ಸಬ್ಸಿಡಿರಹಿತ ಎಲ್‌ಪಿಜಿ 11 ರೂ.ಅಗ್ಗ ವಿಮಾನ ಇಂಧನ ಶೇ.5.5ರಷ್ಟು ದುಬಾರಿ

Update: 2016-07-01 14:48 GMT

ಹೊಸದಿಲ್ಲಿ,ಜು.1: ಸರಕಾರಿ ಸ್ವಾಮ್ಯದ ತೈಲ ಮಾರಾಟ ಸಂಸ್ಥೆಗಳು ಶುಕ್ರವಾರ ವಿಮಾನ ಇಂಧನ(ಎಟಿಎಫ್)ದ ಬೆಲೆಯನ್ನು ಶೇ.5.5ರಷ್ಟು ಹೆಚ್ಚಿಸಿವೆ,ಇದೇ ವೇಳೆ ಸಬ್ಸಿಡಿರಹಿತ ಅಡುಗೆ ಅನಿಲದ ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ 11 ರೂ.ಕಡಿತಗೊಳಿಸಿವೆ. ಎಟಿಎಫ್ ಬೆಲೆಯಲ್ಲಿ ಸತತ ಐದನೇ ತಿಂಗಳು ಏರಿಕೆಯಾಗಿದೆ.
ದಿಲ್ಲಿಯಲ್ಲಿ ಎಟಿಎಫ್ ಬೆಲೆಯನ್ನು ಪ್ರತಿ ಕಿಲೋಲೀಟರ್‌ಗೆ 2,557.70 ರೂ.(ಶೇ.5.47)ಗಳಷ್ಟು ಹೆಚ್ಚಿಸಲಾಗಿದ್ದು, 49,287.18 ರೂ.ಗೆ ತಲುಪಿದೆ. ಮಾರ್ಚ್‌ನಿಂದೀಚಿಗೆ ಇದು ಸತತ ಐದನೇ ಏರಿಕೆಯಾಗಿದ್ದು,ಈ ಅವಧಿಯಲ್ಲಿ ಎಟಿಎಫ್ ಬೆಲೆ ಒಟ್ಟು ಶೇ.25ರಷ್ಟು ಹೆಚ್ಚಳವಾಗಿದೆ. ಇದು ಮೊದಲೇ ನಷ್ಟದಲ್ಲಿರುವ ವಿಮಾನಯಾನ ಸಂಸ್ಥೆಗಳ ಬವಣೆಯನ್ನು ಇನ್ನಷ್ಟು ಹೆಚ್ಚಿಸಿದೆ.
  ಇಷ್ಟಾದರೂ ಎಟಿಎಫ್ ಬೆಲೆ ಪೆಟ್ರೋಲ್ ಮತ್ತು ಡೀಸೆಲ್‌ಗಿಂತ ಕಡಿಮೆಯೇ ಇದೆ. ಸರಕಾರವು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆಯ ಲಾಭದ ಹೆಚ್ಚಿನ ಪಾಲನ್ನು ಪೆಟ್ರೋಲ್ ಮತ್ತು ಡೀಸೆಲ್ ಬಳಕೆದಾರರಿಗೆ ವರ್ಗಾಯಿಸದೆ ಅಬಕಾರಿ ಸುಂಕವನ್ನು ಹೆಚ್ಚಿಸುವ ಮೂಲಕ ತನ್ನ ಬೊಕ್ಕಸ್ಕಕೆ ಸೇರಿಸಿಕೊಂಡಿದ್ದು ಇದಕ್ಕೆ ಕಾರಣ. ದಿಲ್ಲಿಯಲ್ಲೀಗ ಪ್ರತಿ ಲೀ.ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಅನುಕ್ರಮವಾಗಿ 64.76 ರೂ. ಮತ್ತು 54.70 ರೂ. ಆಗಿದ್ದರೆ, ಎಟಿಎಫ್ 49.28 ರೂ.ಗೆ ದೊರೆಯುತ್ತದೆ.
ದಿಲ್ಲಿಯಲ್ಲಿ ಸಬ್ಸಿಡಿರಹಿತ ಎಲ್‌ಪಿಜಿ ಸಿಲಿಂಡರ್ ಬೆಲೆ ಈಗ 537.50 ರೂ.ಗೆ ಇಳಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News