×
Ad

ಯುವಜನತೆ ಭಾರತದಿಂದ ವಲಸೆ ಹೋಗಿ, ಹೋದವರು ವಾಪಸ್ ಬರಬೇಡಿ, ಇದು ನರಕ!

Update: 2016-07-01 21:20 IST

ತಮ್ಮ ವಿದ್ಯಾರ್ಥಿನಿ ರಿಚಾ ಸರಸ್ವತ್ ಫ್ರಾನ್ಸ್‌ನಲ್ಲಿ ಹೋಗಿ ನೆಲೆಸಲು ನಿರ್ಧರಿಸಿ ವಾಪಾಸು ಬರುವ ಇಚ್ಛೆಯಿಲ್ಲ ಎಂದು ತಿಳಿಸಿರುವುದನ್ನು ನ್ಯಾ. ಮಾರ್ಕಂಡೇಯ ಕಾಟ್ಜು ತಮ್ಮ ಫೇಸ್‌ಬುಕ್‌ನಲ್ಲಿ ಹೇಳಿದ್ದಾರೆ. ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ಅವರು ಈ ಸುದ್ದಿಯನ್ನು ತಿಳಿಸುವ ಜೊತೆಗೆ ಭಾರತ ಈಗ ಜೀವನ ನಡೆಸಲು ಸಾಧ್ಯವಾಗದ ದೇಶವಾಗುತ್ತಿರುವುದಕ್ಕೆ ಬಹಳ ಬೇಸರ ವ್ಯಕ್ತಪಡಿಸಿದ್ದಾರೆ. ನಾನು ಸುಪ್ರೀಂಕೋರ್ಟ್ ನ್ಯಾಯಾಧೀಶನಾಗಿದ್ದಾಗ ವಿದ್ಯಾರ್ಥಿಯಾಗಿ 2011ರಲ್ಲಿ ರಿಚಾ ನನ್ನ ಜೊತೆಗೆ ಕೆಲಸ ಮಾಡಿದ್ದರು. ಆಗ ಅವರು ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯ ವಿದ್ಯಾರ್ಥಿ. ಈಗ ರಿಚಾ ಫ್ರಾನ್ಸಿನ ಪ್ಯಾರಿಸ್‌ನಲ್ಲಿ ಬ್ಯುಸಿನೆಸ್ ಲಾ ಸ್ನಾತಕೋತ್ತರ ಪದವಿ ಓದುತ್ತಿದ್ದಾರೆ. ಇನ್ನೇನು ಆಕೆಯ ವಿದ್ಯಾಭ್ಯಾಸ ಮುಗಿಯಲಿದೆ. ಆದರೆ ಫ್ರಾನ್ಸಿನಲ್ಲೇ ಆಕೆಗೆ ಉತ್ತಮ ವೇತನದ ಜೊತೆಗೆ ಕೆಲಸವೂ ಸಿಗುತ್ತಿದೆ ಎಂದು ಕಾಟ್ಚು ಹೇಳಿದ್ದಾರೆ.

