ನಾಸಾ ಸ್ಪರ್ಧೆ: ಭಾರತೀಯ ತಂಡಕ್ಕೆ ‘ತಂಡ ಮನೋಭಾವ’ ಪ್ರಶಸ್ತಿ
ಹ್ಯೂಸ್ಟನ್, ಜು. 1: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ‘ನಾಸಾ’ ಏರ್ಪಡಿಸಿದ, ದೂರ ನಿಯಂತ್ರಣದ ವಾಹನಗಳ ತಯಾರಿ ಮತ್ತು ವಿನ್ಯಾಸದ ಜಾಗತಿಕ ಸ್ಪರ್ಧೆಯಲ್ಲಿ ಭಾರತದ 13 ಇಂಜಿನಿಯರಿಂಗ್ ವಿದ್ಯಾರ್ಥಿಗಳ ತಂಡವೊಂದು ‘ತಂಡ ಮನೋಭಾವ’ ಪ್ರಶಸ್ತಿ ಗೆದ್ದಿದೆ. ತಂಡದಲ್ಲಿ ನಾಲ್ವರು ಹುಡುಗಿಯರಿದ್ದಾರೆ.
ಹ್ಯೂಸ್ಟನ್‌ನ ನ್ಯೂಟ್ರಲ್ ಬಾಯನ್ಸಿ ಲ್ಯಾಬ್‌ನಲ್ಲಿರುವ ನಾಸಾ ಜಾನ್ಸನ್ ಬಾಹ್ಯಾಕಾಶ ಕೇಂದ್ರದಲ್ಲಿ ನಡೆದ ಮೇಟ್ ಇಂಟರ್‌ನ್ಯಾಶನಲ್ ಆರ್‌ಒವಿ ಸ್ಪರ್ಧೆಯಲ್ಲಿ ಮುಂಬೈಯ ಮುಕೇಶ್ ಪಟೇಲ್ ಸ್ಕೂಲ್ ಆಫ್ ಟೆಕ್ನಾಲಜಿ ಮ್ಯಾನೇಜ್‌ಮೆಂಟ್‌ನ ‘ಸ್ಕ್ರೂಡ್ರೈವರ್ಸ್’ ಎಂಬ ಹೆಸರಿನ ತಂಡ ‘ಅಲೋಹ ಟೀಮ್ ಸ್ಪಿರಿಟ್’ ಪ್ರಶಸ್ತಿ ಗೆದ್ದಿದೆ.
ಉತ್ಸಾಹ ಹಾಗೂ ತಂಡದೊಳಗೆ ಉತ್ತಮ ಸಂವಹನ ಹೊಂದಿರುವ ಮತ್ತು ಬೇರೆ ತಂಡಗಳಿಗೆ ಸಹಾಯ ಮಾಡುವ ಹಾಗೂ ಅವುಗಳೊಂದಿಗೆ ಅತ್ಯುತ್ತಮ ಸಂವಹನ ಹೊಂದುವ ಮತ್ತು ಅತ್ಯುತ್ತಮ ತಂಡ ಜರ್ಸಿ (ಬಟ್ಟೆ) ಹೊಂದಿರುವ ತಂಡಕ್ಕೆ ಈ ಪ್ರಶಸ್ತಿ ನೀಡಲಾಗುತ್ತದೆ.
ಇಡೀ ತಂಡವು ಸೀರೆ ಮತ್ತು ಕುರ್ತಾಗಳನ್ನೊಳಗೊಂಡ ಭಾರತೀಯ ದಿರಿಸನ್ನು ಧರಿಸಿತ್ತು.
‘‘ಇದುವರೆಗೆ ನಮ್ಮ ರಾಷ್ಟ್ರೀಯ ದಿರಿಸನ್ನು ನೋಡದ ವಿವಿಧ ದೇಶಗಳ ಜನರು ಅಲ್ಲಿ ಸೇರಿದ್ದು, ನಮ್ಮ ಉಡುಗೆ ಅಮೋಘ ಯಶಸ್ಸು ಕಂಡಿತು’’ ಎಂದು ತಂಡದ ರೋಮಾಂಚಿತ ಸದಸ್ಯರು ಪಿಟಿಐಗೆ ಹೇಳಿದರು.
ಚೀನಾ, ಸ್ಕಾಟ್‌ಲ್ಯಾಂಡ್, ರಶ್ಯ, ಅಮೆರಿಕ, ಕೆನಡ, ಅಯರ್‌ಲ್ಯಾಂಡ್, ಮೆಕ್ಸಿಕೊ, ನಾರ್ವೆ, ಡೆನ್ಮಾರ್ಕ್, ಈಜಿಪ್ಟ್, ಟರ್ಕಿ ಮತ್ತು ಪೋಲ್ಯಾಂಡ್ ದೇಶಗಳ 40 ತಂಡಗಳ ವಿರುದ್ಧ ಭಾರತ ಸ್ಪರ್ಧೆಯಲ್ಲಿ ಸ್ಪರ್ಧಿಸಿತು.