ತಿದೆಯೆಂದು ತಿಳಿಸಲಾಗಿದೆ.
ಫಲಿತಾಂಶ ತಡೆ ಹಿಡಿಯದ ಈಗಿನ ನೀತಿಯು ವಿದ್ಯಾರ್ಥಿಗಳ ಸಾಧನೆಯ ಮೇಲೆ ಗಂಭೀರ ದುಷ್ಪರಿಣಾಮ ಬೀರುತ್ತಿರುವುದರಿಂದ ಈಗಿನ ಪ್ರಸ್ತಾಪಕ್ಕೆ ತಿದ್ದುಪಡಿ ತರಲಾಗುವುದು. ಅನುತ್ತೀರ್ಣತೆ ಇಲ್ಲವೆಂಬ ನೀತಿಯನ್ನು 5ನೆ ತರಗತಿಯ ವರೆಗೆ ಸೀಮಿತಗೊಳಿಸಲಾಗುವುದು. ಉನ್ನತ ಪ್ರಾಥಮಿಕ ಹಂತದಲ್ಲಿ ಫಲಿತಾಂಶ ತಡೆಯ (ಅನುತ್ತೀರ್ಣಗೊಳಿಸುವುದು) ವ್ಯವಸ್ಥೆಯನ್ನು ಪುನರಾರಂಭಿಸಲಾಗುವುದೆಂದು ಕರಡು ನೀತಿ ಹೇಳಿದೆ.
ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು, ತಾವು ಬಯಸಿದರೆ ಶಾಲೆಗಳಲ್ಲಿ 5ನೆ ತರಗತಿಯ ವರೆಗಿನ ಶಿಕ್ಷಣವನ್ನು ಮಾತೃಭಾಷೆ, ಸ್ಥಳೀಯ ಅಥವಾ ಪ್ರಾದೇಶಿಕ ಭಾಷೆಯ ಮಾಧ್ಯಮದಲ್ಲಿ ನೀಡಬಹುದು. ಆದಾಗ್ಯೂ, ಶಿಕ್ಷಣ ಮಾಧ್ಯಮ ಮಾತೃಭಾಷೆ, ಸ್ಥಳೀಯ ಅಥವಾ ಪ್ರಾದೇಶಿಕ ಭಾಷೆಯು ಪ್ರಾಥಮಿಕ ಮಟ್ಟದ ವರೆಗೆ ಇದ್ದರೂ, ಎರಡನೆ ಭಾಷೆಯು ಇಂಗ್ಲಿಷ್ ಇರಲಿದೆ. ಉನ್ನತ ಪ್ರಾಥಮಿಕ ಹಾಗೂ ಪ್ರೌಢ ಶಾಲಾಮಟ್ಟದಲ್ಲಿ ಮೂರನೆಯ ಭಾಷೆಯ ಆಯ್ಕೆಯು, ಸಾಂವಿಧಾನಿಕ ಪ್ರಸ್ತಾವಗಳನ್ನು ಅನುಸರಿಸಿ, ಆಯಾ ರಾಜ್ಯಗಳು ಹಾಗೂ ಸ್ಥಳೀಯ ಪ್ರಾಧಿಕಾರಗಳಿಗೆ ಬಿಟ್ಟುದಾಗಿರುತ್ತದೆಂದು ಅದು ತಿಳಿಸಿದೆ.