ರಿಚಾಳ ತಂದೆ ಪಾಟ್ನಾ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ ಮುಖ್ಯಸ್ಥರು ಮತ್ತು ಬಿಹಾರ ಲೋಕಸೇವಾ ಆಯೋಗದ ಮಾಜಿ ಸದಸ್ಯರೂ ಹೌದು. ರಿಚಾಳ ತಾಯಿ ಪಾಟ್ನಾ ಸರ್ಕಾರಿ ಹೈಸ್ಕೂಲ್ ಪ್ರಾಂಶುಪಾಲರು. ರಿಚಾ ಕಳೆದ 3 ವರ್ಷಗಳಿಂದ ಪ್ಯಾರಿಸಿನಲ್ಲಿದ್ದಾರೆ. ಆದರೆ ಆಕೆಗೆ ಭಾರತಕ್ಕೆ ಬಂದು ಶಾಶ್ವತವಾಗಿ ನೆಲೆಸುವ ಇಚ್ಛೆ ಇಲ್ಲ. ಇಲ್ಲಿ ಎಲ್ಲೆಲ್ಲೂ ಕೊಳೆ ಮತ್ತು ಧೂಳು, ಆಹಾರ ಮತ್ತು ನೀರು ಮಲಿನವಾಗಿದೆ. ಜಾತಿವಾದ ಮತ್ತು ಭ್ರಷ್ಟಾಚಾರ ವ್ಯಾಪಕವಾಗಿದೆ ಮತ್ತು ಜನರು ತಮ್ಮ ನಿಲುವುಗಳನ್ನು ಬೇರೆಯವರ ಮೇಲೆ ಹೇರುವುದಕ್ಕೆ ಕುಪ್ರಸಿದ್ಧರು ಎಂದು ರಿಚಾ ಕಾಟ್ಜು ಬಳಿ ಹೇಳಿರುವುದಾಗಿ ಅವರು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ.
ಕಾಟ್ಜು ತಮ್ಮ ವಿದ್ಯಾರ್ಥಿನಿಯ ನಿರ್ಧಾರವನ್ನು ಬೆಂಬಲಿಸಿದ್ದಾರೆ. ಅದಕ್ಕೆ ಅವರು ಕಾರಣವನ್ನೂ ತಮ್ಮ ಪೋಸ್ಟಲ್ಲಿ ವಿವರಿಸಿದ್ದಾರೆ. ಅವರ ಪ್ರಕಾರ ಈ ಜಗತ್ತು ಎರಡು ಭಾಗವಾಗಿದೆ. ಒಂದು ಅಭಿವೃದ್ಧಿ ಹೊಂದಿದ ದೇಶಗಳಾದ ಉತ್ತರ ಅಮೆರಿಕ, ಯುರೋಪ್, ಜಪಾನ್, ಚೀನಾ, ಆಸ್ಟ್ರೇಲಿಯ ಮತ್ತು ನ್ಯೂಜಿಲ್ಯಾಂಡ್ ಆಗಿದ್ದರೆ, ಮತ್ತೊಂದು ಅಭಿವೃದ್ಧಿ ಹೊಂದದ ಜಗತ್ತಿನಲ್ಲಿ ಭಾರತವಿದೆ. ಮೊದಲನೆಯದು ಸ್ವರ್ಗವಾದರೆ ಮತ್ತೊಂದು ನರಕ. ರಿಚಾ ಸ್ವರ್ಗದಿಂದ ನರಕಕ್ಕೆ ಏಕೆ ಬರಬೇಕು ಎಂದು ಕಾಟ್ಜು ಪ್ರಶ್ನಿಸಿದ್ದಾರೆ.
ಫ್ರಾನ್ಸಿನಲ್ಲಿ ಸ್ವರ್ಗದಲ್ಲಿ ರಿಚಾ ನೆಲೆಸಿದ್ದಾಳೆ ಮತ್ತು ದಿನ ದಿನಕ್ಕೂ ನರಕವಾಗುತ್ತಿರುವ ಭಾರತಕ್ಕೆ ವಾಪಾಸಾಗಬಾರದು. ಏರುತ್ತಿರುವ ಬೆಲೆ, ವಿಪರೀತ ನಿರುದ್ಯೋಗ, ಭ್ರಷ್ಟಾಚಾರ, ಜಾತೀವಾದ, ಅಗ್ಗದ ರಾಜಕೀಯ, ಮಾಲಿನ್ಯ ಮತ್ತು ಹಿಂದುಳಿದಿರುವುದು, ವ್ಯಾಪಕ ಜನರದು ಊಳಿಗಮಾನ್ಯ ಮನೋಭಾವವಾಗಿರುವ ಭಾರತಕ್ಕೆ ಆಕೆ ವಾಪಾಸಾಗುವ ಅಗತ್ಯವಿಲ್ಲ. ಯುರೋಪಿನ ಜೀವನಶೈಲಿಗೆ ಒಗ್ಗಿ ಹೋದ ಮೇಲೆ ಭಾರತಕ್ಕೆ ತಾನು ಹೊಂದಿಕೊಳ್ಳುವುದಿಲ್ಲ ಎಂದು ರಿಚಾ ಹೇಳಿದ್ದಾಳೆ. ನಾನು ಭಾರತದಲ್ಲಿ ನೆಲೆಸಿದ್ದರೂ ಇಲ್ಲಿಗೆ ಒಗ್ಗುವುದಿಲ್ಲ. ಮೂರ್ಖರು ಮತ್ತು ಹಿಂದುಳಿದ ಮನಸ್ಥಿತಿ ಹೊಂದಿರುವ ಜನರ ಜೊತೆಗೆ ಹೊಂದಿಕೊಳ್ಳಲೇ ನನಗೆ ಆಗದ ಕಾರಣ ಹೊರಗೆ ಹೋಗುವುದೇ ಕಡಿಮೆ. ಭಾರತದ ಜನರು ಬಹಳ ಸ್ವಾರ್ಥಿಗಳು ಮತ್ತು ಭಾರತದ ಸಮಾಜ ವ್ಯಾಪಕವಾಗಿ ವಾಣಿಜ್ಯೀಕರಣವಾಗಿ ಅಗ್ಗದ ಮೌಲ್ಯಗಳಿಂದ ತುಂಬಿದೆ. ಹೀಗಾಗಿ ಯುವ ಜನರು ಭಾರತದಿಂದ ವಲಸೆ ಹೋಗಿ ಎಂದೇ ನಾನು ಸಲಹೆ ನೀಡುತ್ತೇನೆ. ವಿದೇಶಕ್ಕೆ ಹೋಗಲು ಸಾಧ್ಯವಾದವರು ವಾಪಾಸು ಬರಬೇಡಿ ಎಂದೇ ಸಲಹೆ ನೀಡುವೆ ಎಂದು ಕಾಟ್ಜು ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.

ಕೃಪೆ: http://www.dnaindia.com/

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News